ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 838 ಕೋಟಿ ಕಾಮಗಾರಿ ಅವ್ಯವಹಾರ ಆರೋಪ

ಆನೇಕಲ್: 5,700 ಪುಟಗಳ ದಾಖಲೆ ಬಿಡುಗಡೆ
Last Updated 24 ಡಿಸೆಂಬರ್ 2020, 19:48 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನಲ್ಲಿ ರಸ್ತೆಗಳ ಅಭಿವೃದ್ಧಿ, ಚರಂಡಿ, ಕೆರೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸುಮಾರು ₹ 838 ಕೋಟಿ ಬಿಡುಗಡೆಯಾಗಿದೆ. ಈ ಕಾಮಗಾರಿಗಳ ಪೈಕಿ ಶೇಕಡ 25ರಷ್ಟು ಕಾಮಗಾರಿಯೂ ನಡೆದಿಲ್ಲ. ಸರ್ಕಾರದಿಂದ ಬಿಡುಗಡೆಯಾದ ಹಣವನ್ನು ಸ್ಥಳೀಯ ಶಾಸಕರ ಹಿಂಬಾಲಕರು, ಗುತ್ತಿಗೆದಾರರು ಮತ್ತು ಅಧಿಕಾರಿಗಳು ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಆರೋಪಿಸಿದರು.

ತಾಲ್ಲೂಕಿನ ಚಂದಾಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಅವ್ಯವಹಾರ ಸಂಬಂಧ ಸುಮಾರು 5,700 ಪುಟಗಳ ದಾಖಲೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಆನೇಕಲ್‌ ಯೋಜನಾ ಪ್ರಾಧಿಕಾರದಿಂದ 2014-15ರಿಂದ 2019-20ರ ಅವಧಿಯಲ್ಲಿ ಒಟ್ಟು ₹ 576.57 ಕೋಟಿ ಅನುದಾನ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾಗಿದೆ. ಇಷ್ಟೊಂದು ಬೃಹತ್‌ ಪ್ರಮಾಣದ ಹಣ ವಾಸ್ತವವಾಗಿ ವೆಚ್ಚವಾಗಿದ್ದರೆ ರಸ್ತೆಗಳು ಸಿಂಗಾಪುರದ ರಸ್ತೆಗಳಂತೆ ಕಂಗೊಳಿಸಬೇಕಾಗಿತ್ತು. 227 ತಾಲ್ಲೂಕುಗಳ ಪೈಕಿ ಮಾದರಿ ತಾಲ್ಲೂಕಾಗಬೇಕಾಗಿತ್ತು. ಆದರೆ, ಪ್ರಾಧಿಕಾರದ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.

ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದಾಗಿ ಹೇಳುವ ಅಧಿಕಾರಿಗಳು ಗುಣಮಟ್ಟ ನಿಯಂತ್ರಣ ಇಲಾಖೆಯಿಂದ ಯಾವುದೇ ಕಾಮಗಾರಿಗೂ ದೃಢೀಕರಣ ಪತ್ರ ಪಡೆದಿಲ್ಲ. ಶೇಕಡ 75ರಷ್ಟು ಅನುದಾನ ದೋಚಲಾಗಿದೆ ಎಂದು ವಿವರಿಸಿದರು.

ತಾಲ್ಲೂಕಿನ 69 ಕೆರೆಗಳಿಗೆ ನೀರು ತುಂಬುವ ಸುಮಾರು ₹ 260.61ಕೋಟಿ ಮೊತ್ತದ ಕಾಮಗಾರಿಗಳಲ್ಲೂ ಅವ್ಯವಹಾರ ನಡೆದಿದೆ. ಟೆಂಡರ್‌ ಪಡೆದಿರುವ ಮೇಘ ಎಂಜಿನಿಯರಿಂಗ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಸಂಸ್ಥೆಯು ಟೆಂಡರ್‌ ನಿಯಮದಂತೆ ಮಳೆಗಾಲವೂ ಸೇರಿದಂತೆ 15 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ, 41 ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ದೂರಿದರು.

ಅತ್ತಿಬೆಲೆ ಮಂಡಲ ಬಿಜೆಪಿ ಅಧ್ಯಕ್ಷ ಎಸ್‌.ಆರ್‌.ಟಿ. ಅಶೋಕ್‌, ಮುಖಂಡ ಎನ್‌. ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT