ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖ’

ಮಹಂತಿನಮಠದ ಧರ್ಮಸಂಸ್ಥೆ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ
Last Updated 21 ಸೆಪ್ಟೆಂಬರ್ 2019, 13:35 IST
ಅಕ್ಷರ ಗಾತ್ರ

ವಿಜಯಪುರ: ‘ಒಂದು ದೇಶದ ನಿರಂತರ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು’ ಎಂದು ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ಮುರಳೀಧರ್ ಹೇಳಿದರು.

ಇಲ್ಲಿನ ಗಾಂಧಿ ಚೌಕದಲ್ಲಿರುವ ಮಹಂತಿನಮಠದ ಧರ್ಮಸಂಸ್ಥೆ ಸಭಾಂಗಣದಲ್ಲಿ ಶಿಕ್ಷಕಿ ಮಾಲಾಮಹೇಶ್ ಅವರನ್ನು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸನ್ಮಾನಿಸಿ ಅವರು ಮಾತನಾಡಿದರು.

‘ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹಿಳೆಯ ಶಕ್ತಿ ಮತ್ತು ಆಕೆಯ ಪ್ರಾವೀಣ್ಯತೆ, ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಂಡಾಗ ಅಗಾಧ ವ್ಯತ್ಯಾಸ ಕಾಣಬಹುದಾಗಿದೆ. ಒಂದು ವೇಳೆ ಮಹಿಳೆಯನ್ನು ನಿರ್ಲಕ್ಷಿಸಿದ್ದಾದರೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಅರ್ಧದಷ್ಟು ಮಾನವ ಸಂಪನ್ಮೂಲವನ್ನು ಕಳೆದುಕೊಂಡಂತಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದು ಸಲಹೆ ನೀಡಿದರು.

ನಿರ್ದೇಶಕಿ ಭಾರತಿ ಪ್ರಭುದೇವ್ ಮಾತನಾಡಿ, ‘ಅಭಿವೃದ್ಧಿಯಲ್ಲಿ ಮಹಿಳೆಯನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವಿಧೇಯ ಯತ್ನ ನಡೆಯಬೇಕಿದೆ. ಅದಕ್ಕೆ ಪೂರಕವಾಗಿ ಅವರಿಗೆ ಶಿಕ್ಷಣ ಕೊಟ್ಟು, ಜಾಗೃತಗೊಳಿಸಿ, ರಕ್ಷಣೆ ನೀಡಬೇಕು’ ಎಂದು ಹೇಳಿದರು.

ಶಿಕ್ಷಕಿ ಮಾಲಾ ಮಹೇಶ್ ಮಾತನಾಡಿ, ‘ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ. ದೇಶದ ಸಂಸ್ಕೃತಿ-ಪರಂಪರೆ ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದು ಮಕ್ಕಳನ್ನು ಉತ್ತಮ ಸಂಸ್ಕಾರವಂತರನ್ನಾಗಿ ರೂಪಿಸುವ ಹೊಣೆಗಾರಿಕೆಯೂ ಇದೆ’ ಎಂದರು.

ಮುಖಂಡ ಸಿ.ಬಸಪ್ಪ ಮಾತನಾಡಿ, ‘ಮಹಿಳೆಯರು ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕು. ಮಹಿಳೆಯರು ತಾವು ಪುರುಷರಿಗೆ ಸಮಾನವೆಂಬ ಭಾವನೆ ಬೆಳೆಸಿಕೊಂಡು ಉತ್ತಮ ಗುರಿ, ಸಾಧನೆಯತ್ತ ಗಮನ ಹರಿಸಬೇಕು’ ಎಂದರು.

‘ಇಂದಿನ ವೈಜ್ಞಾನಿಕ ಯುಗದಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂಚೂಣಿ ಪಾತ್ರ ವಹಿಸುತ್ತಿದ್ದಾರೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಪ್ರತಿಯೊಬ್ಬರೂ ಸಾಮಾಜಿಕ ಜವಾಬ್ದಾರಿ ತೋರಬೇಕು. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಸಮಾಜಮುಖಿ ಕೆಲಸ ಮಾಡಬೇಕು. ಯುವಕರು ಲವಲವಿಕೆಯಿಂದ ಇದ್ದು ನಿರಂತರ ಚಿಂತನೆ ಮಾಡಬೇಕು’ ಎಂದು ಸಲಹೆ ನೀಡಿದರು.

ನಗರ್ತ ಮಹಿಳಾ ಸಂಘದ ಉಪಾಧ್ಯಕ್ಷೆ ರೂಪಾಭಾಸ್ಕರ್, ಕಾರ್ಯದರ್ಶಿ ದೀಪಾ ಮುರಳೀಧರ್, ವೀಣಾ ನಟಶೇಖರ್, ಭಾರತಿ ಶಿವಪ್ರಸಾದ್, ಚಂದ್ರಕಲಾ ರುದ್ರಮೂರ್ತಿ, ಮಾಲತಿ ಆನಂದ್, ಚಂಪಕವಲ್ಲಿ ನಾಗರಾಜ್, ಮಾಣಿಕ್ಯ ನಂಜಣ್ಣ, ಮುಖಂಡ ಪಿ.ಚಂದ್ರಪ್ಪ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT