ಶುಕ್ರವಾರ, ಜನವರಿ 24, 2020
16 °C

ರಾಣಿ ವೃತ್ತ ಮರು ಸ್ಥಾಪನೆಗೆ ಮನವಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ನಗರದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಂದಿ ಬೆಟ್ಟದ ರಸ್ತೆಗೆ ಮಾರ್ಗಸೂಚಿಯಾಗಿದ್ದ ರಾಣಿ ವೃತ್ತವನ್ನು ಮರು ಸ್ಥಾಪಿಸುವಂತೆ ಪ್ರಗತಿ ಸಂಘಟನೆಗಳು ಪುರಸಭೆ ಮುಖ್ಯಾಧಿಕಾರಿ ಹನುಮಂತೆಗೌಡಗೆ ಮನವಿ ಪತ್ರ ಸಲ್ಲಿಸಿದರು.

ಇತಿಹಾಸ ಸಂಶೋಧಕ ಬಿ.ಜಿ ಗುರುಸಿದ್ದಯ್ಯ ಮಾತನಾಡಿ, 1961ರಲ್ಲಿ ಎಜಿಜಬೆತ್ ರಾಣಿ ನಂದಿ ಬೆಟ್ಟಕ್ಕೆ ಭೇಟಿ ನೀಡಿ ಒಂದು ವಾರ ಕಾಲ ವಾಸ್ತವ್ಯ ಹೂಡಿದ್ದರು. ಆಗ ಇಲ್ಲಿನ ನಂದಿ ಕ್ರಾಸ್ ಬಳಿ ಸ್ಥಳೀಯರೊಂದಿಗೆ ಬೆರತು ತಮ್ಮ ಅಭಿಮಾನ ತೋರಿಸಿ ಸ್ಥಳೀಯರಿಂದ ಸನ್ಮಾನ ಸ್ವೀಕರಿಸಿದ್ದರು. ಅಂದಿನಿಂದ ವೃತ್ತವನ್ನು ರಾಣಿ ಸರ್ಕಲ್ ಎಂದು ಕರೆಯಲಾಗುತ್ತಿದೆ ಎಂದರು.

ನಂತರ ಭಾರತದ ಪ್ರಧಾನಿಯಾಗಿದ್ದ ದಿವಂಗತ ರಾಜೀವ್ ಗಾಂಧಿ 1986 ನ.16 ಮತ್ತು 17 ರಂದು ನಂದಿ ಬೆಟ್ಟದಲ್ಲಿ ನಡೆದ ಸಾರ್ಕ್ ಶೃಂಗ ಸಭೆಗೆ ಬಂದಿದ್ದರು. ಆಗ ರಾಣಿ ವೃತ್ತ ನವೀಕರಿಸಿ ನಾಮಕರಣ ಮಾಡಲಾಗಿತ್ತು. ಬಳಿಕ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಎರಡು ಕಡೆಯಿಂದ ನಂದಿಬೆಟ್ಟಕ್ಕೆ 22. ಕಿ.ಮೀ. ಮಾರ್ಗಸೂಚಿ ಕಟ್ಟಡ ನಿರ್ಮಿಸಿ ಅದರ ಮೇಲೆ ನಂದಿ ವಿಗ್ರಹ ಪ್ರತಿಷ್ಠಾಪಿಸಲಾಗಿತ್ತು ಎಂದು ವಿವರಿಸಿದರು.

‘ಆದೇ ಮಾದರಿಯಲ್ಲಿ ವೃತ್ತ ಮರು ಪ್ರತಿಷ್ಠಾಪಿಸಬೇಕು ಎಂಬುದು ನಮ್ಮ ಒತ್ತಾಯ’ ಎಂದು ಹೇಳಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಡಾ.ಸರ್ವಪಲ್ಲಿ ರಾಧಾಕೃಷ್ಣನ್‌, ಸಿ.ವಿ.ರಾಮನ್, ಸರ್.ಎಂ.ವಿಶ್ವೇಶ್ವರಯ್ಯ, ವಿ.ವಿ. ಗಿರಿ ಸೇರಿ ಹಲವಾರು ಗಣ್ಯರು ನಂದಿಬೆಟ್ಟದಲ್ಲಿ ತಮ್ಮ ಹೆಜ್ಜೆಯನ್ನಿಟ್ಟು ಪ್ರಕೃತಿ ಸೌಂದರ್ಯದ ಸೊಬಗನ್ನು ಸವಿದಿದ್ದಾರೆ. ಅಂತಹ ಬೆಟ್ಟದ ಸೊಬಗಿಗೆ ಮಾರ್ಗಸೂಚಿ ವೃತ್ತ ಮರು ಸ್ಥಾಪನೆ ಸ್ಥಳೀಯ ಜನ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕರ್ತವ್ಯ ಎಂದು ಹೇಳಿದರು.

ಪ್ರಾಂತ ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಎನ್.ವೀರಣ್ಣ ಮಾತನಾಡಿ, ರಾಜ್ಯಕ್ಕೆ ನಂದಿ ಬೆಟ್ಟ ಒಂದು ಪ್ರಕೃತಿಯ ಕೊಡುಗೆ. ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಹರಿದು ಬರುತ್ತಿದೆ. ಇದಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಯಾವ ಉದ್ದೇಶದಿಂದ ನಂದಿ ಪ್ರತಿಮೆ ತೆರವುಗೊಳಿಸಿದರು ಎಂಬುದು ಪ್ರಶ್ನಾರ್ಹ. ಪ್ರತಿಮೆ ಸ್ಥಾಪಿಸಿ ವೃತ್ತದ ಸುತ್ತ ಅಲಂಕಾರಿಕ ಹೂಗಿಡಗಳನ್ನು ಬೆಳೆಸಬೇಕು. ನಂದಿ ಬೆಟ್ಟದ ಪ್ರವೇಶ ದ್ವಾರ ರಸ್ತೆಗೆ ಬೃಹತ್ ಕಮಾನು ನಿರ್ಮಾಣ ಮಾಡಬೇಕು. ನಂದಿ ಬೆಟ್ಟದಲ್ಲಿರುವ ಜೀವ ವೈವಿಧ್ಯ ತಾಣ ಮತ್ತು ಐತಿಹಾಸಿಕ ಕುರುಹುಗಳ ಬಗ್ಗೆ ಬರಹಗಳ ಫಲಕ ಅಳವಡಿಸಬೇಕು. ಪ್ರವಾಸೋಧ್ಯಮ ಇಲಾಖೆ ಇದರ ಬಗ್ಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು. ಪ್ರಗತಿಪರ ಸಂಘಟನೆಗಳ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು