ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಜೋಳಕ್ಕೆ ರಬ್ಬರ್‌ ಹುಳು ಬಾಧೆ

ಕ್ರಿಮಿನಾಶಕ ಸಿಂಪಡಣೆಯ ಅನಿವಾರ್ಯತೆಯಲ್ಲಿ ರೈತರು
Last Updated 13 ಜೂನ್ 2020, 14:14 IST
ಅಕ್ಷರ ಗಾತ್ರ

ವಿಜಯಪುರ: ಜಾನುವಾರಿನ ಮೇವಿಗೆಬೆಳೆಯಲಾಗುವ ಜೋಳದ ಬೆಳೆಗೂ ರಬ್ಬರ್ ಹುಳು ಕಾಟ ಆರಂಭವಾಗಿದೆ. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಕಟಾವು ಹಂತಕ್ಕೆ ಬಂದಿರುವ ಜೋಳದ ಗಿಡಗಳಲ್ಲಿಹುಳು ಕಾಣಿಸಿಕೊಂಡಿದ್ದು, ಅದನ್ನು ನಾಶ ಪಡಿಸಲು ಕ್ರಿಮಿನಾಶಕ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.

ರಬ್ಬರ್ ಹುಳುಗಳು ದ್ವಿದಳ ಧಾನ್ಯದ ಬೆಳೆಗಳು, ಮೇವಿನ ಬೆಳೆಗಳ ಮೇಲೂ ದಾಳಿ ಮಾಡಿ ಬೆಳೆಗಳನ್ನು ನಾಶಪಡಿಸುತ್ತದೆ. ಮೊದಲು ಮುಸುಕಿನ ಜೋಳದಲ್ಲಿ ಮಾತ್ರ ಕಂಡು ಬರುತ್ತಿದ್ದವು. ಇದೀಗ ಎಲ್ಲ ಬೆಳೆಗಳಿಗೂ ಇವು ಬಾಧೆ ನೀಡುತ್ತಿವೆ. ಪ್ರಥಮ ಹಂತದಲ್ಲಿ ಮರಿ ಹುಳುಗಳು ಸಾಮೂಹಿಕವಾಗಿದ್ದು, ಎಲೆಗಳ ‘ಹರಿತ್ತು’ ಕೊರೆದು ತಿನ್ನುತ್ತಿವೆ. ಇದರಿಂದ ಎಲೆಗಳ ಮೇಲೆ ಪಾರದರ್ಶಕ ಪದರ ಕಾಣಿಸಿಕೊಳ್ಳುತ್ತಿದೆ.

‘ಸಸಿಗಳು ಬೆಳೆದಂತೆಲ್ಲಾ ಹುಳುಗಳು ಗಿಡಗಳಿಗೆ ಹರಡಿ ಜೋಳದ ಸುಳಿಯಲ್ಲಿ ಉಳಿದುಕೊಂಡು ಎಲೆಗಳನ್ನು ತಿಂದು ಹಾಕುತ್ತವೆ. ಕೀಟದಿಂದ ಹಾನಿಗೊಳಗಾದ ಎಲೆಗಳಲ್ಲಿ ಸಾಲಾಗಿ ಉದ್ದನೆ ರಂಧ್ರ ಕಂಡು ಬರುತ್ತಿವೆ’ ಎಂದು ರೈತ ತಿಮ್ಮಹಳ್ಳಿ ನಾಗೇಶ್ ಅಳಲು ತೋಡಿಕೊಂಡರು.

ರೈತ ಮುನಿಶಾಮರೆಡ್ಡಿ ಮಾತನಾಡಿ, ತರಕಾರಿ ಬೆಳೆಗಳು ಮತ್ತು ಹಣ್ಣಿನ ಬೆಳೆಗಳ ಮೇಲೆ ಕೆಲವೊಮ್ಮೆ ಮಾತ್ರ ದಾಳಿ ನಡೆಸುತ್ತವೆ. ಸೈನಿಕ ಹುಳು ಅಥವಾ ರಬ್ಬರ್ ಹುಳು ಅಮೆರಿಕದಿಂದ ಆಫ್ರಿಕಾ ಮೂಲಕ ಭಾರತಕ್ಕೆ ಬಂದಿದೆ. ಈ ಲದ್ದಿಹುಳು ಆಹಾರ ಖಾಲಿಯಾದ ತಕ್ಷಣ ಅನ್ವೇಷಣೆ ಆರಂಭಿಸುತ್ತದೆ. ಬಹು ಬೆಳೆ ಭಕ್ಷಕ ಕೀಟವಾಗಿದ್ದು, ಆಕ್ರಮಣಕಾರಿ ಪ್ರವೃತ್ತಿ ಹೊಂದಿದೆ. ಈ ಕೀಟಗಳು ಆಹಾರ ಅನ್ವೇಷಣೆಯಲ್ಲಿ ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಹಾರುತ್ತವೆ ಎಂದು ವಿವರಿಸಿದರು.

ಕೀಟ ಹೆಚ್ಚಾಗಿ 40ರಿಂದ 50 ದಿನದ ಒಳಗೆ ಪ್ರವೇಶಿಸಿ ಕಾಳು ತಿಂದು ನಾಶಪಡಿಸುತ್ತವೆ. ತೋಟಗಳಲ್ಲಿಯೇ ಹಿಕ್ಕೆ ಹಾಕುತ್ತವೆ. ತೆನೆ ತುದಿಯಲ್ಲಿ ಮೊದಲು ಆಹಾರ ಸೇವಿಸುತ್ತವೆ. ಹುಳುಗಳು ಸಂಜೆ ಹೊತ್ತು ಹೆಚ್ಚಾಗಿ ಹೊರಬರುವುದರಿಂದ ಸಂಜೆ ಹೊತ್ತು ಮಾತ್ರ ಕೀಟ ನಾಶಕ ಸಿಂಪಡಿಸಬೇಕು ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯ ಅಧಿಕಾರಿ ಆದರ್ಶ್ ಮಾತನಾಡಿ, ಸೈನಿಕ ಹುಳುಗಳು ಚಿಟ್ಟೆಯಾಗಿ ಒಂದು ರಾತ್ರಿಗೆ 40 ಕಿ.ಮೀ ದೂರ ಹೋಗುತ್ತವೆ. ಹೋಗುವಾಗ ಮೊಟ್ಟೆಗಳನ್ನು ಇಟ್ಟುಕೊಂಡು ಹೋಗುತ್ತಿರುತ್ತವೆ. ರೈತರು, ಈ ಸೈನಿಕ ಹುಳವನ್ನು ನಾಶಪಡಿಸಬೇಕಾದರೆ ಸೂಕ್ತ ಕೀಟನಾಶಕ ಬಳಸಬೇಕು ಎಂದರು.

ಹತೋಟಿಗೆ ಸೈಯಂತ್ರನಿಲಿಪೊಲ್‌, ಥಯೋ ಮೆಥಕ್ಸಾಮ್‌ 6 ಮಿ.ಲೀ. ಅನ್ನು 4 ಮಿ.ಲೀ. ನೀರು ಬೆರೆಸಿ ಪ್ರತಿ ಕಿಲೋಗ್ರಾಂ ಬೀಜಕ್ಕೆ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಬೇವಿನ ಬೀಜದ ಕಷಾಯವನ್ನು ಶೇ. 5ರಂತೆ ಅಥವಾ ಅಜಾಡಿರೆಕ್ಟಿನ್‌ 10,000 ಪಿಪಿಎಂನ 2 ಮಿ.ಲೀಯನ್ನು ಒಂದು ಲೀಟರ್‌ ನೀರಿಗೆ ಮಿಶ್ರಣ ಮಾಡಬೇಕು. ಸುಳಿಯಲ್ಲಿ ಸಿಂಪಡಣೆ ಮಾಡುವುದರಿಂದ ಮೊಟ್ಟೆ ಮತ್ತು ಮರಿಹುಳು ನಾಶಪಡಿಸಬಹುದು. ಎಮಾಮೆಕ್ಟಿನ್‌ ಬೆಂಜೋಯೇಟ್‌ 5 ಮಿ.ಲೀಯನ್ನು ಒಂದು ಲೀಟರ್‌ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT