ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ತ್ಯಾಜ್ಯ: ಕ್ರಿಮಿನಲ್‌ ಪ್ರಕರಣದ ಎಚ್ಚರಿಕೆ

Doddaballapur
Last Updated 13 ಏಪ್ರಿಲ್ 2021, 3:27 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡತುಮಕೂರು ಕೆರೆ ಅಂಗಳಕ್ಕೆ ಕಲ್ಲುಪುಡಿ ತ್ಯಾಜ್ಯ ತಂದು ಸುರಿಯುತ್ತಿರುವ ಬಗ್ಗೆ ಏ.10ರ ’ಪ್ರಜಾವಾಣಿ’ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಸೋಮವಾರ ಸಣ್ಣ ನೀರಾವರಿ ಇಲಾಖೆ ಜಿಲ್ಲಾ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಜುನಾಥ್‌, ಕೆರೆ ಅಂಗಳಕ್ಕೆ ಯಾವುದೇ ರೀತಿಯ ತ್ಯಾಜ್ಯ ತಂದು ಸುರಿಯುವುದು ಕ್ರಿಮಿನಲ್‌ ಪ್ರಕರಣವಾಗಲಿದೆ. ಈ ಹಿನ್ನೆಲೆಯಲ್ಲಿ ಕೆರೆಗೆ ಸಮೀಪದಲ್ಲೇ ಇರುವ ಗ್ರಾನೈಟ್‌ ಕಂಪನಿಗಳಿಗೆ ನೋಟಿಸ್‌ ನೀಡಿ ಕಾರಣ ಕೇಳುವ ಮೂಲಕ ಕೆರೆ ಅಂಗಳದ ತ್ಯಾಜ್ಯ ಬೇರೆಡೆಗೆ ಸಾಗಿಸುವಂತೆ ಸೂಚನೆ ನೀಡಲಾಗುವುದು ಎಂದರು.

ತಾಲ್ಲೂಕಿನ ಅರಳುಮಲ್ಲಿಗೆ ಕೆರೆ ಅಂಗಳ ಸೇರಿದಂತೆ ನಗರದ ಅಂಚಿನಲ್ಲಿರುವ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ಮೂಲಕ ಕೆರೆ ವಿರೂಪಗೊಳಿಸಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಹಾಗೂ ಪಂಚಾಯಿತಿಗಳು ಸೂಕ್ತ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ. ಅನುಮತಿ ಇಲ್ಲದೆ ಕೆರೆ ಅಂಗಳದಲ್ಲಿ ಯಾರೇ ಮಣ್ಣು ತೆಗೆದು ಸಾಗಣೆ ಮಾಡುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದೊಡ್ಡತುಮಕೂರು ಗ್ರಾಮ ಪಂಚಾಯಿತಿ ಸದಸ್ಯ ಟಿ.ಬಿ.ಲೋಕೇಶ್‌ ಮಾಹಿತಿ ನೀಡಿ, ಈ ಹಿಂದೆಯೂ ದೊಡ್ಡತುಮಕೂರು ಕೆರೆಗೆ
ಕಲ್ಲುಪುಡಿ ತ್ಯಾಜ್ಯ ರಾತ್ರಿ ವೇಳೆ ತಂದು ಸುರಿಯುವಾಗ ಲಾರಿಗಳನ್ನು ಅಡ್ಡಿಗಟ್ಟಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಈಗ ಕೆರೆ ಅಂಗಳದಲ್ಲಿ ತಂದು ಸುರಿಯಲಾಗಿರುವ ಕಲ್ಲುಪುಡಿ ತ್ಯಾಜ್ಯದಲ್ಲಿ ಅಪಾಯಕಾರಿ ರಾಸಾಯನಿಕ ವಸ್ತು ಸೇರಿದೆ. ಮಳೆ ಬಂದರೆ ಕಲ್ಲುಪುಡಿ ತ್ಯಾಜ್ಯದಲ್ಲಿನ ರಾಸಾಯನಿಕ ಇಡೀ ಕೆರೆ ಆವರಿಸಿಕೊಳ್ಳಲಿದೆ. ತುರ್ತಾಗಿ ಕಲ್ಲುಪುಡಿ ತ್ಯಾಜ್ಯ ಕೆರೆ ಅಂಗಳದಿಂದ ಸಾಗಿಸುವ ಬಗ್ಗೆ ಪಂಚಾಯಿತಿ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT