ರಕ್ತ ಚಂದನ ತುಂಡು ಸಾಗಣೆ ಯತ್ನ: ವಾಹನ ಜಪ್ತಿ

ಹೊಸಕೋಟೆ: ತಾಲ್ಲೂಕಿನ ಕಟ್ಟಿಗೇನಹಳ್ಳಿ ಬಳಿ ಅಕ್ರಮವಾಗಿ ರಕ್ತಚಂದನ ಮರದ ತುಂಡುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬುಧವಾರ 1.30ರ ಸಮಯದಲ್ಲಿ ಕಟ್ಟಿಗೇನಹಳ್ಳಿ ಬಳಿ ಅಕ್ರಮವಾಗಿ ಸುಮಾರು 497.7 ಕೆ.ಜಿ ರಕ್ತಚಂದನ ಮರದ 37 ತುಂಡುಗಳು ಹಾಗೂ 61.7 ಕೆ.ಜಿ ತೂಕವುಳ್ಳ ಮೂರು ಮೂಟೆ ಚಕ್ಕೆ ಸೇರಿದಂತೆ ಒಟ್ಟು 559.4 ಕೆ.ಜಿ ರಕ್ತಚಂದನವನ್ನು ತರಕಾರಿ ಬಾಕ್ಸ್‌ನಲ್ಲಿ ಸಾಗಿಸುತ್ತಿದ್ದರು. ಇದರ ಒಟ್ಟು ಮೌಲ್ಯ ₹28 ಲಕ್ಷ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲಾಖಾ ಸ್ನಿಪರ್ ಶ್ವಾನದಳದೊಂದಿಗೆ ಕಾರ್ಯಾಚರಣೆ ನಡೆಸಿ, ಮಾಲು ಸಮೇತ ವಾಹನವನ್ನು ಜಪ್ತಿಪಡಿಸಿ, ಮೊಕದ್ದಮೆ ದಾಖಲು ಮಾಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ವಾಹನವನ್ನು ಬಿಟ್ಟು ತಪ್ಪಿಸಿಕೊಂಡಿದ್ದಾರೆ.
ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಜಾಗೃತ) ಸೀಮಾ ಗರ್ಗ್ ಅವರ ಮಾರ್ಗದರ್ಶನದಂತೆ ಜಿ.ಎ.ಗಂಗಾಧರ್, ಉಪಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಟಿ.ಎಂ.ರವಿಕುಮಾರ್ ಹಾಗೂ ಸಿಬ್ಬಂದಿ ನವೀನ್ ಕುಮಾರ್, ಮಹೇಶ್, ನಾಗೇಂದ್ರ ಮಲ್ಲಿಕಾರ್ಜುನ್, ರಾಬಟ್ ಹಾಗೂ ಮಹದೇವ ಕಾರ್ಯಾಚರಣೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.