ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತಿಬೆಲೆ ಮುಖ್ಯರಸ್ತೆ: ಸಂಚಾರಕ್ಕೆ ಸಂಚಕಾರ

ಗುಂಡಿ ಮುಚ್ಚಲು ಅಧಿಕಾರಶಾಹಿ ನಿರ್ಲಕ್ಷ್ಯ l ತ್ವರಿತವಾಗಿ ಡಾಂಬರೀಕರಣಕ್ಕೆ ವಾಹನ ಸವಾರರ ಒತ್ತಾಯ
Last Updated 26 ಮೇ 2022, 3:37 IST
ಅಕ್ಷರ ಗಾತ್ರ

ಆನೇಕಲ್:ತಾಲ್ಲೂಕಿನ ಅತ್ತಿಬೆಲೆ-ಟಿವಿಎಸ್‌ ಮುಖ್ಯರಸ್ತೆಯು ತೀವ್ರ ಹದಗೆಟ್ಟಿದ್ದು, ಈ ರಸ್ತೆಯಲ್ಲಿ ಸಂಚರಿಸಲುಹರಸಾಹಸ ಪಡುವಂತಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರು ಪರ್ಯಾಯ ಮಾರ್ಗಗಳ ಮೂಲಕ ತಮ್ಮ ಗ್ರಾಮಗಳಿಗೆ ತೆರಳುವ ಪರಿಸ್ಥಿತಿ
ನಿರ್ಮಾಣವಾಗಿದೆ.

ರಸ್ತೆಗಳೆಂದರೆ ಸುಗಮ ಸಂಚಾರಕ್ಕೆ ಪೂರಕವಾಗಿರಬೇಕು. ಆದರೆ, ಅತ್ತಿಬೆಲೆಯ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಇದೇ ಪರಿಸ್ಥಿತಿಯಿದೆ. ಜನರು ರಸ್ತೆ ಅಭಿವೃದ್ಧಿಯಾಗುತ್ತದೆ ಎಂದು ಆಸೆಗಣ್ಣಿನಿಂದ ಕಾಯುತ್ತಲೇ ಇದ್ದಾರೆ. ಆದರೆ, ಕಾಮಗಾರಿ ಮಾತ್ರ ಪೂರ್ಣವಾಗಿಲ್ಲ. ಜನರಿಗೆ ನಿತ್ಯ ನರಕಯಾತನೆಯಾಗಿದೆ.

ಅತ್ತಿಬೆಲೆ ತಮಿಳುನಾಡಿನ ಗಡಿಭಾಗವಾಗಿದ್ದು, ಕೈಗಾರಿಕಾ ಪ್ರದೇಶವಾಗಿದೆ. ಹಲವಾರು ಶಾಲಾ, ಕಾಲೇಜುಗಳಿವೆ. ತಮಿಳುನಾಡಿನ ಜನರು ಆನೇಕಲ್‌, ಸರ್ಜಾಪುರ ಕಡೆಗೆ, ಇಲ್ಲಿನ ಜನರು ಹೊಸೂರು ಕೈಗಾರಿಕಾ ಪ್ರದೇಶದ ಕಡೆಗೆ ಹೋಗಲು ಇದೇ ರಸ್ತೆ ಬಳಸಬೇಕು. ಆದರೆ, ಮೂರು ಕಿ.ಮೀಗೂ ಹೆಚ್ಚು ದೂರ ರಸ್ತೆಯಲ್ಲಿ ಸಾಗಬೇಕಾದರೆ ಅರ್ಧ ತಾಸಿಗೂ ಹೆಚ್ಚು ಸಮಯ
ಹಿಡಿಯುತ್ತದೆ.

ಹೆಚ್ಚಾದ ಅಪಘಾತಗಳು: ಟಿವಿಎಸ್‌ ಕ್ರಾಸ್‌-ಅತ್ತಿಬೆಲೆ ರಸ್ತೆಯಲ್ಲಿ ದೂಳು, ಗುಂಡಿಗಳದ್ದೇ ಕಾರುಬಾರು. ಹೆಚ್ಚು ವಾಹನಗಳು ಸಂಚರಿಸುವುದರಿಂದ ದೂಳು ತುಂಬಿದ್ದು ದ್ವಿಚಕ್ರವಾಹನ ಸವಾರರಿಗೆ ಗುಂಡಿಗಳು ಕಾಣುವುದಿಲ್ಲ. ಮುಂದೆ ಬರುವ ವಾಹನಗಳು ಕಾಣದೇ ಅಪಘಾತಗಳು ಸಂಭವಿಸುತ್ತಿವೆ. ಮಳೆ ಬಂದಾಗ ರಸ್ತೆ ಗುಂಡಿಗಳಲ್ಲಿ ನೀರು ತುಂಬಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ.

ಟಿವಿಎಸ್‌ ಕ್ರಾಸ್‌ನಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ನಡೆಯುತ್ತಿರುವ ಮೇಲ್ಸೇತುವೆ ನಿರ್ಮಾಣ ಕಾರ್ಯ ಆಮೆಗತಿದಲ್ಲಿ ಸಾಗಿದೆ. ಕಳೆದ ಎರಡು ವರ್ಷದ ಹಿಂದೆ ಪ್ರಾರಂಭವಾದ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ. ಈ ಕಾಮಗಾರಿಯ ನೆಪದಲ್ಲಿ ರಸ್ತೆ ಅಭಿವೃದ್ಧಿಯನ್ನೂ ಮಾಡಿಲ್ಲ ಎಂಬುದು ಜನರ
ದೂರು.

ತಮಿಳುನಾಡಿನ ಸಂಪರ್ಕ ರಸ್ತೆಯಾದ ಅತ್ತಿಬೆಲೆ -ಬಳ್ಳೂರು- ಟಿವಿಎಸ್‌ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಲಾರಿಗಳು ಸಂಚರಿಸುತ್ತವೆ. ವಾಹನಗಳ ಸಂಚಾರ ದಟ್ಟಣೆ ಹೆಚ್ಚಿದೆ. ಆದರೆ, ಅತ್ತಿಬೆಲೆಯ ಟಿವಿಎಸ್‌ ಕ್ರಾಸ್‌ ಸರ್ಕಲ್‌ಗೆ ಬರುತ್ತಿದ್ದಂತೆಯೇ ಜನರು ಪ್ರಾಣವನ್ನು ಕೈಯಲ್ಲಿಡಿದು ಸಾಗಬೇಕಾದ ಪರಿಸ್ಥಿತಿ ಉಂಟಾಗಿದೆ. ದ್ವಿಚಕ್ರವಾಹನಗಳ ಸವಾರರಿಗೆ ಈ ಭಾಗದಲ್ಲಿ ಭಾರಿ ಗಾತ್ರದ ವಾಹನಗಳು ದ್ವಿಚಕ್ರವಾಹನಗಳ ಸಮೀಪವೇ ಬರುತ್ತವೆ. ಪಕ್ಕದಲ್ಲಿ ಗುಂಡಿಗಳಿದ್ದಾಗ ವಾಹನಗಳಿಂದ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ.

ಆನೇಕಲ್‌ನಿಂದ ಟಿವಿಎಸ್‌ ಕ್ರಾಸ್‌ವರೆಗೆ ಉತ್ತಮ ರಸ್ತೆಯಿದೆ. ಇಲ್ಲಿಗೆ ಬರುತ್ತಿದ್ದಂತೆಯೇ ಹಾಳಾದ ರಸ್ತೆ, ಗುಂಡಿ ಬಿದ್ದಿರುವ ರಸ್ತೆ ಕೈಬೀಸಿ ಕರೆಯುತ್ತದೆ. ವಾಹನ ಸವಾರರು ಹಿಡಿಶಾಪ ಹಾಕುತ್ತಲೇ ಪ್ರತಿದಿನ ಸಂಚರಿಸುತ್ತಾರೆ. ಆದರೆ, ಕಾಮಗಾರಿ ನಡೆಸುವವರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಆಮೆಗತಿದಲ್ಲಿ ಸಾಗುತ್ತಾರೆ.

‘ಅತ್ತಿಬೆಲೆ ರಸ್ತೆಯಲ್ಲಿ ಸಂಚರಿಸಿದರೆ ಅಪಾಯವೆಂಬ ಭಯದಿಂದ ದ್ವಿಚಕ್ರವಾಹನ ಸವಾರರು ಅತ್ತಿಬೆಲೆಯಿಂದ ಭಕ್ತಿಪುರ ಮಾರ್ಗವಾಗಿ ದಾಸನಪುರ, ಬಳ್ಳೂರು ಗ್ರಾಮಗಳಿಗೆ ಸಂಚರಿಸುತ್ತಾರೆ’ ಎಂದು ದಾಸನಪುರ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ಹೇಳಿದರು.

ರಸ್ತೆ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಮೇಲ್ಸೇತುವೆ ಕಾಮಗಾರಿಯ ನೆಪ ಹೇಳಿ ಜನರನ್ನು ಪರದಾಡಿಸುವುದು ಸರಿಯಲ್ಲ. ಕೂಡಲೇ, ಅಭಿವೃದ್ಧಿಗೆ ಕ್ರಮವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT