ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತ್ವದ ಭಾರತ ಚಿಂತನೆ ಸಾಕಾರ

ದೇವರಾಜ್‌ ಅರಸ್‌ ನಿರ್ವಹಣಾ ಕಾಲೇಜಿನಲ್ಲಿ ಅಂಬೇಡ್ಕರ್‌ ಓದು ಕಾರ್ಯಕ್ರಮ
Last Updated 12 ಡಿಸೆಂಬರ್ 2020, 7:15 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಸಂವಿಧಾನ ಬದಲಿಸುವ ವಾದಗಳು ಬೆಳೆಯುತ್ತಿರುವ ಕಾಲಘಟ್ಟದಲ್ಲೇ ಅಂಬೇಡ್ಕರ್ ಚಿಂತನೆಗಳು ಹಾಗೂ ಸಂವಿಧಾನವನ್ನು ರಕ್ಷಿಸಿಕೊಳ್ಳುವ ಚರ್ಚೆ ಪ್ರಬಲವಾಗುತ್ತಿರುವುದು ‘ಬಹುತ್ವದ ಭಾರತ’ ಚಿಂತನೆಯ ಪ್ರಸ್ತುತತೆಯ ಸಂಕೇತವಾಗಿದೆ’ ಎಂದು ಚಿಂತಕ ಪ್ರೊ.ಎಂ.ಜಿ. ಚಂದ್ರಶೇಖರಯ್ಯ ಹೇಳಿದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ನಗರದ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಓದು’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಪ್ರಜ್ಞಾಪೂರ್ವಕವಾಗಿ ಕಟ್ಟಿಕೊಟ್ಟ ಸಾಂವಿಧಾನಿಕ ನಿಯಮಾವಳಿಗಳನ್ನು ಬದಲಾಯಿಸುವ ಪ್ರಸ್ತಾಪಗಳು ಆಗಾಗ್ಗೆ ಏಳುತ್ತಿರುವುದು ಸರಿಯಲ್ಲ. ಜಾತಿ, ಧರ್ಮದ ಆಧಾರದಲ್ಲಿ ನಡೆಯುವ ಆಡಳಿತ ಪ್ರಜಾಸತ್ತಾತ್ಮಕ ಅಂಶಗಳನ್ನು ಎಂದಿಗೂ ಪ್ರತಿಪಾದಿಸುವುದಿಲ್ಲ ಎಂಬುದನ್ನು ಅಧಿಕಾರಶಾಹಿ ಮನೋಧರ್ಮ ಒಪ್ಪಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ನಡೆಯುತ್ತಿರುವ ಇತ್ತೀಚಿನ ಕೆಲ ಬೆಳವಣಿಗೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ ಎಂದರು.

ಒಂದು ಸಾಮಾಜಿಕ ಕ್ರಮದಲ್ಲಿ ನ್ಯಾಯಬದ್ಧ ಬದುಕಿನ ಹಕ್ಕುಗಳ ರಕ್ಷಣೆ ಅಗತ್ಯ. ಜಾತಿ ಎಂದಿಗೂ ಸಾಮಾಜಿಕ ಸಂಘಟನೆಯಲ್ಲ. ಅವುಗಳಿಗೆ ಒಂದು ವಿಶಿಷ್ಟ ಗುಣವಿರುತ್ತದೆ. ಸಮಾಜದಲ್ಲಿ ಕಾಣುವ ಅಸ್ಪೃಶ್ಯ, ಜತೆಗೆ ಮನೆಗಳಲ್ಲೇ ಕಾಣುವ ಅಸ್ಪೃಶ್ಯತೆ ಬಗ್ಗೆಯೂ ಗಮನಹರಿಸಬೇಕು. ಅಂಬೇಡ್ಕರ್ ಈ ಸಮಾಜದ ಬಗ್ಗೆ ಹೊಂದಿದ್ದ ಆತಂಕಗಳು ಇಂದಿಗೂ ಕಾಣಸಿಗುತ್ತಿರುವುದು ಸಹಜವಾಗಿದೆ. ಮೀಸಲಾತಿ ಪಡೆದೂ ಬಲಿಷ್ಠರ ಅಡಿಯಾಳಾಗುವುದು ಶೋಷಿತರಿಗೆ ಮಾರಕ ಎಂದರು.

ಜಾತಿಗೊಂದು ನಿಗಮ ಮಾಡುವುದಾದರೆ ಸರ್ಕಾರ ಏಕಿರಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ದೇಶದ ಸಾಮಾಜಿಕ, ಆರ್ಥಿಕ, ರಾಜನೈತಿಕ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅಂಬೇಡ್ಕರ್ ಮತ್ತು ಗಾಂಧಿ ಓದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್. ರವಿಕಿರಣ್ ಮಾತನಾಡಿ, ಭಾರತ ದೇಶದ ಯುವಜನರ ಸಾರ್ವಕಾಲಿಕ ಆದರ್ಶವಾಗಬೇಕಿದ್ದ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಅವರಂತಹ ವ್ಯಕ್ತಿತ್ವಗಳನ್ನು ಯುವ ಸಮುದಾಯದ ಸ್ಮೃತಿಪಟಲದಿಂದ ವ್ಯವಸ್ಥಿತವಾಗಿ ಅಳಿಸುವ ಹುನ್ನಾರ ನಡೆಯುತ್ತಿದೆ ಎಂದರು.

ವಿದ್ಯಾರ್ಥಿಗಳು ಅಂಬೇಡ್ಕರ್ ಭಾರತದ ಸ್ಪಷ್ಟ ಪರಿಕಲ್ಪನೆಯನ್ನು ಹೊಂದಬೇಕು. ಸಾಂವಿಧಾನಿಕ ಮೌಲ್ಯಗಳು ಎನಿಸಿದ ಜಾತ್ಯತೀತವಾದ ಸಮಾಜವಾದ ಹಾಗೂ ಪ್ರಜಾಪ್ರಭುತ್ವದ ಆಶಯಗಳು ಎಂದಿಗೂ ಅರ್ಥ ಕಳೆದುಕೊಳ್ಳಬಾರದು ಎಂದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಮಂಜುನಾಥ್ ಆರಾಧ್ಯ ಮಾತನಾಡಿ, ಸಂವಿಧಾನಕ್ಕೆ 70 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಲಾಖೆಯಿಂದ ಅಂಬೇಡರ್‌ ಓದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳಾದ ಹರ್ಷಿತಾ ಮತ್ತು ಶಿವಾನಿ ಮಾತನಾಡಿ, ಅಂಬೇಡ್ಕರ್ ಅವರ ಜೀವನ ಚಿತ್ರಣವನ್ನು ಪರಿಚಯ ಮಾಡಿಕೊಟ್ಟರು. ಅಂಬೇಡ್ಕರ್ ಕುರಿತ ಆಶುಭಾಷಣ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಎಸ್‍ಡಿಯುಪಿಯು ಕಾಲೇಜಿನ ಪ್ರಾಂಶುಪಾಲರಾದ ಶೋಭಾ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪಿ. ಚೈತ್ರಾ, ಸಹಾಯಕ ಪ್ರಾಧ್ಯಾಪಕ ಕೆ.ಸಿ. ಲಕ್ಷ್ಮೀಶ, ಎನ್‌. ರವಿಕುಮಾರ್, ನಿಷತ್ ‌ಸುಲ್ತಾನಾ, ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT