ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆ ಬಗೆ ಹೂವಿನ ತಾಣ ಪಂಚಗಿರಿಯಲ್ಲಿ ಅಪರೂ‍‍ಪದ ಸಸ್ಯ ಸಂಕುಲಕ್ಕೆ ಧಕ್ಕೆ

ನಂದಿಗಿರಿ ಸಾಲಿನ ಹಸಿರು ಹೊದಿಕೆ ಪ್ರದೇಶ
Last Updated 5 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮಳೆಗಾಲ ಮಧ್ಯಭಾಗಕ್ಕೆ ಬಂದು ನಿಂತಿದ್ದೇವೆ. ಈ ಸಂದರ್ಭದಲ್ಲಿ ಪಂಚಗಿರಿ ಶ್ರೇಣಿಗಳಲ್ಲಿ ಒಂದಾಗಿರುವ ಚನ್ನಗಿರಿ ಅಥವಾ ಚನ್ನರಾಯಸ್ವಾಮಿಬೆಟ್ಟ ಹತ್ತಾರು ಬಗೆಯ ಹೂವು, ಸಸಿಗಳಿಗೆ ಜೀವಕಳೆ ತರುವುದರ ಮೂಲಕ ಇಡೀ ಬೆಟ್ಟಕ್ಕೆ ಹಸಿರು ಹೊದಿಕೆ ಹೊದಿಸಿ ಬಣ್ಣ ಬಣ್ಣದ ಹೂವುಗಳಿಂದ ಸಿಂಗರಾಗೊಂಡಿದೆ. ತರೇವಾರಿ ಕೀಟ, ಪಕ್ಷಿ ತನ್ನತ್ತ ಸೆಳೆದುಕೊಳ್ಳುವಂತೆ ಮಾಡಿದೆ. ಇಂತಹ ವೈವಿಧ್ಯಮ ಹೂವು ಕಣ್ತುಂಬಿಕೊಂಡು ಮನಸಾರೆ ಅನುಭವಿಸಲು ಚನ್ನಗಿರಿ ಬೆಟ್ಟಕ್ಕೆ ಹೋದರಷ್ಟೇ ಅಲ್ಲಿನ ಸೊಬಗು ಸವಿಯಲು ಸಾಧ್ಯ.

ನಂದಿಗಿರಿ ಸಾಲಿನ ಪಂಚಗಿರಿ (ನಂದಿಗಿರಿ,ಸ್ಕಂದಗಿರಿ, ದಿಬ್ಬಗಿರಿ, ಚನ್ನಗಿರಿ, ಬ್ರಹ್ಮಗಿರಿ) ಶ್ರೇಣಿಗಳಲ್ಲಿ ಒಂದಾಗಿರುವ ಚನ್ನರಾಯಸ್ವಾಮಿಬೆಟ್ಟ ಔಷಧ ಜಾತಿ ಸಸ್ಯ ವೈವಿಧ್ಯ ಹೊಂದಿರುವ ವಿಶಿಷ್ಟ ಬೆಟ್ಟವಾಗಿದೆ. ಇದಲ್ಲದೆ ಮಳೆಗಾಲದಲ್ಲಿ ಸಣ್ಣ ಪುಟ್ಟ ಝರಿ, ಕಿರು ಜಲಪಾತ ಹೊಂದಿರುವ ತಾಲ್ಲೂಕಿನ ಏಕೈಕ ಬೆಟ್ಟ ಎನ್ನುವ ಖ್ಯಾತಿ ಹೊಂದಿದೆ. ಇಲ್ಲಿನ ಔಷಧ ಸಸ್ಯಗಳ ಬೇರು, ಕಲ್ಲು ಬಂಡೆಗಳ ಸಂದಿಗಳಲ್ಲಿ ಹರಿದು ಬರುವ ನೀರು ಕುಡಿಯುವುದೇ ದೇಹಕ್ಕೆ ಉಲ್ಲಾಸ ಉಂಟು ಮಾಡುತ್ತದೆ.

ಮಳೆಗಾಲ ಎನ್ನುವುದು ಪಂಚಗಿರಿ ಶ್ರೇಣಿ ಬೆಟ್ಟಗಳಿಗೆ ಒಂದು ರೀತಿಯಲ್ಲಿ ಹಬ್ಬ ಇದ್ದಂತೆ. ಒಂದೊಂದು ಬೆಟ್ಟಗಳಲ್ಲೂ ಒಂದೊಂದು ಬಗೆಯ ಅನಾಮಧೇಯ ಹೂವು ಅರಳಿ ನಿಲ್ಲುತ್ತವೆ. ಸಸಿಗಳು ಚಿಗುರೊಡೆದು ನೆಳನಳಿಸುತ್ತವೆ. ಚನ್ನಗಿರಿ ಬೆಟ್ಟದಲ್ಲಿ ಬೇಸಿಗೆ ದಿನಗಳಲ್ಲಿ ರಾಜ್ಯದ ಕೆಲವೇ ಕೆಲವು ಬೆಟ್ಟಗಳಲ್ಲಿ ಮಾತ್ರ ಕಂಡು ಬರುವ ಜಾಲಾರಿ ಮರಗಳ ಹೂವು ಒಂದು ರೀತಿ ಮನಸೆಳೆದರೆ, ಮಳೆಗಾಲದಲ್ಲಿ ಪಾಪಸ್‌ಕಳ್ಳಿ, ಕಾಡುಮಲ್ಲಿಗೆ, ಗೌರಿ ಹೂವು, ಗಣಗಲ, ಕೀಟ ಭಕ್ಷಕ ಸಸ್ಯ ಸೇರಿದಂತೆ ಹತ್ತಾರು ಜಾತಿ ಹೂವು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಗೌರಿ (ಕರ್ನಾಟಕ ಫ್ಲವರ್‌) ಹೂರೆಕ್ಕೆ ಬಿಚ್ಚಿ ಅರಳುತ್ತದೆ. ಹಳದಿ, ಕೆಂಪು ಬಣ್ಣ ಹೊಂದಿರುವ ಈ ಹೂ ಕೋಳಿ ಹುಂಜದ ಜುಟ್ಟಿನಂತೆ ಕಾಣುತ್ತದೆ. ಹಸಿರು ಬಳ್ಳಿಯ ನಡುವೆ ಗೌರಿ ಹೂಬಣ್ಣದ ಲೈಟು ಬಿಟ್ಟಂತೆ ಬೆಳಗಿನ ಹಾಗೂ ಸಂಜೆ ಎಳೆ ಬಿಸಿಲಿನಲ್ಲಿ ಎದ್ದು ಕಾಣುತ್ತದೆ.

ಸಹಜವಾಗಿಯೇ ಯಾವುದೇ ಜಾತಿ ಮಲ್ಲಿಗೆ ಹೂ ಆಗಿದ್ದರು ಸುವಾಸನೆಗೆ ಹೆಸರುವಾಸಿ. ಅದೇ ರೀತಿ ಚನ್ನಗಿರಿ ಬೆಟ್ಟದ ಬೇಲಿಗಳ ಮಧ್ಯೆ ಹಾಗೂ ಕಲ್ಲು ಬಂಡೆ ನಡುವಿನ ಮಣ್ಣಿನ ದಿಬ್ಬಗಳಲ್ಲಿ ಬೆಳೆದು ನಿಂತಿರುವ ಹಚ್ಚ ಹಸಿರಿನ ಗಿಡದ ಮೇಲೆ ಮೊಸರು ಚೆಲ್ಲಿದಂತೆ ಕಂಡು ಬರುವ ಕಾಡುಮಲ್ಲಿಗೆ ಹೂ ತನ್ನದೇ ಆದ ವಿಶಿಷ್ಟ ಸುವಾಸನೆ ಹೊಂದಿದ್ದು ಬೆಳಗಿನ ವೇಳೆಯಲ್ಲಿ ಬೀಸುವ ತಣ್ಣನೆ ಗಾಳಿಗೆ ಸುಮಾರು ಒಂದು ಕಿ.ಮೀ ದೂರದವರೆಗೆ ತನ್ನ ಕಂಪು ಸೂಸುತ್ತದೆ.

ಚನ್ನಗಿರಿ ಬೆಟ್ಟದಲ್ಲಿ ಕಲ್ಲು ಬಂಡೆಗಳ ಮೇಲೆ ಮಣ್ಣು ಹಾಸು ಹೆಚ್ಚಾಗಿರುವುದರಿಂದ ಕುರುಚಲು ಜಾತಿ ಹುಲ್ಲು ಸಹಜವಾಗಿವೆ ಬೆಳೆಯುತ್ತದೆ. ಈ ಹುಲ್ಲು ಬೇಸಿಗೆಯಲ್ಲಿ ಒಣಗಿ ನಿಂತಿರುತ್ತದೆ. ಆದರೆ, ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಚಿಗುರೊಡೆಯುವುದರ ಜತೆಗೆ ಬೆಟ್ಟಕ್ಕೆ ಹುಲ್ಲು ಹೊದಿಕೆ ಹೊದಿಸಿ ಹೂವು ಮುಡಿದು ನಿಲ್ಲುತ್ತದೆ. ಜೇನುಹುಳು, ಸಣ್ಣಪುಟ್ಟ ಚಿಟ್ಟೆಗಳು, ರಸ ಹೀರುವ ನೊಣ ಹೂವುಗಳನ್ನು ಮುತ್ತಿಕೊಳ್ಳುತ್ತವೆ.

ಜೂನ್‌ ತಿಂಗಳಿಂದ ಡಿಸೆಂಬರ್‌ ಅಂತ್ಯದವರೆಗೂ ಈ ಬೆಟ್ಟದ ಸಾಲಿನಲ್ಲಿ ಮಳೆ ಬೀಳುವುದರಿಂದ ಕಲ್ಲು ಬಂಡೆಗಳ ಸೀಳಿನಲ್ಲಿ ಹಾಗೂ ಬಂಡೆಗಳ ಮೇಲೆ ನಾನಾ ಜಾತಿ ಪಾಪಸ್‌ ಕಳ್ಳಿ ಬೆಳೆಯುತ್ತವೆ. ಇವುಗಳಲ್ಲಿ ಕೆಲ ಜಾತಿ ಪಾಪಸ್‌ ಕಳ್ಳಿ ಗಿಡಗಳು ಬಿಸಿಲಿನ ತಾಪ ಹೆಚ್ಚಾಗಿರುವ ಸಮಯದಲ್ಲಿ ಮಾತ್ರ ಹೂಬಿಟ್ಟರೆ, ಕೆಲವು ಮಳೆ ಆರಂಭವಾದ ನಂತರ ಬಣ್ಣ ಬಣ್ಣದ ಹೂವು ಅರಳಿಸಿಕೊಂಡು ನಿಂತು ನೋಡುಗರನ್ನು ಆಕರ್ಷಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT