ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಕೈಗಾರಿಕಾ ಪ್ರದೇಶದಲ್ಲಿ ಕಳ್ಳರ ಕಾಟ

ಅಪರಾಧ ತಡೆಗೆ ಕೈಗಾರಿಕೆಗಳ ಮಾಲೀಕರು, ಕಾರ್ಮಿಕ ಒತ್ತಾಯ
Published 3 ಜುಲೈ 2023, 5:53 IST
Last Updated 3 ಜುಲೈ 2023, 5:53 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಮಿತಿ ಮೀರಿವೆ. ಇಲ್ಲಿನ ಮಾಲೀಕರು ಹಾಗೂ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡುವಂತೆ ಇದೇ ಪ್ರಥಮ ಬಾರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೊಡ್ಡಬಳ್ಳಾಪುರ ಕೈಗಾರಿಕೋದ್ಯಮಿಗಳು ಮನವಿ ಮಾಡಿದ್ದಾರೆ.

ರಾಜಧಾನಿ ಬೆಂಗಳೂರಿಗೆ 35 ಕಿ.ಮೀ ದೂರದಲ್ಲಿರುವ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ 80ರ ದಶಕದಲ್ಲಿ ಪ್ರಾರಂಭವಾಯಿತು. ಈಗ ನಾಲ್ಕು ಹಂತಗಳಲ್ಲಿ ವಿಸ್ತಾರವಾಗಿ ಬೆಳೆದಿದೆ. ಸುಮಾರು ಮೂರು ಸಾವಿರ ಎಕರೆಯಷ್ಟು ವಿಸ್ತಾರವಾಗಿರುವ ಕೈಗಾರಿಕ ಪ್ರದೇಶದಲ್ಲಿ ವಿದೇಶಿ ಮಾಲೀಕತ್ವದ ಕೈಗಾರಿಕೆಗಳು ಸೇರಿದಂತೆ ನೂರಾರು ದೇಶಿಯ ಕೈಗಾರಿಕೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿದೇಶಿ ಕಾರ್ಮಿಕರು ಸೇರಿದಂತೆ ದೇಶದ ನಾನಾ ರಾಜ್ಯಗಳ ಸಾವಿರಾರು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ದೇಶದ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಕಾರ್ಮಿಕರು ಇಲ್ಲಿಯೇ ನೆಲೆಸಿ ಮತದಾನದ ಹಕ್ಕನ್ನು ಹೊಂದಿರುವುದರಿಂದ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಹಂತದಿಂದ ಈಗ ಪಟ್ಟಣ ಪಂಚಾಯಿತಿಯಾಗಿ ಬಡ್ತಿ ಪಡೆದಿದೆ. ಇಷ್ಟೆಲ್ಲಾ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಸಹಜವಾಗಿಯೇ ಏರಿಕೆಯಾಗುತ್ತಿವೆ. ಆದರೆ ಪೊಲೀಸ್‌ ಇಲಾಖೆ ಮಾತ್ರ ಅಪರಾಧ ಪ್ರಕರಣಗಳ ತಡೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳದೇ ಹಳೇ ಗಸ್ತು ಮಾದರಿಯಲ್ಲೇ ಮುಂದುವರೆದಿದೆ. ಇದೇ ಕಾರಣದಿಂದ ಅಪರಾಧ ಪ್ರಕರಣ ಹೆಚ್ಚಳವಾಗಿದೆ ಎನ್ನುವುದು ಕೈಗಾರಿಕೋದ್ಯಮಿಗಳ ದೂರು.

ಕೈಗಾರಿಕೆಗಳಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ಮನೆಗಳಿಗೆ ಮರಳುವ ಕಾರ್ಮಿಕರಿಗೆ ರಸ್ತೆಗಳಲ್ಲಿ ತಡೆದು ಹಣ, ಮೊಬೈಲ್‌, ಚಿನಾಭರಣ ದೋಚುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅದರಲ್ಲೂ ಕಾರ್ಮಿಕರು ಸಂಬಳ ಪಡೆಯುವ ತಿಂಗಳ ಮೊದಲ ವಾರಗಳಲ್ಲೇ ಹೆಚ್ಚಿನ ಅಪರಾಧಗಳು ನಡೆಯುತ್ತಿವೆ ಎನ್ನುವ ದೂರುಗಳು ಕಾರ್ಮಿಕ ವರ್ಗದಿಂದ ಕೇಳಿ ಬಂದಿವೆ.

ಕೈಗಾರಿಕೆಗಳು ನೆಲೆಗೊಳ್ಳಲು ಅಗತ್ಯ ಇರುವ ಹಲವಾರು ಪೂರಕ ಅಂಶಗಳಲ್ಲಿ ಕಾನೂನು ಸುವ್ಯವಸ್ತೆಯೂ ಅತಿ ಪ್ರಮುಖವಾಗಿರುತ್ತದೆ. ಕೈಗಾರಿಕ ವಲಯ ಸ್ಥಾಪನೆಯಾದ ಮೂರು ದಶಕಗಳ ನಂತರ ಇದೇ ಪ್ರಥಮ ಬಾರಿಗೆ ಕೈಗಾರಿಕೋದ್ಯಮಿಗಳಿಂದ ಅಪರಾಧ ಪ್ರಕರಣಗಳ ತಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಕೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ತುರ್ತು ಅಗತ್ಯವಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಈಗೇಕೆ ಮುನ್ನಲೆಗೆ?
ಕೈಗಾರಿಕಾ ಪ್ರದೇಶದಲ್ಲಿ ಸಂಜೆ ವೇಳೆ ನಡೆದುಕೊಂಡು ಹೋಗುವ ಕಾರ್ಮಿಕರಿಂದ ಅಪರಿಚಿತರು ಮೊಬೈಲ್, ಪರ್ಸ್ ಹಾಗೂ ಹಣ ಕಿತ್ತುಕೊಳ್ಳುವ ಪ್ರಕರಣಗಳು ವಾರದಲ್ಲಿ ಒಂದಾದರು ನಡೆಯುತ್ತಲೇ ಇರುತ್ತವೆ. ಸಾಕಷ್ಟು ಜನ ಕಾರ್ಮಿಕರು ಸ್ಥಳೀಯರಲ್ಲದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡುವ ಧೈರ್ಯ ಮಾಡುವುದಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಕಾರ್ಮಿಕ ಸಂಘಟನೆಗಳ ಮುಖಂಡರು ಪೊಲೀಸರ ಗಮನಕ್ಕೆ ತಂದಿದ್ದರು. ಆದರೆ ಇತ್ತೀಚೆಗೆ ಕೈಗಾರಿಕೆಯೊಂದರ ವ್ಯವಸ್ಥಾಪಕರನ್ನು ಅಡ್ಡಗಟ್ಟಿ ಹಣ, ಮೊಬೈಲ್ ದೋಚಿದ ನಂತರ ಅಪರಾಧ ಪ್ರಕರಣಗಳ ಬೆಳಕಿಗೆ ಬರುತ್ತಿವೆ. ಇವುಗಳ ತಡೆಗೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಮುನ್ನೆಲೆಗೆ ಬಂದಿದೆ.
ನಡೆದುಕೊಂಡು ಬರುವವರೇ ಕಳ್ಳರ ಗುರಿ
ಆಂಧ್ರಪ್ರದೇಶದ ಅನಂತರಪುರ ಹಿಂದೂಪುರ ಭಾಗದಿಂದಲು ರೈಲಿನಲ್ಲಿ ಬಾಶೆಟ್ಟಿಹಳ್ಳಿಯಲ್ಲಿನ ಗಾರ್ಮೆಂಟ್ಸ್‌ಗಳಿಗೆ ಮಹಿಳಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ಕಾರ್ಮಿಕರು ಬಸ್‌ಗಳಿಗೆ ಬರಲು ಸುಮಾರು ಎರಡು ಕಿ.ಮೀ ದೂರ ನಡೆದುಕೊಂಡೇ ಮುಖ್ಯರಸ್ತೆಗೆ ಬರಬೇಕಿದೆ. ಹೀಗೆ ನಡೆದುಕೊಂಡು ಬರುವವರೇ ಕಳ್ಳರ ಗುರಿ ಆಗಿರುತ್ತದೆ. ನಡೆದುಕೊಂಡು ಬರುವವರನ್ನು ಅಡ್ಡ ಹಾಕಿ ದೋಚುತ್ತಾರೆ. ಕೈಗಾರಿಕಾ ಪ್ರದೇಶದಲ್ಲಿನ ಮುಖ್ಯ ರಸ್ತೆಗಳ ಮಧ್ಯಭಾಗದಲ್ಲಿ ಹಾಗೂ ರಸ್ತೆ ಬದಿಯಲ್ಲಿ ಬೆಳೆಸಲಾಗಿರುವ ವಿವಿಧ ರೀತಿಯ ಹೂವಿನ ಗಡಿಗಳು ಪೊದೆಯಂತೆ ಬೆಳೆದು ನಿಂತಿದ್ದರು ಕೆಐಡಿಬಿ ವತಿಯಿಂದ ಸ್ವಚ್ಛಗೊಳಿಸಿಲ್ಲ. ರಾತ್ರಿ ವೇಳೆ ರಸ್ತೆ ಬದಿಯಲ್ಲಿ ವಿದ್ಯುತ್‌ ದೀಪಗಳ ಸೌಲಭ್ಯವು ಸರಿಯಾಗಿ ಇಲ್ಲದಾಗಿದೆ. ಹೀಗಾಗಿಯೇ ಕೈಗಾರಿಕಾ ಪ್ರದೇಶದಲ್ಲಿ ಅಪರಾಧ ಪ್ರಕರಗಳು ಹೆಚ್ಚಾಗಲು ಕಾರಣವಾಗಿವೆ ಎಂದು ವ್ಯಾಪಾರಿ ಮುನಿರಾಜು ತಿಳಿಸಿದರು. ಬಸ್‌ ಸೌಲಭ್ಯಕ್ಕೆ ದಶಕದ ಮನವಿ ಬೆಳಗಿನ ಹಾಗೂ ಸಂಜೆ ವೇಳೆಯಲ್ಲಿ ಮುಖ್ಯ ರಸ್ತೆಯಿಂದ ಕೈಗಾರಿಕ ಪ್ರದೇಶಕ್ಕೆ ಇಲ್ಲಿನ ಗ್ರಾಮಗಳಿಗೆ ಸಾರ್ವಜನಿಕರು ಹಾಗೂ ಕಾರ್ಮಿಕರು ಹೋಗಿ ಬರಲು ಅನುಕೂಲವಾಗುವಂತೆ ಬಸ್‌ ಸೌಲಭ್ಯ ಕಲ್ಪಿಸುವಂತೆ ದಶಕಗಳಿಂದಲೂ ಮನವಿ ಮಾಡುತ್ತಲೇ ಇದ್ದರು ಸಹ ಇಲ್ಲಿಯವರೆಗೂ ಬಸ್‌ ಸೌಲಭ್ಯ ಕಲ್ಪಿಸಿಲ್ಲ. ಆಟೋ ಅಥವಾ ಸ್ವಂತ ವಾಹನಗಳನ್ನೇ ಅವಲಂಭಿಸಬೇಕಿದೆ ಎಂದು ಹಾಲಿನ ವ್ಯಾಪಾರಿ ಮುನಿರಾಜು ಒತ್ತಾಯಿಸಿದರು.
ಪ್ರತ್ಯೇಕ ಪೊಲೀಸ್‌ ಠಾಣೆ ಬೇಕು
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಸ್ಥಾಪನೆಯಿಂದ ಹಲವಾರು ಜನರಿಗೆ ಉದ್ಯೋಗ ದೊರೆತಿವೆ. ಭೂಮಿ ಕಳೆದುಕೊಂಡವರು ಬೇರೆ ಬೇರೆ ರೀತಿಯಲ್ಲಿ ಬದುಕು ರೂಪಿಸಿಕೊಂಡು ಏಳಿಗೆ ಕಂಡಿದ್ದಾರೆ. ತಾಲ್ಲೂಕಿನ ಹಣ್ಣು ತರಕಾರಿಗಳ ಹೆಚ್ಚಿನ ವ್ಯಾಪಾರದಿಂದ ರೈತರು ಸೇರಿದಂತೆ ಇತರೆ ವ್ಯಾಪಾರಿಗಳಿಗು ಅನುಕೂಲವಾಗಿದೆ. ಇಷ್ಟೆಲ್ಲಾ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುವ ಕೈಗಾರಿಕಾ ಪ್ರದೇಶದಲ್ಲಿ ಬದಲಾದ ಕಾಲಕ್ಕೆ ತಕ್ಕಂತೆ ರಕ್ಷಣೆ ಕಡೆಗೂ ಪೊಲೀಸರು ಈಗಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಬಾಶೆಟ್ಟಿಹಳ್ಳಿಗೆ ಪ್ರತ್ಯೇಕ ಪೊಲೀಸ್‌ ಠಾಣೆ ಸಿಬ್ಬಂದಿಯ ನೇಮಕ ಆಗಬೇಕಿತ್ತು. ಈಗಲು ಕಾಲ ಮಿಂಚಿಲ್ಲ. ಮತ್ತಷ್ಟು ಅಪರಾಧ ಪ್ರಕರಣಗಳು ನಡೆಯುವ ಮುನ್ನ ಜನರಲ್ಲಿ ಸುರಕ್ಷಿತ ಭಾವನೆ ಮೂಡಿಸುವ ಕೆಲಸ ಆಗಬೇಕಿದೆ. ಇದಕ್ಕಾಗಿ ಇಲ್ಲಿ ಪ್ರತ್ಯೇಕ ಠಾಣೆ ಸ್ಥಾಪನೆ ಆಗಲಿ ಎಂದು ನೇಕಾರ ಜನಪರ ಮಂಜು ಒತ್ತಾಯಿಸಿದರು.
ಅಪರಾಧ ತಡೆಗೆ ಪ್ರತ್ಯೇಕ ಪೊಲೀಸ್‌ ಗಸ್ತು ವಾಹನ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಪೊಲೀಸ್‌ ಗಸ್ತು ವಾಹನ ಬಾಶೆಟ್ಟಿಹಳ್ಳಿಯಲ್ಲಿ ಹೊರ ಪೊಲೀಸ್‌ ಠಾಣೆ ಸಿಬ್ಬಂದಿ ನೀಡಲು ತುರ್ತು ಸಿದ್ದತೆ ನಡೆದಿದೆ. ಕೈಗಾರಿಕಾ ಪ್ರದೇಶದಲ್ಲಿಯೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪೊಲೀಸ್‌ ಠಾಣೆ ಸಿಬ್ಬಂದಿ ನೀಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
- ನಾಗರಾಜ್‌ ಡಿವೈಎಸ್‌ಪಿ ದೊಡ್ಡಬಳ್ಳಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT