ವಿಜಯಪುರ(ದೇವನಹಳ್ಳಿ): ಇಲ್ಲಿಗೆ ಸಮೀಪದ ದನಿಗಹಳ್ಳಿ ಮತ್ತು ಕೊಮ್ಮಸಂದ್ರದ ಬಳಿಯ ಎರಡು ತೋಟದಲ್ಲಿ ದಾಳಿಂಬೆ ಬೆಳೆಗೆ ದುಂಡಾಣು ರೋಗ ಕಾಣಿಸಿಕೊಂಡಿದ್ದು, ಗಿಡಗಳು ಒಣಗಿ ಹೋಗುತ್ತಿವೆ.
ತೀವ್ರ ನೀರಿನ ಅಭಾವದ ನಡುವೆಯೂ ದಾಳಿಂಬೆ ಬೆಳೆಯಲಾಗಿತ್ತು. ಆದರೆ ದುಂಡಾಣು ಮತ್ತು ಚಿಕ್ಕ ರೋಗದಿಂದ ದಾಳಿಂಬೆ ಬೆಳೆ ನಷ್ಟವಾಗಿದೆ. ರೋಗ ನಿಯಂತ್ರಣಕ್ಕೆ ತರಲು ಸಾಧ್ಯವಾಗದೆ. ರೈತರು ಗಿಡಗಳನ್ನು ಕಿತ್ತು ಹಾಕಲು ಮುಂದಾಗುತ್ತಿದ್ದಾರೆ.
ದಾಳಿಂಬೆ ಬೆಳೆಗೆ ಉತ್ತಮ ಬೆಲೆ ಇರುವ ಕಾರಣ ತೋಟದ ತುಂಬಾ ದಾಳಿಂಬೆ ಬೆಳೆಯಲಾಗಿತ್ತು. ಆದರೆ, ದಾಳಿಂಬೆ ಕಾಯಿಗಳಿಗೆ ಚುಕ್ಕೆರೋಗ ಕಾಣಿಸಿಕೊಂಡು, ದಿನೇ ದಿನೇ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹರಡಿಕೊಂಡೊದೆ. ಕಾಯಿಯೆಲ್ಲಾ ಚುಕ್ಕೆಗಳಿಂದ ಕೂಡಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ನಷ್ಟವಾಗಿದೆ ಎಂದು ರೈತ ಪ್ರಭಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ದಾಳಿಂಬೆ ಗಿಡದ ಎಲೆ ಮತ್ತು ಕಾಯಿಗಳ ಮೇಲೆ ಕಪ್ಪು ಚುಕ್ಕೆ ಆಕಾರದಲ್ಲಿ ಕಾಣಿಸುವ ದುಂಡಾಣು ರೋಗ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ. ರೋಗಕ್ಕೆ ತುತ್ತಾಗಿರುವ ಗಿಡಗಳು ಸಂಪೂರ್ಣವಾಗಿ ಒಣಗಿ ಹೋಗುತ್ತಿವೆ. ಈ ರೋಗದ ಜೊತೆಗೆ ಕಾಯಿಕೊರಕ ರೋಗವೂ ಕಾಣಿಸಿಕೊಂಡಿದೆ. ಕಾಯಿಗಳನ್ನು ಕಿತ್ತು ಹೊರಗೆ ಹಾಕಿ, ಗಿಡಗಳನ್ನು ಕತ್ತರಿಸಿಹಾಕುವ ಚಿಂತನೆ ನಡೆಸಿದ್ದೇನೆ ರೈತ ಶ್ರೀನಿವಾಸ್ ಹೇಳಿದರು.
‘ದುಂಡಾಣು ಮತ್ತು ಕಾಯಿಕೊರಕ ರೋಗ ತಡೆಗಟ್ಟಲು ಅಧಿಕಾರಿಗಳು ನೀಡಿರುವ ಸಲಹೆಯಂತೆ ಸಾಕಷ್ಟು ಕ್ರಿಮಿನಾಶಕ ಸಿಂಪಡಣೆ ಮಾಡಿದ್ದೇವೆ. ತಿಂಗಳಿಗೆ ₹25 ಸಾವಿರ ನೀಡಿ ಕ್ರಿಮಿನಾಶಕ ಖರೀದಿಸಿ, ಸಿಂಪಡಣೆ ಮಾಡಲಾಗಿದೆ. ಆದರೂ ಯಾವ ಪ್ರಯೋಜನ ಆಗಿಲ್ಲ. ಸರ್ಕಾರ ರೈತರಿಗೆ ಅಗತ್ಯ ಪರಿಹಾರ ನೀಡಿ, ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ರೈತ ಶಿವಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದರು.
ರೋಗ ನಿಯಂತ್ರಣ ಸವಾಲು
ದುಂಡಾಣು ಮತ್ತು ಕಾಯಿಕೊರಕ ರೋಗ ತಡೆಯಲು ರೈತರಿಗೆ ಇಲಾಖೆ ತಾಂತ್ರಿಕ ಸಲಹೆ ನೀಡುತ್ತಾ ಬಂದಿದೆ. ಹವಾಮಾನ ಆಧರಿಸಿ ಬರುವ ಈ ರೋಗಾಣು ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಸರ್ಕಾರ ಇಂತಹ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನೆರವು ನೀಡಲು ಯಾವುದೇ ಯೋಜನೆ ರೂಪಿಸಿಲ್ಲದ ಕಾರಣ ನಾವು ಇಲಾಖೆಯಿಂದ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತೋಟಗಾರಿಕೆ ಅಧಿಕಾರಿಗಳು ಹೇಳುತ್ತಾರೆ ಎಂದು ರೈತರು ಹೇಳುತ್ತಾರೆ. ಪರಿಹಾರ ಸಿಗದು ರೈತರು ಬೆಳೆ ಬೆಳೆಯುವ ಸಂದರ್ಭದಲ್ಲಿ ಅತಿ ಹೆಚ್ಚು ಕಾಳಜಿ ವಹಿಸುವುದರೊಂದಿಗೆ ಫ್ರೂನಿಂಗ್ ಮಾಡುವಾಗ ಜಾಗ್ರತೆ ವಹಿಸಬೇಕು. ರೋಗಗ್ರಸ್ಥ ಹಣ್ಣುಗಳನ್ನು ತೋಟದಲ್ಲಿ ಇರಲು ಬಿಡಬಾರದು. ಗುಂಡಿ ತೋಡಿ ಅವುಗಳನ್ನು ಮುಚ್ಚಬೇಕು ಎಂದು ತಾಲ್ಲೂಕು ತೋಟಗಾರಿಕಾ ಅಧಿಕಾರಿ ಆದರ್ಶ ತಿಳಿಸಿದ್ದಾರೆ. ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಬೆಳೆಗಳು ನಾಶವಾಗಿದ್ದಲ್ಲಿ ವಿಮೆ ದೊರೆಯುತ್ತದೆ. ರೋಗಗಳು ಬಂದು ಬೆಳೆ ಹಾಳಾದಲ್ಲಿ ಅದಕ್ಕೆ ಯಾವುದೇ ವಿಮೆಯ ಪರಿಹಾರ ಇರುವುದಿಲ್ಲ ರೈತರು ಹೆಚ್ಚಿನ ಜವಾಬ್ದಾರಿ ಮತ್ತು ಕಾಳಜಿಯಿಂದ ಗಿಡಗಳನ್ನು ಆರೈಕೆ ಮಾಡಬೇಕು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.