ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೂಸ್ವಾಧೀನಕ್ಕೆ ಶೀಘ್ರವೇ ಸರ್ವೆ ಆರಂಭ

ಎತ್ತಿನಹೊಳೆ ಯೋಜನೆ: ಪ್ರಥಮ ಹಂತದ ಪೈಪ್‌ಲೈನ್‌ ಕಾಮಗಾರಿ ಚುರುಕು
Last Updated 15 ಜುಲೈ 2021, 3:49 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಬಯಲುಸೀಮೆಯ ಜಿಲ್ಲೆಗಳಿಗೆ ನೀರುಣಿಸುವ ರಾಜ್ಯ ಸರ್ಕಾರದ ಎತ್ತಿನಹೊಳೆ ಯೋಜನೆಯ ಪ್ರಥಮ ಹಂತದ ಪೈಪ್‌ಲೈನ್‌ ಕಾಮಗಾರಿ ಹಾಗೂ ಬೃಹತ್‌ ಕಾಲುವೆಗಳ ನಿರ್ಮಾಣ ಕೆಲಸ ತೀವ್ರಗತಿಯಲ್ಲಿ ನಡೆಯುತ್ತಿದೆ.

ತಾಲ್ಲೂಕಿನ ಸಾಸಲು ಹೋಬಳಿಯ ಮಚ್ಚೇನಹಳ್ಳಿ ಸಮೀಪ ನಿರ್ಮಾಣವಾಗುವ ಬೈರಗೊಂಡ್ಲು ಜಲಾಶಯಕ್ಕೆ ನೀರು ಹರಿದು ಬರುವ ಹಾಗೂ ಇಲ್ಲಿಂದ ಚಿಕ್ಕಬಳ್ಳಾಪುರ, ಗೌರಿಬಿದನೂರು ಕಡೆಗೆ ನೀರು ಹರಿದು ಹೋಗಲು ಪೈಪ್‌ಲೈನ್‌ ಅಳವಡಿಕೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಒಳಪಡುವ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಆಯ್ದ ಗ್ರಾಮಗಳಲ್ಲಿ ಸರ್ವೆ ಕಾರ್ಯ ಮತ್ತು ಜಿಯೋಟೆಕ್ನಿಕಲ್ ತನಿಖೆ ಮಾಡಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಇದರಿಂದಾಗಿ ಭೂಸ್ವಾಧೀನ ಕಾರ್ಯ ವೇಗ ಪಡೆಯುವ ಲಕ್ಷಣಗಳು ಗೋಚರಿಸಿವೆ.

ಎತ್ತಿನಹೊಳೆಯಿಂದ ಹರಿದು ಬರುವ ನೀರು ಸಂಗ್ರಹಿಸಲು ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ 11 ಗ್ರಾಮಗಳು ಹಾಗೂ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ 17 ಗ್ರಾಮಗಳು ಮುಳುಗಡೆಯಾಗಲಿವೆ. ಬೈರಗೊಂಡ್ಲು ಜಲಾಶಯದ ಏರಿ ಹಾಗೂ ಮುಳುಗಡೆ ಪ್ರದೇಶವನ್ನು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಮಚ್ಚೇನಹಳ್ಳಿ ಸಮೀಪ ಗುರುತಿಸಲಾಗಿದೆ. ನೀರು ಸಂಗ್ರಹ ಮಾಡಲು ಜಲಾಶಯದ ಏರಿಯ ಉದ್ದ 4.62 ಕಿ.ಮೀ ಇದೆ. ಈ ಜಲಾಶಯದ ಒಟ್ಟಾರೆ ಮುಳುಗಡೆ ಪ್ರದೇಶ 5,200 ಎಕರೆ. ತಾಲ್ಲೂಕಿನ 2,534 ಎಕರೆ ಮುಳುಗಡೆಯಾಗಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಒಟ್ಟು 11 ಗ್ರಾಮಗಳಲ್ಲಿ ಲಕ್ಕೇನಹಳ್ಳಿ, ಗರುಡುಗಲ್ಲು ಗ್ರಾಮಗಳು ಪೂರ್ಣ ಮುಳುಗಡೆಯಾಗಲಿವೆ. ಮಚ್ಚೇನಹಳ್ಳಿ, ಶ್ರೀರಾಮನಹಳ್ಳಿ, ಶಿಂಗೇನಹಳ್ಳಿ ಭಾಗಶಃ ಮುಳುಗಡೆಯಾಗಲಿದ್ದು, ಪ್ರಸ್ತಾವನೆ ಅಂತಿಮ ಹಂತದಲ್ಲಿದೆ. ಗಾಣದಾಳು, ಕನಕೇನಹಳ್ಳಿ, ನರಸಾಪುರ, ಆಲಪ್ಪನಹಳ್ಳಿ, ಬೈಯಪ್ಪನಹಳ್ಳಿ, ಅಂಕೋನಹಳ್ಳಿ ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ.

ಬೈರಗೊಂಡ್ಲು ಜಲಾಶಯ ನಿರ್ಮಾಣದ ವ್ಯಾಪ್ತಿಗೆ ಟಿ.ಜಿ. ಹಳ್ಳಿ-ರಾಮನಗರ-ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಫೀಡರ್ ಕಾಲುವೆ ಯೋಜನೆ ಬರಲಿದೆ. ಇದರಲ್ಲಿ ನೆಲಮಂಗಲ ತಾಲ್ಲೂಕಿನ 33 ಗ್ರಾಮಗಳು, ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ 2 ಗ್ರಾಮಗಳು ಸೇರಿದಂತೆ 35 ಗ್ರಾಮಗಳ 83 ಎಕರೆಯ ಸ್ವಾಧೀನ ನಡೆಯಲಿದೆ.

ಗೌರಿಬಿದನೂರು–ದೊಡ್ಡಬಳ್ಳಾಪುರ ಗ್ರಾವಿಟಿ ಫೀಡರ್ ಕಾಲುವೆ ಯೋಜನೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 17 ಗ್ರಾಮಗಳ 53 ಎಕರೆ, ಗೌರಿಬಿದನೂರು ತಾಲ್ಲೂಕಿನ 35 ಗ್ರಾಮಗಳ 92 ಎಕರೆ ಸೇರಿದಂತೆ 145 ಎಕರೆ ಭೂಸ್ವಾಧೀನ ನಡೆಯಲಿದೆ. ಇದರಿಂದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಸಲು ಅನುಕೂಲವಾಗಲಿದೆ.

‘ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯಲ್ಲಿ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಸರ್ವೆ ಕಾರ್ಯ ಆರಂಭಿಸಲಾಗಿದೆ. ಸರ್ವೆ ಕಾರ್ಯ ಮುಗಿದ ನಂತರ ಪರಿಹಾರ ನೀಡಲಾಗುವುದು. ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಪರಿಹಾರ ನೀಡುವ ಕುರಿತಾಗಿ ಸಲ್ಲಿಸಿರುವ ಆಕ್ಷೇಪಣೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಗಣಿಸಲಾಗಿದೆ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ’ ಎಂದು ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಪಿ.ವಿ. ಪೂರ್ಣಿಮಾತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT