ದೇವನಹಳ್ಳಿ: ‘ಶಾಲಾ ಆಡಳಿತ ಮಂಡಳಿಗಳು ಶಿಕ್ಷಣ ಇಲಾಖೆ ಮತ್ತು ಪೋಷಕರ ನಡುವೆ ಸೇತುವೆಯಾಗಿ ಕೆಲಸ ಮಾಡಲು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ’ ಎಂದು ಸಂಘದ ನಿರ್ದೇಶಕ ಕೆ.ಶ್ರೀನಿವಾಸ್ ಹೇಳಿದರು.
ಇಲ್ಲಿನ ಅನಂತ ವಿದ್ಯಾನಿಕೇತನ ಶಾಲಾ ಆವರಣದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದ ವತಿಯಿಂದ ನೂತನ ಪದಾಧಿಕಾರಿಗಳ ನೇಮಕ ಮತ್ತು ಶಾಲಾ ಆಡಳಿತ ಮಂಡಳಿಗಳ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಹಾಗೂ ಉತ್ತಮ ಫಲಿತಾಂಶ ಪಡೆಯಲು ಶ್ರಮಿಸಿದ ಡಿಡಿಪಿಐ ಮತ್ತು ಬಿಇಒಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿರ್ದೇಶಕ ರಾಮಚಂದ್ರೇಗೌಡ ಮಾತನಾಡಿ, ‘ಕೋವಿಡ್–19 ಸೋಂಕಿನ ಪರಿಣಾಮ ಶಾಲಾ ಆಡಳಿತ ಮಂಡಳಿಗಳ ಪರಿಸ್ಥಿತಿ ಶೋಚನೀಯವಾಗಿದೆ. 2020ರ ಮಾರ್ಚ್‍ನಲ್ಲಿ ವಸೂಲಿಯಾಗಬೇಕಿದ್ದ ಶುಲ್ಕ ಪೊಷಕರು ಪಾವತಿಸಿಲ್ಲ. ಅರ್ಧ ವಾರ್ಷಿಕ ಕಳೆದರೂ ಪ್ರಸ್ತುತ ದಾಖಲಾತಿಗೆ ಇಲಾಖೆ ಈ ತಿಂಗಳು ಅವಕಾಶ ನೀಡಿದೆ. ಶುಲ್ಕವಿಲ್ಲದೆ ಶಿಕ್ಷಕರಿಗೆ ವೇತನ ಪಾವತಿಸಿಲ್ಲ’ ಎಂದರು.
ಸಂಘದ ನೂತನ ಉಪಾಧ‍್ಯಕ್ಷ ಧನಂಜಯ ಮಾತನಾಡಿ, ‘ಗ್ರಾಮಾಂತರ ಜಿಲ್ಲೆಯಲ್ಲಿ ಕನಿಷ್ಠ ಒಂದು ಮಗುವಿಗೆ ₹ 30 ಸಾವಿರಕ್ಕಿಂತ ಹೆಚ್ಚು ಶುಲ್ಕ ಪಡೆಯುತ್ತಿಲ್ಲ. ಒಂದೊಂದು ಶಾಲೆಗೆ ₹ 10ರಿಂದ 15 ಲಕ್ಷ, ಕಳೆದ ವರ್ಷದ ಶುಲ್ಕ ಬಾಕಿಯಿದೆ. ಸರ್ಕಾರ ಆರ್.ಟಿ.ಇ ಯಡಿ ಮಕ್ಕಳ ದಾಖಲಾತಿ ಮಾಡಿಕೊಂಡ ಶಾಲೆ ಈವರೆಗೆ 275 ಕೋಟಿ ಬಿಡುಗಡೆ ಮಾಡಿದೆ. ಎರಡನೇ ಹಂತದ ಪ್ರೋತ್ಸಾಹ ಅನುದಾನ ಬಿಡುಗಡೆಯಾಗಿಲ್ಲ’ ಎಂದು ಹೇಳಿದರು.
ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಗಂಗಾ ಮಾರೇಗೌಡ ಮಾತನಾಡಿ, ‘ಆರ್‌ಟಿಇ ಶಿಕ್ಷಣ ಅಡಿಯಲ್ಲಿನ ಸರ್ಕಾರದ ಎರಡನೇ ಕಂತಿನ ಅನುದಾನ ತ್ವರಿತವಾಗಿ ಬಿಡುಗಡೆಯಾಗಲಿದೆ. ವರ್ಗಾವಣೆ ಪ್ರಮಾಣ ಪತ್ರ ಖಾಸಗಿ ಶಾಲೆಯಿಂದ ಮತ್ತೊಂದು ಖಾಸಗಿ ಶಾಲೆಗೆ ಪ್ರವೇಶ ಪಡೆಯಲು ಪೊಷಕರು ಇಚ್ಚಿಸಿದರೆ ಎರಡು ಶಾಲಾ ಅಡಳಿತ ಮಂಡಳಿಗಳು ಚರ್ಚಿಸಿ ತೀರ್ಮಾನ ಮಾಡಿಕೊಳ್ಳಬೇಕು. ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪೂರ್ವ ಪ್ರಾಥಮಿಕ ಶಾಲಾ ಹಂತದಿಂದ ದಾಖಲಾತಿ ಮಾಡಿಕೊಂಡು ಬಂದ ನಂತರ 9ನೇ ತರಗತಿಯಿಂದ 10ನೇ ತರಗತಿಗೆ ತೇರ್ಗಡೆಗೊಳಿಸಿ ಕಲಿಕೆಯಿಂದ ಹಿಂದುಳಿದಿದ್ದಾರೆ ಎಂದು ಪೊಷಕರನ್ನು ಕರೆಯಿಸಿ ವರ್ಗಾವಣೆ ಪ್ರಮಾಣ ಪತ್ರ ನೀಡುವುದು ಎಷ್ಟು ಸರಿ?. ಯಾವುದೇ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರೂ ಸರ್ಕಾರಿ ಶಾಲೆಯಲ್ಲಿ ದಾಖಲಿಸಿಕೊಳ್ಳಲು ಸಿದ್ಧವಾಗಿವೆ ಎಂದು ಹೇಳಿದರು .
ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ ನಾರಾಯಣ ಇದ್ದರು.
ನೂತನ ಪದಾಧಿಕಾರಿಗಳು: ಎಂ.ಸತೀಶ್ ಅಧ್ಯಕ್ಷ, ಡಿ.ಎಸ್.ಧನಂಜಯ ಉಪಾಧ್ಯಕ್ಷ, ಎ.ವಿ.ಕೇಂಪೇಗೌಡ ಕಾರ್ಯದರ್ಶಿ, ತ್ಯಾಗರಾಜ್ ಜಂಟಿ ಕಾರ್ಯದರ್ಶಿ, ಸೈಯದ್ ರಫಿಕ್ ಖಜಾಂಚಿ. ನಿರ್ದೇಶಕರು: ಎಂ.ರಾಮಚೇಂದ್ರಗೌಡ, ಕೆ.ಶ್ರೀನಿವಾಸ್, ದಾಸಪ್ಪ, ಸುರೇಶ್, ಕೆ.ಎಂ.ಸುಬ್ಬಯ್ಯ, ವಿ.ಎನ್.ರಮೇಶ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.