ಗುರುವಾರ , ಅಕ್ಟೋಬರ್ 6, 2022
23 °C

ದೊಡ್ಡಬಳ್ಳಾಪುರ: ಕೋಡಿ ನೀರು ಸೃಷ್ಟಿಸಿದ ಅವಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಎರಡು ವಾರಗಳಿಂದ ಸುರಿದ ಮಳೆಯಿಂದ ಅರ್ಕಾವತಿ ನದಿ ಪಾತ್ರದ ಕೆರೆಗಳು ಸೇರಿದಂತೆ ಹತ್ತಾರು ಕೆರೆ, ಕುಂಟೆಗಳು ತುಂಬಿದ್ದು ಬೃಹತ್‌ ಪ್ರಮಾಣದಲ್ಲಿ ಕೋಡಿ ನೀರು ಹರಿಯುತ್ತಿದೆ. ಆದರೆ, ಕೋಡಿ ಬಿದ್ದಿರುವ ನೀರು ಹರಿದು ಹೋಗಲು ದಾರಿ ಇಲ್ಲದೆ ಎಲ್ಲೆಂದರಲ್ಲಿ ನುಗ್ಗಿ ಅವಾಂತರ ಸೃಷ್ಟಿಸಿದೆ.

ಕಳೆದ ವರ್ಷದ ಮಳೆಗಾಲದಲ್ಲಿ ತಾಲ್ಲೂಕಿನಲ್ಲಿ ಕೆಲವು ಕೆರೆಗಳು ತುಂಬಿ ಕೋಡಿ ಬಿದ್ದಿದ್ದರೂ ದೊಡ್ಡ ಪ್ರಮಾಣದಲ್ಲಿ ನೀರು ಹರಿದಿರಲಿಲ್ಲ. ಆದರೆ, ಸುಮಾರು ಮೂರು ದಶಕಗಳ ನಂತರ ಇದೇ ಪ್ರಥಮ ಬಾರಿಗೆ ಬೃಹತ್‌ ಪ್ರಮಾಣದಲ್ಲಿ ಕೆರೆ ಕೋಡಿ ನೀರು ಹರಿದು ಹೋಗುತ್ತಿದೆ.

ಅದರಲ್ಲೂ ನಗರದ ಹೃದಯ ಭಾಗದ ನಾಗರಕೆರೆ, ಮುತ್ತೂರು ಕೆರೆ ಹಾಗೂ ಕೈಗಾರಿಕಾ ಪ್ರದೇಶದಲ್ಲಿನ ಬಾಶೆಟ್ಟಿಹಳ್ಳಿ ಕೆರೆಯಿಂದ ಅಪಾರ ಪ್ರಮಾಣದಲ್ಲಿ ಕೋಡಿ ನೀರು ಹರಿಯುತ್ತಿದೆ.

ಈ ನೀರು ಹರಿದು ಹೋಗುವ ಬಹುತೇಕ ಭಾಗದಲ್ಲಿ ಬಡಾವಣೆಗಳು ನಿರ್ಮಾಣವಾಗಿವೆ. ಸಹಜವಾಗಿ ನೀರು ಹರಿದು ಹೋಗುತ್ತಿದ್ದ ರಾಜಕಾಲುವೆಗಳನ್ನು ಜನರ ಅನುಕೂಲಕ್ಕೆ ತಕ್ಕಂತೆ ತಿರುಗಿಸಲಾಗಿದೆ. ಆದರೆ, ನೀರು ಮಾತ್ರ ತನ್ನ ಹಳೆಯ ದಾರಿಯನ್ನು ತಾನೇ ಹುಡುಕಿಕೊಂಡಿದೆ. ಮನೆಗಳು, ಹೋಟೆಲ್‌, ಕಾಂಕ್ರೀಟ್‌ ರಸ್ತೆ, ಮೋರಿ ಯಾವುದನ್ನು ಲೆಕ್ಕಿಸದೆ ತನ್ನ ಪಾಡಿಗೆ ತಾನು ಹರಿಯಲು ಪ್ರಾರಂಭಿಸಿದೆ ಎನ್ನುತ್ತಾರೆ ಮುತ್ತೂರು ಕೆರೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದ ಡಬ್ಲ್ಯುಡಬ್ಲ್ಯುಎಫ್ ಇಂಡಿಯಾ ಸಂಸ್ಥೆಯ ವೈ.ಟಿ. ಲೋಹಿತ್‌.

ಕೋಡಿ ನೀರು ಹರಿಯುವ ಸ್ಥಳದಲ್ಲಿ ನಾವಿದ್ದೇವೆ ಎಂಬುದು ಈಗ ಜನರಿಗೆ ಅರಿಯವಾಗುತ್ತಿದೆ. ಆದರೆ, ಕಾಲ ಮೀರಿ ಹೋಗಿದೆ. ಈಗ ಇರುವ ಮನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲದೆ ನೀರಿನೊಂದಿಗೆ ಅನಿವಾರ್ಯವಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಾಶೆಟ್ಟಿಹಳ್ಳಿ ಕೆರೆ ಕೋಡಿ ನೀರು ಹರಿದು ಹೋಗುವ ಸ್ಥಳದಲ್ಲಿ ಕನಿಷ್ಠ ಪ್ರಮಾಣದಲ್ಲೂ ಕಾಲುವೆಗಳಿಲ್ಲ. ಇರುವ ಕಾಲುವೆಗಳು ಮನೆಗಳಿಂದ ಹೊರಬರುವ ಚರಂಡಿ ನೀರು ಹರಿದು ಹೋಗುವಷ್ಟು ಕಿರಿದಾಗಿವೆ.

ಇಂತಹ ಚರಂಡಿಗಳಲ್ಲಿ ಕೋಡಿ ನೀರು ಹರಿದು ಹೋಗಲು ಸಾಧ್ಯವಾಗದೆ ಇಡೀ ಬಡಾವಣೆಯಲ್ಲಿ ತನ್ನ ಅನುಕೂಲಕ್ಕೆ ತಕ್ಕಂತೆ ಹರಿಯುತ್ತಿದೆ. ಇದರಿಂದ ಈ ಭಾಗದ ಜನರು ಮನೆ ತಲುಪಲು ಪರದಾಡುವಂತಾಗಿದೆ. ಮಳೆ ಮತ್ತಷ್ಟು ಹೆಚ್ಚಾದರೆ ಯಾವ ಸಮಯದಲ್ಲಿ ಮನೆಗಳು ನೀರಿನಲ್ಲಿ ಮುಳುಗುತ್ತವೆಯೋ ಎನ್ನುವ ಆತಂಕ ಕಾಡುತ್ತಿದೆ.

ಮುತ್ತೂರು ಕೆರೆಯ ಪರಿಸ್ಥಿತಿ ಅಪಾಯದ ಮಟ್ಟ ಮೀರಿ ಹೋಗಿದೆ. ಕೋಡಿ ನೀರು ಹರಿದು ಹೋಗಲು ಸಾಧ್ಯವಾಗದಂತೆ ರಸ್ತೆ ನಿರ್ಮಿಸಲಾಗಿದೆ. ಹೀಗಾಗಿ, ಕೆರೆ ಸುತ್ತಲೂ ಇರುವ ಮನೆಗಳ ಅಂಚಿನವರೆಗೂ ನೀರು ನಿಂತಿದೆ. ಯಾವಾಗ ಮನೆಗಳನ್ನು ಕೆರೆ ನೀರು ಸುತ್ತುವರಿಯುತ್ತದೆಯೋ ಎನ್ನುವ ಆತಂಕ ಸೃಷ್ಟಿಯಾಗಿದೆ.

ಮುತ್ತೂರು ಕೆರೆ ಅಂಚಿನಲ್ಲೇ ರಾಜ್ಯ ಹೆದ್ದಾರಿ ಹಾದುಹೋಗಿದೆ. ಕೋಡಿ ನೀರು ಹರಿದು ಹೋಗಲು ಅವಕಾಶ ಕಲ್ಪಿಸದಿದ್ದರೆ ಹಿಂದೂಪುರ-ಬೆಂಗಳೂರು ರಾಜ್ಯ ಹೆದ್ದಾರಿ ಬಂದ್‌ ಆಗುವ ಅಥವಾ ಕೊಚ್ಚಿ ಹೋಗುವ ಅಪಾಯ ಪರಿಸ್ಥಿತಿ ನಿರ್ಮಾಣವಾಗಿದೆ. ಮೂತ್ತೂರು ಕೆರೆಯ ಕೋಡಿ ನೀರು ಹರಿದು ಹೋಗಲು ನಗರಸಭೆಯಿಂದ ಪುಟ್ಟ ಚರಂಡಿಯಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ, ಈ ಚರಂಡಿಯು ಯಾವಾಗ ಕೋಡಿ ನೀರಿನಲ್ಲಿ ಮುಚ್ಚಿಹೋಗುತ್ತದೆಯೋ ಎನ್ನುವ ಆತಂಕ ಸ್ಥಳೀಯ ನಿವಾಸಿಗಳಲ್ಲಿ ಮನೆ ಮಾಡಿದೆ.

‘ಅರ್ಕಾವತಿ ನದಿ ಪಾತ್ರದಲ್ಲಿ ಬರುವ ನಾಗರಕೆರೆಯಿಂದ ಕೋಡಿ ನೀರು ಹರಿದು ಬರುವ ಸ್ಥಳದಲ್ಲಿ ಮಾತ್ರ ವಿಶಾಲವಾಗಿದೆ. ನೀರು ಹರಿದು ಮುಂದೆ ಸಾಗುವ ಕಾಲುವೆಗಳು ಮಾತ್ರ ಬಡಾವಣೆಗಳಲ್ಲಿ ಸೇರಿಕೊಂಡು ಚರಂಡಿಗಳಂತಾಗಿವೆ. ಇದರಿಂದ ನೀರು ಜನವಸತಿ ಪ್ರದೇಶಗಳಲ್ಲಿ ನುಗ್ಗುವ ಆತಂಕ ಸೃಷ್ಟಿಯಾಗಿದೆ. ಮಳೆ ಹೆಚ್ಚಾದರೆ ಯಾವುದೇ ಸಮಯದಲ್ಲಾದರೂ ಅವಾಂತರ ಸೃಷ್ಟಿಯಾಗಬಹುದು. ನಗರಸಭೆ ಆಡಳಿತ ತುರ್ತಾಗಿ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪಿದ್ದಲ್ಲ’ ಎಂದು ಯುವ ಸಂಚಲನ ಅಧ್ಯಕ್ಷ ಚಿದಾನಂದ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು