ಸೋಮವಾರ, ಜನವರಿ 20, 2020
20 °C

ಶಿಲ್ಪಕಲೆಗೆ ಜೀವ ತುಂಬುವ ವಿಶ್ವಕರ್ಮರು: ಪುರೋಹಿತ ಮಂಜುನಾಥಾಚಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಕಲೆಯನ್ನೇ ಉಸಿರಾಗಿಸಿಕೊಂಡಿರುವ ವಿಶ್ವಕರ್ಮ ಸಮುದಾಯದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಪುರೋಹಿತ ಮಂಜುನಾಥಾಚಾರ್ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ನಲ್ಲೂರು ಗ್ರಾಮದಲ್ಲಿ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ನೆರವಾಗಬೇಕು. ಶಿಲ್ಪಕಲಾ ವಿಶ್ವಕ್ಕೆ ಸುಂದರ ರೂಪ ನೀಡಿದ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ. ವಸ್ತುವಿಗೆ ಆಕೃತಿ ಹಾಗೂ ರೂಪ ನೀಡುವ ಕೆಲಸದಲ್ಲಿ ಈ ಸಮಾಜದವರ ಕೊಡುಗೆ ಅಪಾರವಾದದ್ದು’ ಎಂದರು.

‘ಅಮರ ಶಿಲ್ಪಿ ಜಕಣಾಚಾರಿ ನೇತೃತ್ವದಲ್ಲಿ ಜೀವ ತುಂಬಿರುವ ವಿಶ್ವವಿಖ್ಯಾತ ಬೇಲೂರು ಮತ್ತು ಹಳೇಬೀಡಿಗೆ 900 ವರ್ಷ ತುಂಬುವ ಕಾಲ ಸನಿಹವಾಗಿದೆ. ವಿಶ್ವವೇ ಇತ್ತ ನೋಡುವಂತೆ ವಿಶ್ವಕರ್ಮ ಸಮಾಜದವರು ಶಿಲ್ಪಗಳನ್ನು ಕೆತ್ತಿದ್ದಾರೆ. ಶಿಲ್ಪಕಲಾ ಪ್ರಪಂಚ ಸುಂದರವಾಗಿ ಕಾಣುತ್ತಿದೆ ಎಂದರೆ ಅದಕ್ಕೆ ವಿಶ್ವಕರ್ಮರ ಕೊಡುಗೆ ಇದೆ’ ಎಂದರು.

ಶಿಕ್ಷಕ ನಾಗರಾಜಾಚಾರ್ ಮಾತನಾಡಿ, ‘ಬೇಲೂರು, ಹಳೇಬೀಡು, ಬಾದಾಮಿ, ಪಟ್ಟದಕಲ್ಲು ಸೇರಿದಂತೆ ಇತರ ದೇವಸ್ಥಾನಗಳ ಕೆತ್ತನೆಯಲ್ಲಿ ವಿಶ್ವಕರ್ಮ ಜನಾಂಗದ ಸೇವೆ ಸ್ಮರಣೀಯ. ವಾಸ್ತುಶಿಲ್ಪ ಕಲೆಯಲ್ಲಿ ಭಾರತ ಪ್ರಸಿದ್ಧಿ ಗಳಿಸಿದ್ದು ಈ ಸಮುದಾಯದಿಂದಲೇ ಎಂಬುದನ್ನು ಎಲ್ಲರೂ ಅರಿಯಬೇಕು. ಶಿಕ್ಷಣದಿಂದ ಬದಲಾವಣೆ ಕಾಣಲು ಸಾಧ್ಯ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಹೇಳಿದರು.

‘ಪ್ರಯೋಜನವಿಲ್ಲವೆಂದು ಮೂಲೆಗಿರಿಸುವ ಮರ, ಲೋಹ ಹಾಗೂ ಕಲ್ಲಿಗೆ ಸುಂದರ ಆಕೃತಿ ನೀಡಿ ಶಿಲೆಯನ್ನಾಗಿಸುವ ನೈಪುಣ್ಯ ವಿಶ್ವಕರ್ಮರಿಗೆ ಇದೆ. ಈ ಸಮಾಜದವರು ಎಲೆಮರೆ ಕಾಯಿಯಂತೆ ಇದ್ದು, ವಸ್ತುವಿಗೆ ರೂಪವನ್ನು ನೀಡುತ್ತಾರೆ. ಇಂತಹ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಾಗಿದೆ. ಸಮಾಜದಲ್ಲಿ ತಾಂತ್ರಿಕವಾಗಿ ಆವಿಷ್ಕಾರಗಳು ನಡೆಯುತ್ತಿದ್ದರೂ ವಿಶ್ವಕರ್ಮ ಸಮಾಜದವರು ಶಿಲೆಗೆ ನೀಡುವಂತಹ ರೂಪಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎಂದು ಹೇಳಿದರು.

ಡೇರಿ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಮಾತನಾಡಿ, ‘ಕಲೆಗೆ ಯಾವುದೇ ಜಾತಿ ಮತ್ತು ಧರ್ಮವಿಲ್ಲ. ರಾಜ್ಯದಲ್ಲಿ ಗಂಗರು ಮತು ಹೊಯ್ಸಳರ ಕಲಾಕೃತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೀಗಾಗಿ ಕರ್ನಾಟಕವನ್ನು ಶಿಲ್ಪಕಲೆಗಳ ತವರೂರು ಎನ್ನಬಹುದು. ಅಮರಶಿಲ್ಪಿ ಜಕಣಾಚಾರಿಯವರ ಸಮಗ್ರ ಜೀವನ ಕುರಿತು ನಾಡಿನ ಜನತೆಗೆ ಪರಿಚಯಿಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದರು.

‘ಜಗತ್ತೇ ಮೆಚ್ಚುವ ಕೆಲಸ ಮಾಡಿರುವ ಜಕಣಾಚಾರಿ ಅವರ ಜೀವನಾದರ್ಶ ಮತ್ತು ಅವರ ಕಲೆಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾಹಿತಿ ಸಂಗ್ರಹಿಸಬೇಕು. ಆ ಮೂಲಕ ಸಾರ್ವಜನಿಕರಿಗೆ ಅವರ ಬದುಕಿನ ಬಗ್ಗೆ ತಿಳಿಸಬೇಕು. ದೇಶದ ವಿವಿಗಳಲ್ಲಿ ಅವರ ಹೆಸರಿನ ಅಧ್ಯಯನ ಕೇಂದ್ರಗಳಾಗಬೇಕು’ ಎಂದರು.

ವಿಶ್ವಕರ್ಮ ಮುಖಂಡರಾದ, ರಾಜಣ್ಣಾಚಾರ್, ಬಸವರಾಜಾಚಾರಿ, ನಾರಾಯಣಾಚಾರ್, ಪ್ರಸಾದ್, ಶಿಕ್ಷಕ ಮಂಜುನಾಥ್, ತೊರ‍್ನಹಳ್ಳಿ ಪ್ರಕಾಶ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು