ವಿಜಯಪುರ(ದೇವನಹಳ್ಳಿ): ಭಾರತ್ ಮುಕ್ತಿ ಮೋರ್ಚಾ ಹಾಗೂ ಬಹುಜನ್ ಕ್ರಾಂತಿ ಮೋರ್ಚಾದಿಂದ ಮಾರ್ಚ್ 19ರಂದು ಬೆಳಿಗ್ಗೆ 10ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ರ‍್ಯಾಲಿ ಆಯೋಜಿಸಲಾಗಿದೆ. ಈ ರ‍್ಯಾಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ವಾಮನ್ ಮೆಶ್ರಮ್ ಭಾಗವಹಿಸಲಿದ್ದಾರೆ ಎಂದು ಭಾರತ್ ಮುಕ್ತಿ ಮೋರ್ಚಾದ ರಾಷ್ಟ್ರೀಯ ಪ್ರಚಾರಕ್ ಸುಧೀರ್ ನಾಗ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಷ್ಟದಲ್ಲಿದೆ. ಇವುಗಳನ್ನು ಉಳಿಸಲು ಪರಿವರ್ತನಾ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೊರಡುತ್ತಿದೆ. ಇದಕ್ಕಾಗಿ ದೇಶದ ಎಲ್ಲಾ ಬಹುಜನ ಸಮಾಜದ ಮುಖಂಡರು, ಬುದ್ಧಿಜೀವಿಗಳು, ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಕರು ಮತ್ತು ದೇಶದ ಎಲ್ಲಾ ಸಂಘಟನೆಗಳು ಸಹಕಾರ ನೀಡಬೇಕು ಎಂದು ಕೋರಿದರು.
ದೇಶದಲ್ಲಿ ಇವಿಎಂ ಯಂತ್ರಗಳ ಬದಲಿಗೆ ಬ್ಯಾಲೆಟ್ ಮೂಲಕ ಮತ ಚಲಾಯಿಸುವಂತಹ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ. ಈ ಕುರಿತು ಹಲವು ವರ್ಷದಿಂದ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.
2017ರ ಏಪ್ರಿಲ್ 24ರಂದು ಸುಪ್ರೀಂ ಕೋರ್ಟ್ ಇವಿಎಂ ಯಂತ್ರದ ವಿರುದ್ಧ ತೀರ್ಪು ನೀಡುವಾಗ ಪೇಪರ್ ಟ್ರಯಲ್ ಅಳವಡಿಸಿ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಪೇಪರ್ ಟ್ರಯಲ್ ಎದುರಿಸಲು, ಕಾಂಗ್ರೆಸ್-ಬಿಜೆಪಿ ಒಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಕಾಂಗ್ರೆಸ್ ಮತ್ತು ಬಿಜೆಪಿ ಈಗ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿವೆ ಎಂದು ದೂರಿದರು.
ಈ ಬಗ್ಗೆ ದೇಶದ ಜನತೆಗೆ ಮಾಹಿತಿ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಂದ ಇವಿಎಂನಿಂದಾಗಿ ದೇಶದಲ್ಲಿನ ಮೂಲನಿವಾಸಿಗಳು ಸೊರಗುತ್ತಿದ್ದಾರೆ. ಆದ್ದರಿಂದ ಬೃಹತ್ ರ‍್ಯಾಲಿ ಮೂಲಕ ಜನರನ್ನು ಸಂಘಟಿಸಲು ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಬುದ್ಧಿಸ್ಟ್ ಇಂಟರ್ ನ್ಯಾಷನಲ್ ನೆಟ್‌ವರ್ಕ್‌ನ ರಾಜ್ಯ ಘಟಕದ ಅಧ್ಯಕ್ಷ ಎಸ್. ಸಿದ್ಧಾರ್ಥ್, ರವೀಂದ್ರ ಮಾವಿ, ನಾರಾಯಣಪ್ಪ, ಸುಭ್ರಮಣಿ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.