ವಿಜಯಪುರ(ದೇವನಹಳ್ಳಿ): ಪಟ್ಟಣದ ಶಾಂತಿನಗರದಲ್ಲಿ ಬುಧವಾರ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ವಿತರಕರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು.
ಈ ವೇಳೆ ಮೂರು ತಲೆಮಾರುಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವ ಎಸ್.ಮಂಜುನಾಥ್ ಅವರೊಂದಿಗೆ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್, ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯವನ್ನು ಪತ್ರಿಕಾ ವಿತರಕರಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತದೆ. ಪಿ.ಎಂ.ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಟೌನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಂಜುನಾಥ್ ಮಾತನಾಡಿ, ಸರ್ಕಾರ, ಪತ್ರಿಕಾ ವಿತರಕರನ್ನು ವಾರಿಯರ್ಸ್ ಎಂದು ಗುರುತಿಸಿದೆ. ಆದರೆ ಬಹಳಷ್ಟು ಮಂದಿ ವಿತರಕರು ಬಾಡಿಗೆ ಮನೆಗಳಲ್ಲಿದ್ದಾರೆ. ಅವರ ಮಕ್ಕಳ ಶೈಕ್ಷಣಿಕ ಜೀವನ ಪ್ರೌಢಶಾಲೆಗೆ ಸೀಮಿತವಾಗಿದೆ. ಇಂತಹವರನ್ನು ಗುರುತಿಸಿ ವಿಶೇಷ ಪ್ರಾತಿನಿಧ್ಯ ನೀಡಬೇಕು. ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ತಯಾರಾಗುವ ಬಜೆಟ್‌ನಲ್ಲಿ ವಿತರಕರಿಗಾಗಿ ವಿಶೇಷವಾಗಿ ಅನುದಾನ ಮೀಸಲಿಟ್ಟು ಅವರಿಗೆ ಸಹಕಾರ ನೀಡಬೇಕು ಎಂದರು.
ಜೇಸಿಐ ಅಧ್ಯಕ್ಷ ಬೈರೇಗೌಡ, ಜೇಸಿಐ ಮಾಜಿ ಅಧ್ಯಕ್ಷ ಎನ್.ಸಿ.ಮುನಿವೆಂಕಟರಮಣಪ್ಪ, ಪುರಸಭೆ ಎಂಜಿನಿಯರ್ ಶೇಖರ್, ಹಿರಿಯ ಪತ್ರಿಕಾ ವಿತರಕ ಕೆ.ಮುನಿರಾಜು, ವೆಂಕಟರಮಣಪ್ಪ, ಜನಾರ್ಧನ್, ಭಾಸ್ಕರ್ ಬಾಬು ಇದ್ದರು.