ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ |  ಸದ್ದಿಲ್ಲದೆ ಸಾಗಿದ ಹಸಿರು ಕ್ರಾಂತಿ

ಪರಿಸರದ ಕೆಲಸದಲ್ಲಿ ಹಲವು ಸಂಘ –ಸಂಸ್ಥೆಗಳು ಸಕ್ರಿಯ * ಬೇಸಿಗೆಯಲ್ಲಿ ನೀರು ಹಾಯಿಸಲು ಹನಿ ನೀರಾವರಿ ಸೌಲಭ್ಯ
Last Updated 1 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಸದ್ದಿಲ್ಲದೆ ಹಸಿರು ಕ್ರಾಂತಿ ನಡೆಯತ್ತಿದೆ. ಇಷ್ಟು ವರ್ಷಗಳ ಕಾಲ ಸಸಿಗಳನ್ನು ನೆಟ್ಟು ಬೆಳೆಸುವುದೆಂದರೆ ಅರಣ್ಯ ಇಲಾಖೆ ಕೆಲಸ ಅನ್ನುವ ಅಲೋಚನ ಕ್ರಮ ಈಗ ಬದಲಾಗಿದೆ. ನಗರ ಹಾಗೂ ತಾಲ್ಲೂಕಿನಲ್ಲಿ ಸಣ್ಣಪುಟ್ಟ ಗುಂಪುಗಳು ಹಸೀರಿಕರಣ ಕೆಲಸದಲ್ಲಿ ತೊಡಗಿಸಿಕೊಂಡಿವೆ.

ಮೆಳೆಕೋಟೆಯಲ್ಲಿ ಯುವಸ್ಫೂರ್ತಿ ಟ್ರಸ್ಟ್‌, ನಗರದ ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘ, ಯುವ ಸಂಚಲನ, ಸುಚೇತನ ಎಜುಕೇಷನಲ್ ಅಂಡ್‌ ಚಾರಿಟಬಲ್‌ ಟ್ರಸ್ಟ್‌, ಭವಿಷ್ಯ ಎಜುಕೇಷನ್‌ ಟ್ರಸ್ಟ್‌ ಸೇರಿದಂತೆ ಹಲವು ಸಂಘ –ಸಂಸ್ಥೆಗಳು ಪರಿಸರದ ಕೆಲಸದಲ್ಲಿ ಸಕ್ರಿಯವಾಗಿವೆ.

ಸಂಘ –ಸಂಸ್ಥೆಗಳೊಂದಿಗೆ ಕೈ ಜೋಡಿಸಿರುವ ಎಲ್‌ ಆಂಡ್‌ ಟಿ, ಎಸ್ಸಿಲಾರ್‌ ಕಂಪನಿಗಳು ತಮ್ಮ ಮಿತಿಯಲ್ಲಿ ಸಸಿ ನೆಟ್ಟು ಬೆಳೆಸುವ ಜವಾಬ್ದಾರಿ ಹೊತ್ತಿರುವುದು ವಿಶೇಷ. ಎಲ್‌ ಆಂಡ್‌ ಟಿ ಕಂಪನಿ ಮುತ್ತೂರು ಕೆರೆ ಸುತ್ತಲಿನ ವಾಕಿಂಗ್‌ಪಾತ್‌ನಲ್ಲಿ ವಿವಿಧ ಜಾತಿಯ ಒಂದು ಸಾವಿರ ಸಸಿಗಳನ್ನು ನಡೆಸಿದೆ. ‌

ಇದೇ ದಾರಿಯಲ್ಲಿ ಬಾಶೆಟ್ಟಿಹಳ್ಳಿ ಎಸ್ಸಿಲಾರ್‌ ಕನ್ನಡಕ ತಯಾರಿಕಾ ಕಂಪನಿ, ‌ನಾಗರಕೆರೆ ಏರಿ ಮೇಲಿನ ವಾಕಿಂಗ್‌ಪಾತ್‌ ಅಂಚಿನಲ್ಲಿ ವಿವಿಧ ಜಾತಿಯ 500 ಬಗೆ ಗಿಡಗಳನ್ನು ನೆಟ್ಟಿದೆ. ಸಸಿಗಳನ್ನು ನೆಟ್ಟು ಜನರಿಗೆ ಲೆಕ್ಕನೀಡಿ ಸುಮ್ಮನಾಗದೆ ನೆಟ್ಟ ಸಸಿಯನ್ನು ದೊಡ್ಡದು ಮಾಡುವ ಹೊಣೆಗಾರಿಕೆಯನ್ನು ಕಂಪನಿ ಹೊತ್ತಿದೆ. ಸಾರ್ವಜನಿಕವಾಗಿ ಕೆರೆ ಅಂಚಿನಲ್ಲಿ ನೆಡಲಾಗಿರುವ ಸಸಿಗಳಿಗೆ ಬೇಸಿಗೆಯಲ್ಲಿ ನೀರು ಹಾಯಿಸಲು ಹನಿ ನೀರಾವರಿ ಸೌಲಭ್ಯ ಕಲ್ಪಿಸಿರುವ ಏಕೈಕ ಯೋಜನೆ ಇದಾಗಿದೆ.

'ಪರಿಸರ ಸಿರಿ ಕ್ಷೇಮಾಭಿವೃದ್ಧಿ ಸಂಘ, ಸುಚೇತನ ಎಜುಕೇಷನಲ್ ಅಂಡ್‌ ಚಾರಿಟಬಲ್‌ ಟ್ರಸ್ಟ್‌ ಒಟ್ಟಾಗಿ ಸೇರಿಕೊಂಡು ಮುತ್ತೂರು ಕೆರೆ ಅಂಚಿನಲ್ಲಿ ನೆಡುತೋಪು ಅಭಿವೃದ್ಧಿಪಡಿಸಿದೆ. ಸಾಮಾನ್ಯವಾಗಿ ಒಂದು ಸಸಿಯ ಬೆಲೆ ₹100 ರಿಂದ ₹200 ಇರುತ್ತದೆ. ಆದರೆ, ನೆಡುತೋಪಿನಲ್ಲಿ ನೆಟ್ಟಿರುವ ಒಂದು ಸಸಿಯ ಬೆಲೆ ₹2,500. ಈ ಸಸಿಗಳ ವಿಶೇಷವೆಂದರೆ ಸಸಿ ನೆಟ್ಟ ಮೊದಲ ವರ್ಷವೇ ಹೂವು, ಹಣ್ಣು ಬಿಡಲು ಆರಂಭವಾಗುತ್ತದೆ. ಎರಡುವರೆ ಸಾವಿರ ಹಣ ನೀಡಿ ಸಸಿ ತಂದಿದ್ದಕ್ಕೆ ಸಾರ್ಥಕವಾಗಿದೆ ಎನ್ನುತ್ತಾರೆ ಪರಿಸರ ಸಿರಿ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಮಂಜುನಾಥರೆಡ್ಡಿ.

ಜನ್ಮ ದಿನಕ್ಕೊಂದು ಸಸಿ ನೆಡುವ ಪದ್ಧತಿ ರಾಜಸ್ಥಾನದಲ್ಲಿದೆ. ಅಲ್ಲಿನ ಪಿಪ್ಲಾಂತ್ರಿ ಎಂಬ ಗ್ರಾಮದಲ್ಲಿ ಒಂದು ಹೆಣ್ಣು ಮಗು ಜನಿಸಿದರೆ 111 ಸಸಿಗಳನ್ನು ನೆಟ್ಟು ಪೋಷಿಸುವ ಪದ್ಧತಿ ಚಾಲ್ತಿಯಲಿದೆ. ಸುಮಾರು 18-20 ವರ್ಷಗಳಲ್ಲಿ ಹೆಣ್ಣು ಮಗಳ ಜತೆ ಮರಗಳು ಕೂಡ ಬೆಳೆದು ಭವಿಷ್ಯಕ್ಕೆ ಆಸರೆಯಾಗುತ್ತದೆ. ಈ ರೀತಿಯ ಕಾರ್ಯಕ್ರಮ ಗ್ರಾಮೀಣ ಭಾಗದ ಜನರು ಅಳವಡಿಸಿಕೊಳ್ಳಬೇಕಾಗಿದೆ ಎನ್ನುತ್ತಾರೆ ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್‌.

ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಎರಡು ವರ್ಷಗಳ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಿಗರ ಬಣ) ವತಿಯಿಂದ ನೆಡಲಾಗಿರುವ ಸಸಿಗಳು ಕ್ರೀಡಾಂಗಣಕ್ಕೆ ಬರುವ ವಾಯು ವಿಹಾರಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ನೆರಳುನೀಡುತ್ತಿವೆ. ಅಲ್ಲದೆ, ಪಕ್ಷಿಗಳಿಗೂ ಆಶ್ರಯ ತಾಣವಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT