ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ಚೆಂದ ನೇಯ್ದವರನ್ನೇ ಚಿಂದಿ ಮಾಡಿದರು

ಕಾರ್ಮಿಕರ ದಾಖಲೆಯಾಗದಂತೆ ನೋಡಿಕೊಂಡ ಮಗ್ಗ ಮಾಲೀಕರು, ಸರ್ಕಾರಕ್ಕೂ ವಂಚನೆ
Last Updated 21 ಮೇ 2020, 6:58 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ವಿದ್ಯುತ್‌ ಚಾಲಿತ ಮಗ್ಗಗಳ ಮುಖ್ಯ ಜೀವಾಳವೇ ಕಾರ್ಮಿಕರು. ಆದರೆ ಕಾರ್ಮಿಕರನ್ನು ಕಡೆಗಣಿಸಿ ಸರ್ಕಾರದ ಗಮನಕ್ಕೆ ಮತ್ತು ಎಲ್ಲೂ ದಾಖಲೆಗಳಲ್ಲಿ ಇಲ್ಲದಂತೆ ಜಾಗರೂಕತೆಯಿಂದ ಮಾಲೀಕರು ಜಾಣ್ಮೆಯಿಂದ ವ್ಯವಹರಿಸಿದ್ದಾರೆ. ಇಂದಿಗೂ ಸಹ ಸರ್ಕಾರದ ಕಾರ್ಮಿಕ ಇಲಾಖೆಯಲ್ಲಿ ನಗರದ ನೇಕಾರಿಕೆಯ ವಿವಿಧ ಹಂತಗಳಲ್ಲಿ ಇಂತಿಷ್ಟು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎನ್ನಲು ಯಾವುದೇ ರೀತಿಯ ದಾಖಲೆಯೇ ಇಲ್ಲ.

ಹೀಗಾಗಿ ಸರ್ಕಾರದ ಪ್ರಕಾರ ದೊಡ್ಡಬಳ್ಳಾಪುರ ನಗರದ ವಿದ್ಯುತ್ ಚಾಲಿತ ಮಗ್ಗದ ಉದ್ದಿಮೆಯಲ್ಲಿ ಕಾರ್ಮಿಕರೇ ಇಲ್ಲ. ಈ ಉದ್ದಿಮೆಯಲ್ಲಿ ದುಡಿಯುತ್ತಿರುವ ಎಲ್ಲರೂ ಸಹ ಆಯಾ ಕುಟುಂಬಗಳಿಗೆ ಸಂಬಂಧಪಟ್ಟವರು ಎಂದೂ, ಈ ಉದ್ಯಮ ಗೃಹ ಕೈಗಾರಿಕೆಯೆಂದು ಸರ್ಕಾರವನ್ನು ನಂಬಿಸಲಾಗಿದೆ. ಹೀಗಾಗಿ ಇಲ್ಲಿರುವ ಕಾರ್ಮಿಕರು ಯಾವ ದಾಖಲೆಯಲ್ಲೂ ಇಲ್ಲ. ಇದರಿಂದಾಗಿ ಈಗ ಸರ್ಕಾರ ಘೋಷಣೆ ಮಾಡಿರುವ ₹ 2 ಸಾವಿರವನ್ನು ಲಾಕ್‌ಡೌನ್‌ ಸಂದರ್ಭದ ಪರಿಹಾರವನ್ನು ಯಾವ ರೀತಿ ಪಡೆಯುತ್ತಾರೆ ಎನ್ನುವುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಹಿರಿಯ ವಕೀಲ ಹಾಗೂ ಕಾರ್ಮಿಕ ಪರ ಹೋರಾಟಗಾರರಾದ ಎಂ.ಕೃಷ್ಣಮೂರ್ತಿ.

ಸಂಘಟನೆಗಾಗಿ ಪ್ರಯತ್ನ: ನೇಕಾರಿಕೆಕಾರ್ಮಿಕರ ಸ್ಥಿತಿ ಕುರಿತು ‘ಪ್ರಜಾವಾಣಿ’ ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಎಂ.ಕೃಷ್ಣಮೂರ್ತಿ ಅವರು ‘ಸುಮಾರು ಐದು ದಶಕಗಳ ಹಿಂದೆ ಎಡಪಕ್ಷದ ಅಡಿಯಲ್ಲಿ ಕಾರ್ಮಿಕ ಸಂಘವನ್ನು ಕಟ್ಟಿ ಕಾರ್ಮಿಕರ ಸಂಘಟನೆಗೆ ಪ್ರಯತ್ನಿಸಲಾಯಿತು. ಆ ಸಮಯದಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ಒಂದಿಷ್ಟು ಪ್ರಕರಣಗಳನ್ನು ಕಾರ್ಮಿಕ ನ್ಯಾಯಾಲಯ, ಕಾರ್ಮಿಕ ಆಯುಕ್ತರು ಮುಂತಾದವರ ಮುಂದೆ ಸಲ್ಲಿಸಿ ಒಂದಿಷ್ಟು ಜನ ಕಾರ್ಮಿಕರಿಗೆ ಪರಿಹಾರ ಸಹ ಕೊಡಿಸಲಾಯಿತು’ ಎಂದರು.

‘ಇಂತಹ ಸಂಘಟನಾತ್ಮಕ ಪ್ರಯತ್ನಗಳಿಂದ ಎಚ್ಚೆತ್ತ ನೇಕಾರಿಕೆಯಲ್ಲಿನ ಮಾಲೀಕರು ರಾಜಕೀಯ ಪ್ರಭಾವ ಬೆಳೆಸಿ ಯಾವುದೇ ಕಾರ್ಮಿಕ ಕಾನೂನುಗಳು ಜಾರಿಯಾಗದಂತೆ ನೋಡಿಕೊಂಡರು. ಮಾಲೀಕರು, ನೇಕಾರರು ತಮ್ಮ ಕೈಗಾರಿಕೆಗಳನ್ನು ಕಾನೂನಿಗೆ ಅನುಸಾರವಾಗಿ (Shop and Commercial Establishment Act) ನೋಂದಣಿ ಮಾಡಿಸಿ ಕಾರ್ಮಿಕ ಸಂಖ್ಯೆಯನ್ನು ಕಾರ್ಮಿಕ ಇಲಾಖೆಗೆ ಸಲ್ಲಿಸಬೇಕೆಂಬ ಕಾನೂನು ಇದ್ದರೂ ಸಹ ಇದನ್ನು ಪಾಲಿಸಲಿಲ್ಲ’ ಎನ್ನುತ್ತಾರೆ.

‘ನೋಂದಣಿ ಇಲ್ಲದ ಕಾರಣಕ್ಕೆ ಕಾರ್ಮಿಕರು ಯಾವುದೇ ಸವಲತ್ತುಗಳು, ಸರ್ಕಾರಿ ಪ್ರಯೋಜನ ಪಡೆಯಲು ಆಗಲೇ ಇಲ್ಲ. ಆದರೆ ಕಾರ್ಮಿಕರು ರೇಷ್ಮೆ ಬಟ್ಟೆ ನೇಯುವ ಕಾಯಕದಲ್ಲಿಯೇ ಇಡೀ ಜೀವನ ಕಳೆದು ಸದಾ ಸಣ್ಣ ಎಳೆಗಳನ್ನು ನೋಡುತ್ತ ವೃತ್ತಿಯೇ ಇಲ್ಲದಂತೆ ಕೆಲಸ ಮಾಡಿ ಕಣ್ಣು ಕಳೆದುಕೊಂಡರು. ಬಹಳ ಬೇಗನೆ ರೋಗರುಜಿನಗಳಿಗೆ ತುತ್ತಾದರು. ಅವರಿಗೆ ಯಾವುದೇ ರೀತಿಯ ಇಎಎಸ್‌ಐ ಸೌಲಭ್ಯವಿಲ್ಲದರಿಂದ ತಮ್ಮ ಆರೋಗ್ಯ ಆರೈಕೆಗಾಗಿ ಯಾವ ರೀತಿಯ ಪ್ರಯೋಜನವಿಲ್ಲದ ಸರ್ಕಾರಿ ಆಸ್ಪತ್ರೆಗೆ ಹೋಗುವಂತಾಯಿತು’ ಎಂದರು.

‘ನಗರದಲ್ಲಿ ಕಾರ್ಮಿಕರಿಗೆ ಬಾಡಿಗೆ ಮನೆ ಸಿಕ್ಕರೂ ಬಾಡಿಗೆ ಕೊಡುವ ಶಕ್ತಿಯಿಲ್ಲದೆ ಊರಾಚೆ ಸ್ಲಂಗಳಲ್ಲಿ ಜೀವನ ನಡೆಸಬೇಕಾದ ಸ್ಥಿತಿಗೆ ಬರುವಂತಾಯಿತು. ಯಾವ ರಾಜಕೀಯ ಪಕ್ಷಗಳಾಗಲಿ, ಜನ ಸೇವಕರಾಗಲಿ ಅವರ ಆಸರೆಗೆ ಬರಲೇ ಇಲ್ಲ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್ಸ್‌ಗಳು ಸ್ಥಾಪನೆಯಿಂದಾಗಿ ಒಂದಿಷ್ಟು ಕಾರ್ಮಿಕರು ನೇಯ್ಗೆ ವೃತ್ತಿ ಬಿಟ್ಟು ಕೈಗಾರಿಕ ಪ್ರದೇಶದಲ್ಲಿ ಕೆಲಸಕ್ಕೆ ಸೇರಿಕೊಂಡರು. ನೇಯ್ಗೆ ಉದ್ಯಮ ಅನೇಕ ಬಿಕ್ಕಟ್ಟುಗಳನ್ನು ಎದುರಿಸಿ ಬಡವಾಗತೊಡಗಿತು.

ಮಾಲೀಕರು ತಮ್ಮ ಬಳಿ ಕೂಲಿಗೆ ದುಡಿಯುತ್ತಿರುವ ಮಗ್ಗದ ಕಾರ್ಮಿಕರ ವಿವರಣೆಗಳನ್ನು ಸರ್ಕಾರಕ್ಕೆ ಒದಗಿಸಿದರೂ ಅಂತಹ ಮಾಲೀಕರಿಗೆ ಯಾವುದೇ ಕಾನೂನು ರೀತಿಯ ತೊಂದರೆಗಳು ಅಗುವುದಿಲ್ಲ. ಏಕೆಂದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಎಲ್ಲಾ ಕಾರ್ಮಿಕ ಕಾಯಿದೆಗಳಿಗೆ ತಡೆ ಒಡ್ಡಿದೆ. ಕಾರ್ಮಿಕರ ಹೋರಾಟಗಳು ಮತ್ತು ಅವರ ತ್ಯಾಗಗಳು ಮಾಲೀಕರಿಗೆ ಅನುಕೂಲವಾಗಿ ಅವರ ಹೆಸರಲ್ಲಿ ಮಾಲೀಕರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳೆ ಹೆಚ್ಚಾಗಿವೆ. ಆದುದರಿಂದ ಸರ್ಕಾರ ಕೂಡಲೆ ತ್ವರಿತವಾಗಿ ಕಾರ್ಮಿಕರ ಸಮೀಕ್ಷೆ ನಡೆಸಿ ಗುರುತಿನ ಚೀಟಿ ಕೊಡುವ ಅಗತ್ಯವಿದೆ ಎನ್ನುವುದು ವಕೀಲರು ಹಾಗೂ ಕಾರ್ಮಿಕ ಪರ ಹೋರಾಟಗಾರರು ಆಗಿರುವ ಎಂ.ಕೃಷ್ಣಮೂರ್ತಿ ಅವರ ಅಭಿಪ್ರಾಯ.

ಕಾರ್ಮಿಕರೂ ಕಾರಣ
ನೇಕಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು ಒಂದಿಷ್ಟು ಕಾಲ ಶಾಶ್ವತವಾಗಿ ಒಬ್ಬ ಮಾಲೀಕರಲ್ಲಿ ಉಳಿದು, ಎಲ್ಲಾ ಮಾಲೀಕರು ಸಮಾನವಾಗಿಯೇ ಒಂದೇ ರೀತಿಯಲ್ಲಿ ಕೂಲಿ ನೀಡಬೇಕು ಎನ್ನುವ ವಾದವನ್ನು ಮಂಡಿಸಲೇ ಇಲ್ಲ. ಕಾರ್ಮಿಕರು ಸಂಘಟಿತರಾಗದೇ ಒಂದೊಂದು ವಾರ ಒಬ್ಬೊಬ್ಬ ಮಾಲೀಕರಲ್ಲಿ ಕೆಲಸ ಮಾಡಲು ಹೋಗಿದ್ದು ಸಹ ನೇಕಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಸರ್ಕಾರದ ಕಾರ್ಮಿಕ ಇಲಾಖೆಯ ಸವಲತ್ತು ಪಡೆಯುವುದರಿಂದ ವಂಚಿತರಾಗಲು ಕಾರಣವಾಗಿದೆ ಎನ್ನುವುದು ಬಹುತೇಕ ನೇಕಾರರ ಅಭಿಪ್ರಾಯವಾಗಿದೆ.

ಹೀಗಿತ್ತು ದುರುಪಯೋಗ
ಕಾರ್ಮಿಕರ ಕಷ್ಟದ ನೆಪದಲ್ಲಿ ನೇಕಾರಿಕೆಯಲ್ಲಿನ ಮಾಲೀಕರು ತಮ್ಮ ಸಂಕಷ್ಟಗಳನ್ನು ಸರ್ಕಾರದ ಮುಂದಿಟ್ಟು ನೇಕಾರರ ಸೊಸೈಟಿಗಳನ್ನು ಸ್ಥಾಪಿಸಿದರು. ಈ ಸೊಸೈಟಿಗಳಿಗೆ ಬರುವ ಎಲ್ಲಾ ಪ್ರಯೋಜನಗಳನ್ನು ಮಾಲೀಕರು ಪಡೆದು ಸಹಕಾರಿ ಸಂಘಗಳನ್ನು ದಿವಾಳಿ ಎಬ್ಬಿಸಿದರು. ಇತ್ತೀಚಿನ ದಶಕದಲ್ಲಿ ವಿದ್ಯುತ್‌ ಚಾಲಿತ ಮಗ್ಗದ ವಲಯದಲ್ಲಿ ಸರ್ಕಾರದಿಂದ ಸವಲತ್ತುಗಳನ್ನು ಕೆಲವೇ ಮಾಲೀಕರು ಪಡೆದಿದ್ದಾರೆ. ಸಬ್ಸಿಡಿಗಳು,ಉಚಿತ ಮಗ್ಗದ ಕೊಡುಗೆಗಳು ಉಳ್ಳವರ ಪಾಲಾಗಿವೆ. ನೇಕಾರರ ಹೋರಾಟದ ಹೆಸರಿನಲ್ಲಿ ಕೆಲವೆ ಹೋರಾಟಗಾರರು ಪಲಾನುಭವಿಗಳಾಗಿದ್ದಾರೆ. ಸರ್ಕಾರದ ಸವಲತ್ತುಗಳು ಬಹು ಸಂಖ್ಯಾತ ಕಾರ್ಮಿಕರಿಗೆ ಸಿಗಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT