ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಮನೆ ಬೀಗ ತೆರೆಸಿದ ತಹಶೀಲ್ದಾರ್; ಕುರಿ, ಮೇಕೆಗೆ ಮುಕ್ತಿ

‘ಪ್ರಜಾವಾಣಿ’ ವರದಿಗೆ ಸ್ಪಂದನೆ* ವೃದ್ಧೆ ಮನೆಗೆ ಅಧಿಕಾರಿಗಳ ದಂಡು* ಫೈನಾನ್ಸ್‌ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ
Published 14 ಆಗಸ್ಟ್ 2024, 14:41 IST
Last Updated 14 ಆಗಸ್ಟ್ 2024, 14:41 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಸಾಲ ಮರುಪಾವತಿಸದ ಕಾರಣ ಫೈನಾನ್ಸ್‌ ಸಿಬ್ಬಂದಿ ವೃದ್ಧೆ ಮನೆಗೆ ಬೀಗ ಜಡಿದ ಕಾರಣ ಎರಡು ತಿಂಗಳಿಂದ ಮನೆಯಲ್ಲಿ ಬಂಧಿಯಾಗಿದ್ದ ಮೇಕೆ ಹಾಗೂ ಕುರಿಗೆ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾದಿನ ಬಿಡುಗಡೆ ಭಾಗ್ಯ ಲಭಿಸಿದೆ.   

ಸಾಲ ಮರು ಪಾವತಿಸದ ಜಯಲಕ್ಷ್ಮಮ್ಮ ಎಂಬುವರ ಮನೆಗೆ ದೇವನಹಳ್ಳಿಯ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಬೀಗ ಜಡಿದ ‘ಪ್ರಜಾವಾಣಿ’ ವರದಿಗೆ ಸ್ಪಂದಿಸಿದ ಆಡಳಿತ ವರ್ಗ ಬುಧವಾರ ಬೆಳಿಗ್ಗೆಯೇ ವಿಜಯಪುರದ ಚೌಡೇಶ್ವರಿ ಸರ್ಕಲ್ ಸಮೀಪದ ವೃದ್ಧೆ ಮನೆ ಎದುರು ಹಾಜರಾಗಿತ್ತು.

ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದ ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ ಅವರು ಪೊಲೀಸರ ಸಮ್ಮುಖದಲ್ಲಿ ಬೀಗ ಒಡೆದು ತೆಗೆದರು. ಎರಡು ತಿಂಗಳಿಂದ ಮನೆಯೊಳಗಿದ್ದ ಮೇಕೆ ಹಾಗೂ ಕುರಿಗಳನ್ನು ಹೊರಗೆ ತಂದರು. ಜೊತೆಗೆ ವೃದ್ಧೆಗೆ ₹5 ಸಾವಿರ ನೆರವು ನೀಡಿದರು.

ಬೀಗ ಒಡೆಯುವ ಮುನ್ನ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲು ತಹಶೀಲ್ದಾರ್‌ ನಡೆಸಿದ ಯತ್ನ ಫಲ ನೀಡಲಿಲ್ಲ. 

ಪಶುಪಾಲನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮೇಕೆ ಮತ್ತು ಕುರಿಗಳ ಆರೋಗ್ಯ ತಪಾಸಣೆ ನಡೆಸಿದರು. ಕ್ಷೀಣಿಸಿರುವ ಕುರಿ ಮತ್ತು ಮೇಕೆ ಆರೋಗ್ಯ ವೃದ್ಧಿಗೆ ಪೌಷ್ಟಿಕಾಂಶದ ಪೌಡರ್ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ನಳಿನಾಕ್ಷಿ ಸ್ಥಳಕ್ಕೆ ಬಂದು ಘಟನೆಯ ಮಾಹಿತಿ ಪಡೆದುಕೊಂಡರು.  

ಬುಧವಾರ (ಆ.14) ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಕುರಿ, ಮೇಕೆ ಗೃಹಬಂಧನ: ಚಾವಣಿಯಿಂದಲೇ ಮೇವು’ ವರದಿ ನೋಡಿದ ಜಿಲ್ಲಾಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ಸೂಚಿಸಿದ್ದರು. ಫೈನಾನ್ಸ್‌ ಸಿಬ್ಬಂದಿ ಬೀಗ ಹಾಕಿದ್ದು ಸರಿಯಾದ ಕ್ರಮವಲ್ಲ. ಸಾಲ ಪಡೆದವರೊಂದಿಗೆ ಈ ರೀತಿ ಅಮಾನವೀಯವಾಗಿ ನಡೆದುಕೊಳ್ಳುವ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಹಶೀಲ್ದಾರ್ ಬಾಲಕೃಷ್ಣ ಎಚ್ಚರಿಕೆ ನೀಡಿದರು. 

ಸಾಲ ಮಂಜೂರು ಮಾಡುವ ಮೊದಲು ಫೈನಾನ್ಸ್‌ನವರು ಏನೇನು ಷರತ್ತು ವಿಧಿಸಿ ಸಾಲ ನೀಡಿದ್ದರು ಎಂದು ಪರಿಶೀಲನೆ ನಡೆಸಲಾಗುತ್ತದೆ. ಮತ್ತೆ ಫೈನಾನ್ಸ್‌ನವರು ವೃದ್ಧರಿಗೆ ತೊಂದರೆ ಕೊಟ್ಟರೆ ಪೊಲೀಸರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ವೃದ್ಧೆ ಜಯಲಕ್ಷ್ಮಮ್ಮ ಮತ್ತು ಅವರ ಪತಿ ನಾಗಪ್ಪ ಮಾತನಾಡಿ, ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯಿಂದಾಗಿ ಮನೆಗೆ ಹಾಕಿದ್ದ ಬೀಗ ತೆರೆದಿದೆ. ತಹಶೀಲ್ದಾರ್‌ ಅಲ್ಲದೆ ಹಲವು ಮಂದಿ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಎರಡು ತಿಂಗಳಿಂದ ಮೂಕ ಪ್ರಾಣಿಗಳು ಅನಭವಿಸುತ್ತಿದ್ದ ವೇದನೆಗೆ ಮುಕ್ತಿ ಸಿಕ್ಕಿತಲ್ಲ. ಪತ್ರಿಕೆಗೆ ಧನ್ಯವಾದಗಳು’ ಎಂದು ಭಾವುಕರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT