ಬುಧವಾರ, ಮಾರ್ಚ್ 29, 2023
32 °C
ಅನಕ್ಷರಸ್ಥ ಬಂದಿಗಳಿಗೆ ಸಾಕ್ಷರತಾ ಕಾರ್ಯಕ್ರಮ

ಬೆಂಗಳೂರು ಗ್ರಾಮಾಂತರ: ಅಪರಾಧ ಕೃತ್ಯ ನೆನೆದು ಕಣ್ಣೀರಿಟ್ಟ ಕೈದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ನಾವು ಮಾಡಿದ ಅಪರಾಧ ಅಷ್ಟು ಘೋರವಾಗಿರುತ್ತೇ. ನಮ್ಮ ಸುಂದರವಾದ ಜೀವನ ಹೇಗೆ ಕಮರಿಹೋಗುತ್ತದೆ ಎನ್ನುವ ಪರಿಜ್ಞಾನ ನಮಗೆ ಜೈಲಿಗೆ ಬಂದ ಮೇಲೆ ಬಂದಿದೆ. ನಾವು ಎಂಥಾ ತಪ್ಪು ಮಾಡಿಬಿಟ್ಟಿದ್ದೇವೆ’ ಎಂದು ಕೈದಿಗಳು ಕಣ್ಣೀರು ಹಾಕಿದ ಪ್ರಸಂಗ ಕೋರಮಂಗಲ ಬಯಲು ಕಾರಾಗೃಹದಲ್ಲಿ ನಡೆಯಿತು.

ಹೋಬಳಿಯ ಕೋರಮಂಗಲದ ಬಯಲು ಕಾರಾಗೃಹದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಹಾಗೂ ಬಯಲು ಕಾರಾಗೃಹದ ಆಶ್ರಯದಲ್ಲಿ ಆಯೋಜಿಸಿದ್ದ ‘ಕಲಿಕೆಯಿಂದ ಬದಲಾವಣೆ’ ಕಾರಾಗೃಹದ ಅನಕ್ಷರಸ್ಥರ ಬಂದಿಗಳಿಗೆ ಮೂಲ ಸಾಕ್ಷರತಾ ಕಾರ್ಯಕ್ರಮದಲ್ಲಿ ಕೈದಿಗಳು ತಮ್ಮ ಜೀವನವನ್ನು ನೆನೆದುಕೊಂಡು ಜಿಲ್ಲಾಧಿಕಾರಿ ಮುಂದೆ ಕಣ್ಣೀರು ಹಾಕಿದರು.

‘ನಮಗೆ ಬಿಡುಗಡೆಯ ಭಾಗ್ಯ ಕರುಣಿಸಿಕೊಡಿ. ನಮ್ಮ ತಪ್ಪು ನಮಗೆ ಅರಿವಾಗಿದೆ. ಎಲ್ಲರಂತೆ ನಾವೂ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕು ಕಟ್ಟಿಕೊಳ್ಳುತ್ತೇವೆ’ ಎಂದರು.

ಇದನ್ನೂ ಓದಿ: ಕೈದಿಗಳಿಗಾಗಿ ‘ನವಚೇತನ ಸಾಕ್ಷರತೆ’: ನ. 1ಕ್ಕೆ ಚಾಲನೆ ​

‘ನಾನು ತುಂಬಾ ಕುಡಿಯುತ್ತಿದ್ದೆ. ನನ್ನ ಹೆಂಡತಿ ಬುದ್ಧಿವಾದ ಹೇಳುತ್ತಿದ್ದಳು. ಆದರೆ, ನಾನು ಕೋಪದಲ್ಲಿ ಆಕೆಯನ್ನು ಕೊಲೆ ಮಾಡಿಬಿಟ್ಟೆ. ಈಗ ಜೈಲಿನಲ್ಲಿರುವಾಗ ನನ್ನ ಕುಟುಂಬ, ನನ್ನ ಜೀವನ ಎಲ್ಲವೂ ಅರ್ಥವಾಗುತ್ತಿದೆ’ ಎಂದರು.

‘ಇಲ್ಲಿ ಪ್ರತಿ ನಿತ್ಯ ಧ್ಯಾನ ಮಾಡಿಸುತ್ತಾರೆ. ಧ್ಯಾನದಿಂದ ಸಾಕಷ್ಟು ಬದಲಾವಣೆಯಾಗಿದ್ದೇನೆ. ನಾನು ಬಿಡುಗಡೆಯಾಗಿ ಹೋದ ನಂತರ ನಮ್ಮೂರಿನ ಜನತೆಯನ್ನೂ ಪರಿವರ್ತನೆ ಮಾಡ್ತೇನೆ. ನನ್ನ ತಾಯಿಯನ್ನು ನೋಡಬೇಕು ಸರ್, ದಯಮಾಡಿ, ವ್ಯವಸ್ಥೆ ಮಾಡಿಕೊಡಿ’ ಎಂದು ಬಂದಿ ಮಂಜುನಾಯ್ಕ್ ಕಣ್ಣೀರು ಹಾಕಿದರು.

ಈ ವೇಳೆ ಒಳಿತು ಮಾಡು ಮನಸಾ ಇರೋದು ಮೂರು ದಿವಸ ಹಾಡು ಹಾಡಿ ರಂಜಿಸಿದರು.

ಕೆಲವು ಬಂದಿಗಳು ತಾವು ಮಾಡಿರುವ ಅಪರಾಧಗಳು ಕುರಿತು ವಿವರಿಸುತ್ತಾ, ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಟ್ಟರು. ಜೈಲಿನಿಂದ ಬಿಡುಗಡೆಯಾಗಿ ಹೋದ ನಂತರ ಸಮಾಜದಲ್ಲಿನ ಜನರು ಬಂದಿಗಳನ್ನು ಹೇಗೆ ನೋಡ್ತಾರೆ, ಸಮಾಜದಲ್ಲಿ ಹೇಗೆ ಜೀವನ ರೂಪಿಸಿಕೊಳ್ಳಬಹುದು ಎನ್ನುವ ಕುರಿತು ಕಿರು ನಾಟಕದ ಮೂಲಕ ಪ್ರದರ್ಶನ ಮಾಡಿದರು.

ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಮಾತನಾಡಿ, ‘ಅಪರಾಧ ಕೃತ್ಯಗಳು ಆಕಸ್ಮಿಕವಾಗಿ ನಡೆದುಹೋಗುತ್ತವೆ. ಗ್ರಾಮಾಂತರ ಪ್ರದೇಶಗಳಲ್ಲಿ ಪೊಲೀಸ್ ಠಾಣೆಗೆ ಹೋಗಿ ಒಂದು ಸಣ್ಣ ದೂರು ಕೊಟ್ಟರೂ ಅದನ್ನು ಪ್ರತಿಷ್ಠೆಗೆ ತೆಗೆದುಕೊಳ್ಳುವುದರಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ ಎಂದರು.

ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಮುಂದಾಗಬೇಕು. ಬಂದಿಗಳನ್ನು ಭೇಟಿಯಾಗಲಿಕ್ಕಾಗಿ ಕುಟುಂಬಸ್ಥರು ಅವರ ಊರುಗಳಿಂದ ಬರಬೇಕಾಗಿತ್ತು. ಈಗ ತಂತ್ರಜ್ಞಾನ ಮುಂದುವರಿದಿದ್ದು, ವಿಡಿಯೊ ಮೂಲಕವೇ ಅವರ ಕುಟುಂಬದವರನ್ನು ಮಾತನಾಡಿಸುವಂತಹ ವ್ಯವಸ್ಥೆ ಮಾಡಿಸಬೇಕು  ಎಂದರು.

‘ಬಂದಿಗಳಲ್ಲಿ ಸಾಕಷ್ಟು ಮಂದಿ ಅನಕ್ಷರಸ್ಥರು ಇರುತ್ತಾರೆ. ಅವರಿಗೆ ಅಕ್ಷರ ಜ್ಞಾನದ ಜೊತೆಗೆ ಸಮಾಜದಲ್ಲಿ ನಡೆಯುವಂತಹ ಘಟನೆಗಳ ಕುರಿತು ತಿಳಿವಳಿಕೆ ಮೂಡಿಸಲು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಿಂದ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್ ಮಾತನಾಡಿ, ಕಲಿಕೆಯೆಂಬುದು ಕೇವಲ ಸಹಿ ಮಾಡಲಿಕ್ಕೆ ಸೀಮಿತವಾಗಬಾರದು. ಕಲಿಕೆಯಿಂದ ಕಲೆ, ಸಾಹಿತ್ಯ, ಸಂಸ್ಕೃತಿಯ ಪರಿಚಯವಾಗುತ್ತದೆ ಎಂದರು.

ಬಂದಿಗಳು ಎನ್ನುವ ಭಾವನೆಯನ್ನು ಬಿಟ್ಟು ವಿದ್ಯಾಭ್ಯಾಸ ಕಲಿಯಬೇಕು. ಮತ್ತೊಬ್ಬರಿಗೆ ದಾರಿದೀಪವಾಗಬೇಕು. ಅಪರಾಧಗಳು ಆಕಸ್ಮಿಕವಾಗಿ ನಡೆಯುತ್ತವೆ. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗುವುದು ಬೇಡ ಎಂದು ಸಲಹೆ ನೀಡಿದರು.

ವಕೀಲ ಧರ್ಮಪುರ ಮುನಿಯಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ನೆರವು ಸಿಗುತ್ತದೆ. ಎಲ್ಲರೂ ಇದರ ಸದುಪಯೋಗ ಮಾಡಿಕೊಳ್ಳಬೇಕು. ಯಾರೂ ಕೂಡಾ ಕಾನೂನು ಚೌಕಟ್ಟನ್ನು ಮೀರಿ ನಡೆಯಬಾರದು ಎಂದರು.

ಡಿವೈಎಸ್ಪಿ ಕೆ.ಎಸ್. ನಾಗರಾಜ್, ಡಿಡಿಪಿಐ ಗಂಗಮಾರೇಗೌಡ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿದರು.

ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ ಕೆ.ಎನ್., ರಾಜ್ಯ ಲೋಕ ಶಿಕ್ಷಣ ನಿರ್ದೇಶನಾಲಯದ ಲೆಕ್ಕ ಪರಿಶೋಧನಾಧಿಕಾರಿ ಶಕೀಲಾ ಯಾಸ್ಮಿನ್, ಬಯಲು ಬಂದೀಖಾನೆಯ ಅಧೀಕ್ಷಕ ಮಲ್ಲಿಕಾರ್ಜುನ್ ಶಿಮಾಳಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು