ಸೋಮವಾರ, ಜೂನ್ 27, 2022
26 °C

ಕೊರೊನಾ ಸೇನಾನಿಗಳು 2021- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೊರೊನಾ ವಾರಿಯರ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆಯ ಗೋಡೆ ಮೇಲೆ ತೂಗುತ್ತಿದ್ದ ಹಳೆಯ ಕ್ಯಾಲೆಂಡರ್‌ ಬದಲಾಗಿದೆ. ಅದರ ಸ್ಥಳದಲ್ಲಿ 2021ರ ರಂಗುರಂಗಿನ ಹೊಸ ಕ್ಯಾಲೆಂಡರ್‌ ಬಂದು ಕೂತಿದೆ. ಬದುಕಿನ ಬಂಡಿ ಎಳೆಯುವ ಅಂಕಿಗಳ ಮೇಲೆ ಬಣ್ಣ ಮೆತ್ತಿಕೊಂಡಿದೆ. ಹೊಸ ವರ್ಷದ ಮೊದಲ ದಿನ ಸುಮ್ಮನೆ ಕುಳಿತು ಹಿಂದಿನ ವರ್ಷದತ್ತ ಒಮ್ಮೆ ಕಣ್ಣೋಟ ಬೀರಿದರೆ ನೆನಪುಗಳ ದೊಡ್ಡ ಸಂತೆಯ ಬಾಗಿಲು ತೆರೆದುಕೊಳ್ಳುತ್ತದೆ. ಆ ಸಂತೆಯಲ್ಲಿ ಹುಡುಕಿದರೆ ನಲಿವಿಗಿಂತ ನೋವಿನ ಮೂಟೆಗಳೇ ಹೆಚ್ಚು ಸಿಗುತ್ತವೆ.

ಎಲ್ಲರೂ ಕೋವಿಡ್ ಸಂಕಷ್ಟದ ಕುಲುಮೆಯಲ್ಲಿ ಬೇಯುತ್ತಿದ್ದೇವೆ. ಕೊರೊನಾ ತಂದಿತ್ತ ಸಂಕಷ್ಟದ ಹೊರೆಯನ್ನು ತುಸು ಇಳಿಸಿಕೊಂಡು ಹೊಸ ಭರವಸೆಯ ಹೆಜ್ಜೆಗಳನ್ನಿಡುತ್ತಾ ನೂತನ ವರ್ಷವನ್ನು ಬರಮಾಡಿಕೊಳ್ಳುವ ಹೊತ್ತು ಇದಾಗಿದೆ. ಈ ಸುಸಮಯವು ಸಕಾರಾತ್ಮಕ ಆಲೋಚನೆಗಳಿಗೆ ಸ್ಫೂರ್ತಿಯಾಗಲಿ ಎಂಬ ದೃಢ ಸಂಕಲ್ಪದೊಟ್ಟಿಗೆ ‘ಪ್ರಜಾವಾಣಿ’ ದಿಟ್ಟಹೆಜ್ಜೆ ಇಟ್ಟಿದೆ.

ಈ ಸಂಕಷ್ಟದಲ್ಲಿ ತಮ್ಮ ಅವಿರತ ಶ್ರಮದ ಮೂಲಕ ಜನರಿಗೆ ನೆರವಾದ ಸಾಧಕರನ್ನು ಪರಿಚಯಿಸುವ ಕೆಲಸ ಮಾಡಿದ್ದೇವೆ. ಹೊಸ ವರ್ಷದ ಹಾದಿಯಲ್ಲಿ ಇನ್ನಷ್ಟು ಮಂದಿಗೆ ಇದು ಪ್ರೇರಣೆಯಾಗಲಿ ಎಂಬುದೇ ನಮ್ಮ ಆಶಯ ಹಾಗೂ ಹಂಬಲ.

ಪ್ರಚಾರಕ್ಕೆ ಹಂಬಲಿಸಿದೇ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಇನ್ನೂ ಅನೇಕರೂ ನಮ್ಮ ನಡುವಿದ್ದಾರೆ. ಇಂತಹವರ ಸಂತತಿ ನೂರ್ಮಡಿಯಾಗಲಿ. ಇವರ ಅರ್ಪಣಾ ಮನೋಭಾವ ಹೊಸ ವರ್ಷದ ಹೊಸ್ತಿಲಲ್ಲಿ ಎಲ್ಲರಿಗೂ ಮಾದರಿಯಾಗಲಿ ಎಂಬ ಸದಾಶಯ ನಮ್ಮದು...

1. ಸಂಕಷ್ಟದ ವೇಳೆಯಲ್ಲೂ ಕಾರ್ಮಿಕರಿಗೆ ಊಟ ತಲುಪಿಸುವ ಕೆಲಸ


ಟಿ.ರಂಗಪ್ಪ

ಲಾಕ್‌ಡೌನ್ ಆರಂಭದ ದಿನಗಳಲ್ಲಿ ಯಾರೊಬ್ಬರು ಹೊರಗೆ ಬರದಂತೆ ಕಟ್ಟುನಿಟ್ಟಿನ ಶಿಸ್ತುಪಾಲನೆಯಾಗುವಂತೆ ಮಾಡುವುದು ಪೊಲೀಸರಿಗೆ ಅನಿವಾರ್ಯವಾಗಿತ್ತು. ಆದರೆ, ಇದೇ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು, ದಿನಗೂಲಿ ಕಾರ್ಮಿಕರು ದಿನನಿತ್ಯದ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಕಾನೂನು ಪಾಲನೆಯ ಜೊತೆಗೆ ಹಸಿವಿನಿಂದ ಯಾರೂ ಮಲಗಬಾರದು. ಅಲ್ಲದೆ ಹಸಿವಿನಿಂದ ಮಲಗಿದವರು ಪೊಲೀಸರಿಗೆ ಮೊದಲು ಹಿಡಿಶಾಪ ಹಾಕುವುದು. ಇಂತಹ ಕಷ್ಟಕರ ಸಮಯದಲ್ಲಿ ದಾನಿಗಳ ಹಾಗೂ ಕೆಲ ಸಂಘ–ಸಂಸ್ಥೆಗಳ ಸಹಕಾರದಿಂದ ದಿನಕ್ಕೆ ಎರಡು ಬಾರಿ ಊಟದ ಪೊಟ್ಟಣವನ್ನು ಕಾರ್ಮಿಕರು ವಾಸ ಮಾಡುತ್ತಿದ್ದ ಸ್ಥಳಕ್ಕೆ ತಲುಪಿಸುವ ಕೆಲಸವನ್ನು ತಮ್ಮ ದಿನನಿತ್ಯದ ಕಾನೂನು-ಸುವ್ಯವಸ್ಥೆ ಕೆಲಸದ ನಡುವೆಯೂ ಮಾಡಿದವರು ಟಿ. ರಂಗಪ್ಪ.

ಲಾಕ್‌ಡೌನ್‌ ಜಾರಿಯಾದ ಸುಮಾರು 20 ದಿನಗಳ ನಂತರ ರಾಜಕೀಯ ಪಕ್ಷಗಳ ಮುಖಂಡರು, ಸಂಘ–ಸಂಸ್ಥೆಗಳು ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲು ಆರಂಭಿಸಿದರು. ಜನರ ಹಸಿವಿನ ಬವಣೆ ತಕ್ಕಮಟ್ಟಿಗೆ ನೀಗಲು ಆರಂಭವಾದ ನಂತರವು ಸಹ ಲಾಕ್‌ಡೌನ್‌ ಸಂದರ್ಭದಲ್ಲಿ ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ, ಕಾರ್ಮಿಕರಿಗೆ ಅಷ್ಟಾಗಿ ತೊಂದರೆಯಾಗದಂತೆ ಸ್ಪಂದಿಸುವ ಮೂಲಕ ಲಾಕ್‌ಡೌನ್‌ ನಿರ್ಬಂಧಗಳನ್ನು ಜಾರಿ ಮಾಡಿದರು.

ಸದಾ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ ಕೊರೊನಾ ವಾರಿಯರ್ಸ್‌ ಆಗಿದ್ದಾರೆ ದೊಡ್ಡಬಳ್ಳಾಪುರದ ಡಿವೈಎಸ್‌ಪಿ.

2. ಕೊರೊನಾದಲ್ಲೂ ಮಾಹಿತಿ ಒಟ್ಟುಗೂಡಿಸಿದ ವೈದ್ಯ


ಡಾ.ಪರಮೇಶ್ವರ

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ವೈದ್ಯರ, ನರ್ಸಗಳ ಕೊರತೆ ಬಹಳ ವರ್ಷಗಳಿಂದಲೂ ಇದ್ದೇ ಇದೆ. ಹಾಗೆಯೇ ಕೋವಿಡ್-19 ಹಿನ್ನೆಲೆಯಲ್ಲಿ ಜಾರಿಯಾದ ಲಾಕ್‌ಡೌನ್‌ ಸಂದರ್ಭದಲ್ಲೂ ಇತ್ತು, ಈಗಲೂ ಇದೆ. ಈ ಎಲ್ಲಾ ಕೊರತೆಗಳ ನಡುವೆಯು ಸಹ ರೋಗಿಗಳಿಗೆ ತೊಂದರೆಯಾಗದಂತೆ ಕೆಲಸ ಮಾಡುವುದಕ್ಕಿಂತಲು ಎಲ್ಲರನ್ನು ಒಂದುಗೂಡಿಸಿಕೊಂಡು ಕೆಲಸ ಮಾಡುವುದು, ಮಾಡಿಸುವುದು ಒಂದು ರೀತಿಯ ಸಾಹಸವೇ ಸರಿ.

ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದ ಹಾಗೂ ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸ ಮಾಡುವುದು ಒಂದು ಕಡೆಯಾದರೆ ಸರ್ಕಾರ ಗಂಟೆಗೆ ಒಮ್ಮೆ ಕೇಳುತ್ತಿದ್ದ ತಾಲ್ಲೂಕಿನ ಮಾಹಿತಿ, ಅಂಕಿ–ಅಂಶಗಳನ್ನು ಒಟ್ಟುಗೂಡಿಸಿ ಸಮಯಕ್ಕೆ ಸರಿಯಾಗಿ ಕಳುಹಿಸುವುದು ಒಂದು ದೊಡ್ಡ ಸವಾಲಿನ ಕೆಲಸವೇ ಸರಿ. ಹಾಗೆಯೇ ಕೊರೊನಾ ಪ್ರಕರಣ ಹೆಚ್ಚಾದಾಗಲು ಎದೆಗುಂದದೆ ಕೆಲಸ ಮಾಡಿದವರಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಪರಮೇಶ್ವರ ಸಹ ಒಬ್ಬರಾಗಿದ್ದಾರೆ. ಕೆಲಸದ ನಡುವೆ ಸ್ವತಃ ಕೊರೊನಾ ಸೋಂಕಿಗೆ ಒಳಗಾಗಿದ್ದರೂ ಚಿಕಿತ್ಸೆ ಪಡೆಯುತ್ತಲೇ ಕ್ವಾರಂಟೈನ್‌ನಲ್ಲಿ ಇದ್ದುಕೊಂಡೆ ಸಕಾಲಕ್ಕೆ ಮಾಹಿತಿಗಳನ್ನು ನೀಡುತ್ತ ಮತ್ತೆ ಉದ್ಯೋಗಕ್ಕೆ ಮರಳಿದ್ದರು.

3. ಸೋಂಕಿತರಿಗೆ ಸೌಲಭ್ಯ ಕಲ್ಪಿಸುವ ಕರ್ತವ್ಯ


ಯು.ಆರ್. ರೇಖಾ

ಸತತ 18 ವರ್ಷಗಳಿಂದ ಐ.ಸಿ.ಟಿ.ಸಿ ಆಪ್ತ ಸಮಾಲೋಚನೆ ಹಾಗೂ ರಕ್ತ ಪರೀಕ್ಷಾ ಕೇಂದ್ರದಲ್ಲಿ (ಎಚ್.ಐ.ವಿ) ಕರ್ತವ್ಯ ನಿರ್ವಹಿಸುತ್ತಿದ್ದಾರೆ ದೇವನಹಳ್ಳಿ ತಾಲ್ಲೂಕು ಸರ್ಕಾರಿ ಸಮುದಾಯದ ಆರೋಗ್ಯ ಕೇಂದ್ರದ ಯು.ಆರ್. ರೇಖಾ.

‘ಕೊರೊನಾ ಬಗ್ಗೆ ಎಚ್ಚರಿಕೆ ವಹಿಸುವಂತೆ ಆದೇಶ ಬಂದ ನಂತರ ಬೇರೆಯವರಂತೆ ನನಗೇನು ಭಯ ಮತ್ತು ಅಚ್ಚರಿಯಾಗಲಿಲ್ಲ. ದಿನನಿತ್ಯ ಎಚ್.ಐ.ವಿ ಸೋಂಕಿತರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡುವ ನನಗೆ ಹಿರಿಯ ಅಧಿಕಾರಿಗಳು ಸೂಚಿಸಿದಂತೆ ವಿಮಾನ ನಿಲ್ದಾಣದಲ್ಲಿ ಕೋವಿಡ್ 19ರ ಪರೀಕ್ಷಾ ಕೇಂದ್ರದಲ್ಲಿ ಪಿಪಿಇ ಕಿಟ್ ಧರಿಸದೆ ಕರ್ತವ್ಯ ನಿರ್ವಹಿಸಿದ್ದೇನೆ. ಹಗಲು– ರಾತ್ರಿ ಪಾಳಿ ಇದ್ದರು ಕುಟುಂಬದಿಂದ ದೂರ ಉಳಿದು ಕರ್ತವ್ಯ ನಿರ್ವಹಿಸಬೇಕಾದ ಅನಿರ್ವಾಯ ಇತ್ತು. ಅದನ್ನು ಅಧಿಕಾರಿಗಳು ಮೆಚ್ಚುವಂತೆ ಮಾಡಿದೆ’ ಎನ್ನುತ್ತಾರೆ ರೇಖಾ.

‘ಕೊರೊನಾ ಸೋಂಕಿತರು, ಎಚ್.ಐ.ವಿ. ಸೋಂಕಿತರು ಎಂಬ ಭೇದ ತೋರದೆ ಆತ್ಮಸ್ಥೈರ್ಯ ತುಂಬುವ ಕೆಲಸ ಈಗಲೂ ಮಾಡುತ್ತಿದ್ದೇನೆ. ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಪ್ರಸ್ತುತ ಬೇರೆಯವರು ಅದರ ಜವಾಬ್ದಾರಿ ಹೊತ್ತಿದ್ದಾರೆ. ಎಚ್.ಐ.ವಿ.ಸೋಂಕಿತರಿಗೆ ಯಾವುದೇ ಕಾರಣಕ್ಕೂ ಕೊರೊನಾ ಸೋಂಕು ಬರಬಾರದು ಎಂದು ಕಟ್ಟೆಚ್ಚರ ವಹಿಸಿ ಕೊರೊನಾ ನಿಯಮ ಪಾಲಿಸುವಂತೆ ಪ್ರತಿನಿತ್ಯ ತಿಳಿಸುತ್ತಿದ್ದೆ. ನಾನು ಈಗ 40 ಎಚ್.ಐ.ವಿ ಸೋಂಕಿತರಿಗೆ ದಿನನಿತ್ಯ ಚಿಕಿತ್ಸೆಯ ಜೊತೆಗೆ ಆಪ್ತ ಸಮಾಲೋಚನೆ ನಡೆಸುತ್ತಿದ್ದೇನೆ’ ಎಂದು ಹೇಳಿದರು.

‘ಎಚ್.ಐ.ವಿ ಸೋಂಕಿತ 25 ಜನರಿಗೆ ಬ್ಯಾಂಕ್ ಸಾಲ, 25 ಮಹಿಳೆಯರಿಗೆ ಸ್ವಯಂ ಉದ್ಯೋಗ, 10 ಸೋಂಕಿತರಿಗೆ ವಸತಿ, ಸೋಂಕಿತರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ, ಪಡಿತರ ಕಾರ್ಡ್ ಸೇರಿದಂತೆ ಸರ್ಕಾರದಿಂದ ಸಿಗುವ ಪ್ರತಿಯೊಂದು ಅಗತ್ಯ ಸೌಲಭ್ಯಗಳನ್ನು ತಲುಪಿಸುತ್ತಿದ್ದೇನೆ. ಇದು ನನ್ನ ಕರ್ತವ್ಯ ಕೂಡ’ ಎನ್ನುವುದು ರೇಖಾ ಅವರ ಮಾತು.

4. ಕೂಲಿ ಕಾರ್ಮಿಕರಿಗೆ ಸಹಾಯಹಸ್ತ


ಟಿ.ಎಸ್.ಶಿವರಾಜ್

ಕಷ್ಟ-ಸುಖ ಯಾವುದೇ ಇರಲಿ ಎಲ್ಲದಕ್ಕು ತಾಲ್ಲೂಕು ಮಟ್ಟದಲ್ಲಿ ಹೊಣೆಗಾರರು ತಹಶೀಲ್ದಾರ್‌. ಎಲ್ಲೂ ಸಹ ಲೋಪವಾಗದಂತೆ ಈ ಹೊಣೆಗಾರಿಕೆಯನ್ನು ಅತ್ಯಂತ ಸಮರ್ಥವಾಗಿ, ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಸಮನ್ವಯಗೊಳಿಸಿಕೊಂಡು ಕೆಲಸ ಮಾಡುವ ಮೂಲಕ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಿದವರು ದೊಡ್ಡಬಳ್ಳಾಪುರ ತಾಲ್ಲೂಕಿನ ತಹಶೀಲ್ದಾರ್‌ ಟಿ.ಎಸ್‌. ಶಿವರಾಜ್‌.

ದಿನಗೂಲಿಗಾಗಿ ದೂರದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ತಾಲ್ಲೂಕಿಗೆ ಬಂದು ಲಾಕ್‌ಡೌನ್‌ ನಿಂದಾಗಿ ಇಲ್ಲಿಯೇ ಸಿಲುಕಿಕೊಂಡಿದ್ದ ಸುಮಾರು 80 ಜನ ಕಟ್ಟಡ ಕೂಲಿಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ನಗರದ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ವಸತಿ, ಊಟದ ಸೌಲಭ್ಯ ಕಲ್ಪಿಸಿಕೊಟ್ಟು ಅವರನ್ನು ನೋಡಿಕೊಂಡವರು
ಶಿವರಾಜ್‌.

ಈ ಎಲ್ಲಾ ಕಾರ್ಮಿರನ್ನು ಲಾಕ್‌ಡೌನ್‌ ತೆರವಾದ ನಂತರ ಸರ್ಕಾರಿ ಬಸ್‌ಗಳಲ್ಲಿ ಊರಿಗೆ ಕಳುಹಿಸಿಕೊಡುವ ಸಂದರ್ಭದಲ್ಲಿ ಕಾರ್ಮಿಕರ ಮಕ್ಕಳು ತಹಶೀಲ್ದಾರ್‌ ಶಿವರಾಜ್‌ ಅವರನ್ನು ತಬ್ಬಿಕೊಂಡು ಕಣ್ಣೀರಿಟ್ಟ ಸನ್ನಿವೇಶ ಸ್ಥಳದಲ್ಲಿದ್ದವರೆಲ್ಲರ ಕಣ್ಣುಗಳು ಹೊದ್ದೆಯಾಗುವಂತೆ ಮಾಡಿತ್ತು.

ಲಾಕ್‌ಡೌನ್‌ ಸಮಯದಲ್ಲೇ ಶಿವರಾಜ್ ಅವರ ಪತ್ನಿಗೆ ಮಗುವಿನ ಜನನ. ದಿನವಿಡೀ ಜನರ ನಡುವೆ ಇದ್ದು ಕೆಲಸ ಮಾಡಿ ಮನೆಗೆ ಹೋದರೆ ಎಲ್ಲಿ ತಾಯಿ, ಮಗುವಿಗೆ ಕೊರೊನಾ ಸೋಂಕು ಹರಡುತ್ತದೋ ಎನ್ನುವ ಭಯದಿಂದ ಊರಿಗೆ ಹೋಗದೆ ನಗರದ ಸರ್ಕಾರಿ ವಸತಿನಿಲಯದಲ್ಲೇ ಉಳಿದುಕೊಂಡು ಕೆಲಸ ಮಾಡಿದರು. ಮಗು ಜನಿಸಿದ ಸುಮಾರು ಎರಡು ತಿಂಗಳ ನಂತರ ಮನೆಗೆ ಭೇಟಿ ನೀಡಿ ಪತ್ನಿ, ಮಗುವನ್ನು ನೋಡಿ ಬಂದಿದ್ದರು.

ಕೋವಿಡ್‌-19 ಪ್ರಕರಣದ ಅಂಕಿ–ಅಂಶಗಳ ಕುರಿತು ಇಡೀ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಸಂಬಂಧಿಸಿದ ಮಾಹಿತಿಯನ್ನು ಇಂದಿಗೂ ವಾರ್ತಾ ಇಲಾಖೆಯಿಂದ ಬಿಡುಗಡೆಯಾಗುತ್ತಿದೆ. ಆದರೆ, ತಮ್ಮ ದಿನ ನಿತ್ಯದ ಆಡಳಿತದ ಕೆಲಸಗಳ ನಡುವೆಯೂ ತಾಲ್ಲೂಕಿನ ಯಾವ ಪ್ರದೇಶ, ಗ್ರಾಮದಲ್ಲಿ ಕೊರೊನಾ ಸೋಂಕಿತರು ಇದ್ದಾರೆ ಎನ್ನುವ ಮಾಹಿತಿಯು ಸೇರಿದಂತೆ ಎಲ್ಲಾ ಅಂಕಿ–ಅಂಶಗಳನ್ನು ಪ್ರತಿದಿನ ಸಂಜೆ 7 ಗಂಟೆಗೆ ತಪ್ಪದೇ ತಾಲ್ಲೂಕಿನ ಮಟ್ಟಿಗೆ ಪ್ರತ್ಯೇಕವಾಗಿ ಇಂದಿಗೂ ಮಾಧ್ಯಮಗಳಿಗೆ ನೀಡುತ್ತ ಬಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು