ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ಸೀರೆ ಹಿಂದೆ ನೀರೆಯರ ಬೆವರು

ಮಗ್ಗ ಜಗ್ಗಿ ಕಾರ್ಮಿಕರ ಕೊರತೆ ನೀಗಿದ ಮಹಿಳೆಯರು
Last Updated 20 ಮೇ 2020, 8:25 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ದೇವಾಂಗದವರ ಮನೆಯಲ್ಲಿ ದೆವ್ವಕ್ಕೂ ಕೆಲಸ’ ಇದು ಬೆಳಗಾವಿಯಿಂದ-ಚಾಮರಾಜನಗರ ಸೇರಿದಂತೆ ಇಡೀ ರಾಜ್ಯದಲ್ಲಿ ನೇಕಾರರು ಇರುವ ಎಲ್ಲಾ ಕಡೆಯಲ್ಲೂ ಪ್ರಚಲಿತದಲ್ಲಿರುವ ಗಾದೆ. ಐದು ವರ್ಷ ಮಕ್ಕಳಿಂದ ಈಗಲೋ ಆಗಲೋ ಎನ್ನುವವರಿಗೂ ಒಂದಲ್ಲ ಒಂದು ಕೆಲಸವಿದ್ದೇ ಇರುತ್ತದೆ’ ಎಂಬುದು ಈ ಗಾದೆಯ ತಿರುಳು.

ಕೃಷಿ ಎಂಬುದು ಹೇಗೆ ಮಹಿಳಾ ಪ್ರಧಾನವೂ ಹಾಗೆಯೇ ನೇಕಾರಿಕೆಯಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಲೇ ಇದೆ. ನೇಕಾರಿಕೆಯ ಪ್ರಾರಂಭದಲ್ಲಿ ಕಂಡಿಕೆ, ವೈಂಡಿಂಗ್, ಸೀರೆ ಮಡಚುವಂತಹ ಸುಲಭದ ಕೆಲಸಗಳಲ್ಲಿ ಮಾತ್ರ ಮಹಿಳೆಯರು ತೊಡಗಿಸಿಕೊಳ್ಳುತ್ತಿದ್ದರು. ಆದರೆ ಇಂದು ನೇಕಾರಿಕೆಯಲ್ಲಿ ಪುರುಷರಷ್ಟೇ ಸರಿಸಮನಾಗಿ ಮಗ್ಗ ಬಿಡುವುದರಿಂದ ಮೊದಲುಗೊಂಡು ಎಲ್ಲಾ ಹಂತದಲ್ಲೂ ಮಹಿಳೆಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಒಂದು ಕಂಡಿಕೆ ಹಾಕಿದರೆ 15 ರಿಂದ 25 ನಿಮಿಷದ ತನಕ ಮಗ್ಗ ಓಡುತ್ತದೆ. ಎಳೆಗಳು ಗಂಟು ಗಂಟಾಗಿದ್ದರೆ ಅಲ್ಲೇ ಕಣ್ಣು ನೆಟ್ಟುಕೊಂಡು ಕುಳಿತುಕೊಳ್ಳಬೇಕು. ಇನ್ನು ಡ್ರಾಬಾಕ್ಸ್ ಆದರೆ 2-3 ಲಾಳಿ ಬದಲಾಯಿಸಬೇಕು. ಆದರೆ ಸುಧಾರಿತ ತಂತ್ರಜ್ಞಾನದಿಂದಾಗಿ ಮಗ್ಗಗಳಷ್ಟೇ ಅಲ್ಲ, ನೂಲಿನಲ್ಲೂ ಕ್ರಾಂತಿಕಾರಿ ಬದಲಾವಣೆಯಾಗಿದೆ. ಆಮದು ರೇಷ್ಮೆಯಲ್ಲಿ ಗಂಟುಗಳಿರುವುದು ಕಡಿಮೆ. ಒಮ್ಮೆ ಲಾಳಿಗೆ ಕಂಡಿಕೆ ತುರುಕಿ ಅದನ್ನು ಓಡಿಸಿದರೆ ಅರ್ಧ ಗಂಟೆಗಳ ಕಾಲ ‘ಯಾರೇ ಕೂಗಾಡಲಿ ಊರೇ ಹೋರಾಡಲಿ’ ಎಂದು ಹಾಡು ಹೇಳಿಕೊಂಡು ಕಾಲ ಕಳೆಯಬಹುದು. ಸುಧಾರಿತ ಮಗ್ಗಗಳು ಕೂಡ ಕೆಲಸದ ಶ್ರಮವನ್ನು ಕೊಂಚ ತಗ್ಗಿಸಿವೆ. ಹೀಗಾಗಿ ಮಹಿಳೆಯರು ಸಹ ಎರಡು ಮಗ್ಗ ಬಿಡುವುದನ್ನು ಕಾಣಬಹುದಾಗಿದೆ.

ಸಾಂಪ್ರದಾಯಿಕ ನೇಯ್ಗೆ ಉದ್ಯಮವೇ ಇಂದು ದೊಡ್ಡ ಬಿಕ್ಕಟ್ಟಿಗೆ ಸಿಲುಕಿದೆ. ಕಿರಿಯರ ಪ್ರವೇಶ ಇಲ್ಲದಾಗಿದೆ. ‘ಸತ್ತೆಳೆ ಗಂಟು ಹಾಕುವ ಕೆಲಸ ನಮ್ಮ ತಲೆಗೇ ಸಾಕು’ ಎಂದು ಹಿರಿಯರು ಭೀಷ್ಮ ಪ್ರತಿಜ್ಞೆ ಮಾಡಿಬಿಟ್ಟಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಮಗ್ಗ ಬಿಡುವವರ ಸರಾಸರಿ ವಯಸ್ಸು 40ಕ್ಕಿಂತ ಹೆಚ್ಚು. ಹೊಸದಾಗಿ ಮಗ್ಗದ ಕಸುಬು ಕಲಿತುಕೊಳ್ಳುವವರ ಸಂಖ್ಯೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ನೆಲಮಂಗಲ, ಹೊಸಕೋಟೆ, ಆನೇಕಲ್, ಮೊಳಕಾಲ್ಮುರು, ಇಳಕಲ್, ಶಹಾಪುರ, ಗದಗ, ಬೆಟಗೇರಿ, ಚಾಮರಾಜನಗರ, ಚಿಂತಾಮಣಿ, ತುಮಕೂರುಗಳಲ್ಲೂ ಪರಿಸ್ಥಿತಿ ಇದಕ್ಕಿಂತಲೂ ಭಿನ್ನವಾಗಿಯೇನೂ ಇಲ್ಲ. ಹೀಗಾಗಿ ಕಿರಿಯ ತಲೆಮಾರಿನ ಯುವಕರು ಈ ಸಾಂಪ್ರದಾಯಿಕ ನೇಕಾರಿಕೆಯನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿ ಲಾಭದ ಸಾಧ್ಯತೆಗಳನ್ನು ಕಂಡುಕೊಳ್ಳುವುದರ ಬದಲು ಅನ್ಯ ಉದ್ಯೋಗಗಳತ್ತ ವಲಸೆ ಹೋಗುತ್ತಿದ್ದಾರೆ. ಇದರಿಂದ ಹುಟ್ಟಿಕೊಂಡಿರುವ ಕೆಲಸಗಾರರ ಕೊರತೆಯನ್ನು ಮಹಿಳೆಯರು ಯಶಸ್ವಿಯಾಗಿ ತುಂಬಿದ್ದಾರೆ. ನೇಕಾರಿಕೆಯ ಎಲ್ಲ ಹಂತಗಳಲ್ಲೂ ಅವರು ಸಕ್ರಿಯರಾಗಿದ್ದಾರೆ. ಕುಟುಂಬಗಳ ಆರ್ಥಿಕ ಶಕ್ತಿಯು ಮಹಿಳೆಯರೇ ಆಗಿದ್ದಾರೆ.

ಬಂಪರ್ ಮತ್ತು ಅಮಾನಿ(ಪಾಪರ್) ಎನ್ನುವ ತೊಯ್ದಾಡುವ ಮಾರುಕಟ್ಟೆಯ ನಡುವೆ ಇವರು ತಮ್ಮ ಶಕ್ತಿ, ಚೈತನ್ಯವನ್ನು ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಅನೇಕ ಮಂದಿ ಯಶಸ್ವಿಗಳಾಗಿದ್ದಾರೆ. ಏನೂ ಓದದವರೂ ಕೂಡ ತಮ್ಮ ಮಕ್ಕಳನ್ನು ಎಂಬಿಎ, ಎಂಟೆಕ್, ಸಿಎ ಮೊದಲಾದ ಉನ್ನತ ಓದಿನಲ್ಲಿ ಪರಿಣಿತರನ್ನಾಗಿಸಿದ್ದಾರೆ.

ಪಾಲಿಗೆ ಬಂದಿದ್ದೇ ಪಂಚಾಮೃತ ಎನ್ನುವ ಅನುಕೂಲ ಸಿಂಧು ಜೀವನ ರೀತಿಗೆ ಎಲ್ಲರೂ ಹೊಂದಿಕೊಂಡಿದ್ದಾರೆ. ಇದು ಹೊಟ್ಟೆ ಬಟ್ಟೆಗೆ ಸಂಚಕಾರ ತರುತ್ತದೆ ಎಂದೇನೂ ಅಲ್ಲ.ಆದರೆ ಇದರಿಂದ ಹುಟ್ಟುವ ಹೊಂದಾಣಿಕೆ ಸ್ಥಿತಿಯಿಂದ ನೇಕಾರಿಕೆಯಲ್ಲಿ ಆಗಿರುವ ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳಲು ಆಗದೆ, ಅದರಿಂದ ಸಿಗುವ ಲಾಭ ಕೂಡ ಕೈ ತಪ್ಪುತ್ತಿದೆ. ಬೋಡು ಮಗ್ಗ ಅದಕ್ಕಿಂತ ಹೆಚ್ಚೆಂದರೆ ಡಾಬಿ ಇರುವ ಮಗ್ಗ ಬಿಡ್ತೀವಿ. ಇದರಲ್ಲಿ ಬರೋದೇ ಸಾಕು ನಮಗೆ. ಅತಿ ಆಸೆ ಗತಿ ಕೇಡು ಎನ್ನುತ್ತಾರೆ ಇಲ್ಲಿನ ಮಧ್ಯ ವಯಸ್ಕ ಹೆಣ್ಣುಮಕ್ಕಳು. ಇವರ ಮಕ್ಕಳನ್ನು ಕೇಳಿದರೆ ನಮಗೆ ಮಗ್ಗ ಅಂದರೆ ಅಲರ್ಜಿ. ಕಾಲೇಜಿಗೆ ಹೋಗ್ತಾ ಇದ್ದೀವಿ. ಪರ್ಸೆಂಟೇಜ್ ಜಾಸ್ತಿನೇ ಇದೆ ಎನ್ನುತ್ತ ಭವಿಷ್ಯದ ಸುಂದರ ಕನಸನ್ನು ನೇಯುತ್ತಾರೆ. ದೊಡ್ಡಬಳ್ಳಾಪುರದ ನೇಕಾರಿಕೆ ಹಳೇ ಬೇರು-ಹಳೇ ಚಿಗುರು ಎನ್ನುವಂತಾಗಿದೆ. ಹೊಸ ಚಿಗುರಿಗೆ ಬೇಕಾದ ಗೊಬ್ಬರ, ನೀರು ಹಾಕಿ ಪೋಷಿಸಬೇಕಾದವರು ಆಸಕ್ತಿ ವಹಿಸುತ್ತಿಲ್ಲ. ಮನೆಯಲ್ಲಿನ ಉದ್ಯಮವನ್ನು ಉಳಿಸಿಕೊಂಡು ಮುನ್ನಡೆಯುವ ಕಡೆಗೆ ಯುವ ಸಮೂಹ ಚಿಂತನೆ ನಡೆಸದೆ ಹೋಗಿದ್ದರ ಪರಿಣಾಮವೇ ಇಂದು ಸದಾ ನೇಯ್ಗೆಯಲ್ಲಿ ತೊಡಗಿರುತ್ತಿದ್ದ ಮಹಿಳೆಯರ ಕೈಯಲ್ಲಿ ಉದ್ಯೋಗ ಇಲ್ಲದಾಗಿದೆ.

ಮಹಿಳಾ ಪ್ರಧಾನ ಉದ್ಯಮ: ನಗರದ ವಿದ್ಯುತ್‌ ಮಗ್ಗಗಳಲ್ಲಿ ನೇಯುವ ಬಟ್ಟೆಗಳ ಪೈಕಿ ಶೇ 95ರಷ್ಟು ಉಡುಪುಗಳು ಮಹಿಳೆಯರು ಬಳಸುವಂತವೇ ಆಗಿವೆ. ಮಗ್ಗದಲ್ಲಿ ಸೀರೆ ನೇಯುವುದರಿಂದ ಮೊದಲುಗೊಂಡು, ಸೀರೆಗಳ ಜಾಹೀರಾತು, ಸೀರೆ ಮಾರಾಟದ ಅಂಗಡಿಗಳಲ್ಲಿಯು ಸಹ ಮಹಿಳೆಯರದ್ದೇ ಪ್ರಧಾನ ಪಾತ್ರ. ಹೀಗಾಗಿ ನೇಕಾರಿಕೆ ಅಂದರೆ ಮಹಿಳೆಯರು ಅಂದರು ತಪ್ಪಾಗಲಾರದು.

ಹೋರಾಟ ಅಗತ್ಯವಿದೆ
ರೈತ ಸಂಘಟನೆಗಳು ನಡೆಸುತ್ತಿದ್ದ ಬಹುತೇಕ ಹೋರಾಟಗಳು ಯಶಸ್ವಿಯಾಗಲು ಕಾರಣವಾಗಿರುವ ಅಂಶಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದದ್ದು ಒಂದು ಕಾರಣವಾಗಿತ್ತು. ಹೀಗಾಗಿಯೇ ರೈತ ಮುಖಂಡರಾಗಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಡಾ.ಎನ್‌.ವೆಂಕಟರೆಡ್ಡಿ ಅವರು ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಕರೆತರುವಂತೆ, ವೇದಿಕೆಗಳಲ್ಲಿ ಕೃಷಿ ಸಮಸ್ಯೆಗಳನ್ನು ಕುರಿತು ಮಾತನಾಡಲು ಅವಕಾಶ ನೀಡುತ್ತಿದ್ದರು.

ಆದರೆ ನೇಕಾರಿಕೆಯ ಅರ್ಧಭಾಗದಷ್ಟು ಉದ್ಯಮದಲ್ಲಿ ಮಹಿಳೆಯರು ಇದ್ದರೂ ಸಹ ಇದುವರೆಗೂ ನೇಕಾರರಿಂದ ನಡೆದಿರುವ ಯಾವುದೇ ಪ್ರತಿಭಟನೆ, ಧರಣಿಯಲ್ಲಿ ಇಲ್ಲಿಯವರೆಗೂ ಮಹಿಳೆಯರು ಕಾಣಿಸಿಕೊಂಡಿಲ್ಲ. ನೇಕಾರರ ಹೋರಾಟದಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವ ವಾತಾವರಣ ನಿರ್ಮಾಣವಾಗಬೇಕು ಎನ್ನುತ್ತಾರೆ ಮಹಿಳಾ ಪರ ಸಂಘಟನೆಗಳ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT