ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಜನಪದ ಕಲೆ ಪರಿಚಯಿಸಿ: ಚಿತ್ರ ನಟಿ ಸುಮನ್ ನಗರ್‌ಕರ್

ಶ್ರೀಅರವಿಂದ ವಿದ್ಯಾ ಸಂಸ್ಥೆ ವಾರ್ಷಿಕೋತ್ಸವ, ಸಂಕ್ರಾಂತಿ ಸಂಭ್ರಮ
Last Updated 19 ಜನವರಿ 2020, 14:10 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರೀಕರಣ ಹಾಗೂ ಆಧುನಿಕ ಪ್ರಭಾವದಿಂದ ಜನಪದ ಕಲೆ ಮರೆಯಾಗುತ್ತಿವೆ. ಪೋಷಕರು ಮಕ್ಕಳಿಗೆ ಜಾನಪದ ಕಲೆಯ ಮಹತ್ವವನ್ನು ತಿಳಿಸಬೇಕು ಎಂದು ಚಿತ್ರ ನಟಿ ಸುಮನ್ ನಗರ್‌ಕರ್ ಹೇಳಿದರು.

ನಗರದ ಶ್ರೀಅರವಿಂದ ವಿದ್ಯಾಸಂಸ್ಥೆ ಆಶ್ರಯದಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಸಂಕ್ರಾಂತಿ ಸಂಭ್ರಮ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೊಡ್ಡಬಳ್ಳಾಪುರ ಜಾನಪದ ಕಲೆಗೆ ತವರೂರು ಆಗಿದೆ ಎಂದು ನನಗೆ ತಿಳಿದಿದೆ. ಶಾಲೆಗಳಲ್ಲಿ ಜಾನಪದ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ. ಶಿಕ್ಷಣದೊಂದಿಗೆ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳಿಸುವ ವೇದಿಕೆ ಕಲ್ಪಿಸಿ ಶಾಲೆಗಳು ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆಯನ್ನು ಉತ್ತೇಜಿಸಬೇಕು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಕೆ.ಎಂ.ಹನುಮಂತರಾಯಪ್ಪ, ‘ಶಿಕ್ಷಣ ಎಲ್ಲರಿಗೂ ಅತ್ಯಗತ್ಯ. ಅದರ ಮಹತ್ವವನ್ನು ಎಲ್ಲರೂ ಅರಿಯಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರವೂ ಮಹತ್ವದ್ದಾಗಿದೆ. ಬಡವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಅರವಿಂದ ವಿದ್ಯಾ ಸಂಸ್ಥೆಯ ಕಾರ್ಯ ಅಭಿನಂದನೀಯ’ ಎಂದರು.

ಬೆಂಗಳೂರು ವಕೀಲರ ಸಂಫದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ‘ಸಂವಿಧಾನ ಕೇವಲ ಒಂದು ಧರ್ಮಕ್ಕೆ ಸೇರಿದ್ದು ಎಂದು ಕೆಲವರು ದೇಶದಲ್ಲಿ ಅಶಾಂತಿ ಮೂಡಿಸುತ್ತಿರುವುದು ವಿಷಾದದ ಸಂಗತಿ. ರಾಜಕೀಯ ಪಕ್ಷಗಳು ತಮ್ಮ ಕಾರ್ಯಕ್ರಮಗಳಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬಾರದು’ ಎಂದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಎನ್.ಪ್ರಭುದೇವ್ ಮಾತನಾಡಿ, ‘ನಮ್ಮ ಸಂಸ್ಥೆಯ ಬೆಳವಣಿಗೆಗೆ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜನ್ನು ಸ್ಥಾಪನೆ ಮಾಡಲು ಉದ್ದೇಶಿಸಿದ್ದು, ಪೋಷಕರ ಸಹಕಾರ ಅಗತ್ಯ’ ಎಂದರು.

ಡಿ.ಇಡಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಕ್ರೀಡಾ ಚಟುವಟಿಕೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ, ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಮಿತಿ ಸದಸ್ಯ ಡಾ.ಎಚ್.ಜಿ.ವಿಜಯಕುಮಾರ್, ಅರವಿಂದ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಲಕ್ಷ್ಮೀನರಸಿಂಹ, ಸಹ ಕಾರ್ಯದರ್ಶಿ ಕೆ.ಸಿ.ಸರಸ್ವತಮ್ಮ, ಖಜಾಂಚಿ ಡಿ.ಕೆ.ವೆಂಕಪ್ಪ, ನಿರ್ದೇಶಕರಾದ ಯಶೋಧರ, ಶೈಕ್ಷಣಿಕ ಸಲಹೆಗಾರ ಸಿ.ರಾಮಯ್ಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT