ಸೋಮವಾರ, ನವೆಂಬರ್ 30, 2020
26 °C
ವೃತ್ತಿಯಲ್ಲಿ ಶಿಕ್ಷಕರಾದ ಹರೀಶ್ ಪ್ರವೃತ್ತಿಯಲ್ಲಿ ಮಾದರಿ ಕೃಷಿ

ಮಿಶ್ರ ಬೇಸಾಯ ಅದಾಯದ ಮೂಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್ : ವೃತ್ತಿಯಲ್ಲಿ ಶಿಕ್ಷಕರು ಪ್ರವೃತ್ತಿಯಲ್ಲಿ ಕೃಷಿಕರು. ವೃತ್ತಿ ಮತ್ತು ಪ್ರವೃತ್ತಿ ಸರಿದೂಗಿಸಿಕೊಂಡು ಕಠಿಣ ಶ್ರಮದ ಮೂಲಕ ಮಿಶ್ರ ಬೆಳೆಯನ್ನು ಸಾವಯವ ಕೃಷಿಯ ಮೂಲಕ ಬೆಳೆದು ಉತ್ತಮ ಆದಾಯಗಳಿಸುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿರುವ ಆನೇಕಲ್‌ ತಾಲ್ಲೂಕಿನ ಬಿದರಗುಪ್ಪೆಯ ಶಿಕ್ಷಕ ಬಿ.ಎಂ.ಹರೀಶ್‌ ಎಲ್ಲರಿಗೂ ಮಾದರಿಯಾಗಿದ್ದಾರೆ.

ಆನೇಕಲ್‌ ತಾಲ್ಲೂಕಿನ ಸರ್ಜಾಪುರದ ಎಸ್‌.ವಿ.ಪಿ.ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿರುವ ಬಿ.ಎಂ.ಹರೀಶ್ ಅವರು ಕೃಷಿ ಕುಟುಂಬದಿಂದ ಬಂದವರು. ಹಾಗಾಗಿ ಪಾರಂಪರಿಕವಾಗಿ ಎರಡು ಎಕರೆ ಕೃಷಿ ಜಮೀನು ಇವರಿಗಿತ್ತು. ಇವರ ಕುಟುಂಬ ರಾಗಿ ಮತ್ತು ಕೆಲವು ತೋಟದ ಬೆಳೆಗಳನ್ನು ಬೆಳೆಯುವಲ್ಲಿ ನಿರತರಾಗಿತ್ತು. ಆದಾಯದ ಬಗ್ಗೆ ಯಾವುದೇ ಭರವಸೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಹರೀಶ್‌ ಅವರು ವೈಜ್ಞಾನಿಕವಾಗಿ ಮಿಶ್ರ ಬೆಳೆಯನ್ನು ಬೆಳೆಯಲು ತೀರ್ಮಾನ ಕೈಗೊಂಡು ವಿವಿಧ ಫಾರ್ಮ್‌ಗಳನ್ನು ಸುತ್ತಿ ತಮ್ಮದೇ ಆದ ವಿಧಾನ ಅಳವಡಿಸಿಕೊಂಡು ಕೇವಲ 10ತಿಂ ಗಳುಗಳಲ್ಲಿ ತಮ್ಮ ಜಮೀನಿನ ಚಹರೆಯನ್ನೇ ಬದಲಾಯಿಸಿ ಪ್ರತಿನಿತ್ಯ ಆದಾಯ ಬರುವಂತೆ ಮಾಡಿದ್ದಾರೆ.

ಶಾಲಾ ಕೆಲಸದ ಜತೆಗೆ ಬೆಳಿಗ್ಗೆ ಮತ್ತು ಸಂಜೆ ತಮ್ಮ ತೋಟವನ್ನೇ ಮನೆಯಾಗಿಸಿಕೊಂಡಿರುವ ಹರೀಶ್ ಬೆಳಿಗ್ಗೆ 5ಕ್ಕೆ ತೋಟದಲ್ಲಿರುತ್ತಾರೆ. ಇವರಿಗೆ ಸಾಥ್‌ ನೀಡಲು ರಾಮಬಾಬು ಮತ್ತು ಗುಜ್ಜಮ್ಮ ಎಂಬ ಆಂಧ್ರ ಮೂಲದ ರೈತ ಕುಟುಂಬ ಜತೆಗಿದೆ. ಇವರ ಶ್ರಮದಿಂದಾಗಿ ತೋಟದಲ್ಲಿ ವಿವಿಧ ಜಾತಿಯ ಹಣ್ಣು, ತರಕಾರಿ ಬೆಳೆಗಳು ನಳನಳಿಸುತ್ತಿವೆ.

ಎರಡು ಎಕರೆ ಜಮೀನಿನಲ್ಲಿ 520 ಸೀಬೆ, 560 ಪರಂಗಿ, 62 ತೆಂಗು, 25 ನಿಂಬೆ, 25 ದಾಳಿಂಬೆ, 5 ಬೆಣ್ಣೆ ಹಣ್ಣು, ಲೀಚಿ, ಅಂಜೂರ, ನೆಲ್ಲಿ ಕಾಯಿ, ಕೊಬ್ಬರಿ ಸೇರಿದಂತೆ ವಿವಿಧ ಜಾತಿಯ ಸಸಿಗಳು ಬೆಳೆದಿವೆ. ತೋಟದಲ್ಲಿ ಒಂದಿಂಚು ಜಾಗವನ್ನು ಖಾಲಿ ಬಿಡಬಾರದು ಎಂಬ ಹಠ ಹರೀಶ್‌ ಅವರದು. ಹಾಗಾಗಿ ಖಾಲಿ ಜಾಗಗಳಲ್ಲಿ ಈರುಳ್ಳಿ, ಅಲಸಂದೆ, ಕೊತ್ತಂಬರಿ ಸೊಪ್ಪು, ತೊಗರಿ, ಕಡಲೆ, ಕಡಲೆ ಕಾಯಿ ಸೇರಿದಂತೆ ಬಗೆ ಬಗೆಯ ತರಕಾರಿಗಳನ್ನು ಬೆಳೆಯಲಾಗಿದೆ.

ನೀರು ಪೋಲಾಗದಂತೆ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ತೋಟ ಶೇ100ರಷ್ಟು ಸಾವಯವ ತೋಟ ಯಾವುದೇ ಕ್ರಿಮಿನಾಶಕ ಬಳಸುವುದಿಲ್ಲ. ಕೊಟ್ಟಿಗೆ ಗೊಬ್ಬರ, ಕುರಿ ಗೊಬ್ಬರ, ಕೋಳಿ ಗೊಬ್ಬರ, ಹೊಂಗೆ ಎಲೆ, ಬೇವಿನ ಎಣ್ಣೆ, ಹೊಂಗೆ ಎಣ್ಣೆಯನ್ನು ಗೊಬ್ಬರ ಮತ್ತು ರಾಸಾಯನಿಕವಾಗಿ ಬಳಸಲಾಗುತ್ತದೆ ಎಂದು ಹರೀಶ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.