ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ 

ಜಲಶಕ್ತಿ ಅಭಿಯಾನ ಕಾಲ್ನಡಿಗೆ ಜಾಥಾ
Last Updated 8 ಆಗಸ್ಟ್ 2019, 13:13 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಜಲ ಸಂರಕ್ಷಣೆಗಾಗಿ ಹಮ್ಮಿಕೊಂಡಿರುವ ಜಲ ಶಕ್ತಿ ಅಭಿಯಾನಕ್ಕೆ ಪ್ರತಿಯೊಬ್ಬರೂ ಸಹಕರಿಸಿ ಜಲಮೂಲ ರಕ್ಷಣೆಗೆ ಒತ್ತು ನೀಡಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದ ಮುಂಭಾಗ ಬೆಂಗಳೂರು ಕೇಂದ್ರ ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಗಳ ಪ್ರಥಮದರ್ಜೆ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆ ಕೊಶ ಮತ್ತು ಪದವಿ ಪೂರ್ವ ಕಾಲೇಜುಗಳು ಹಾಗೂ ಗ್ರಾಮಾಂತರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಲಶಕ್ತಿ ಅಭಿಯಾನ ಕಾಲ್ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ಗ್ರಾಮಾಂತರ ಜಿಲ್ಲಾದ್ಯಂತಮಳೆ ನೀರು ಕೊಯ್ಲು ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕಾರ್ಖಾನೆಗಳು, ವಾಣಿಜ್ಯ ಘಟಕ ಮತ್ತು ಸಂಕೀರ್ಣ ಸಮೂಹಗಳು, ಕಲ್ಯಾಣ ಮಂದಿರ, ಪೆಟ್ರೋಲ್ ಬಂಕ್, ಧಾನ್ಯ ಪರಿಕರ ಗೊಬ್ಬರ ದಾಸ್ತಾನು ಮಳಿಗಗಳು, ವೈನರಿ, ಡಿಸ್ಟಿಲರಿ, ಶಾಲಾ ಕಾಲೇಜು ಮತ್ತು ಮನೆ ಕಟ್ಟಡಗಳಲ್ಲಿ ಒಂದು ಸಾವಿರ ಚದರ ಅಡಿಗಳಿಗಿಂತ ಹೆಚ್ಚು ಇರುವ ಮೆಲ್ಛಾವಣೆಯಲ್ಲಿ ಮಳೆ ನೀರು ಸಂಗ್ರಹ ಕಡ್ಡಾಯ ಎಂದು ಹೇಳಿದರು.

‘ಮಳೆ ನೀರು ಸಂಗ್ರಹಿಸುವ ಸಂಪುಗಳನ್ನು ಕಡ್ಡಾಯವಾಗಿ ನಿರ್ಮಿಸಲು ಈಗಾಗಲೇ ಸೂಚಿಸಲಾಗಿದೆ, ತಂಡಗಳನ್ನು ರಚಿಸಿ ತಾಲ್ಲೂಕಿನ ಎಲ್ಲ ಮನೆಗಳ ಮತ್ತು ಖಾಸಗಿ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಗಳಿಗೆ ಈಗಾಗಲೇ ತಿಳಿವಳಿಕೆ ಪತ್ರ ನೀಡಲಾಗಿದೆ, ಜಲರಕ್ಷಣೆ ನಮ್ಮೆಲ್ಲರ ಕರ್ತವ್ಯವೆಂದು ಒತ್ತಿ ಹೇಳುತ್ತಲೇ ಇದ್ದೇವೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ಮಳೆ ಕೊಯ್ಲು ಅಳವಡಿಕೆಯಲ್ಲಿ ಪ್ರಸ್ತುತ ಮೊದಲ ಸ್ಥಾನದಲ್ಲಿದೆ, ದೇವನಹಳ್ಳಿ ತಾಲ್ಲೂಕು ನೀಲಗಿರಿ ಮರ ತೆರವು ಕಾರ್ಯಾಚರಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ದೊಡ್ಡಬಳ್ಳಾಪುರ 128, ನೆಲಮಂಗಲ 139, ಹೊಸಕೋಟೆ 220, ದೇವನಹಳ್ಳಿ 254 ಒಟ್ಟು 741 ಎಕರೆ ನೀಲಗಿರಿ ಮರ ಕಳೆದ ಇಪ್ಪತ್ತು ದಿನಗಳಲ್ಲಿ ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆ ನಿರಂತರವಾಗಿ ಪೂರ್ಣಗೊಳ್ಳುವವರೆಗೆ ನಡೆಯಲಿದೆ’ ಎಂದು ಹೇಳಿದರು.

‘ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾಗಿ ಜನ ಜಾನುವಾರುಗಳ ಪಾಡು ಹೇಳತೀರದು. ಇಲ್ಲಿ ಕುಡಿಯಲು ನೀರಿಲ್ಲ ಬಯಲು ಸೀಮೆಯಲ್ಲಿ ಜಲಮೂಲವನ್ನು ನಾವೇ ಸಂರಕ್ಷಿಸಬೇಕೆ ಹೊರತು ಬೇರೆಯವರು ಬರುವುದಿಲ್ಲ. ಕೆಲವರಿಗೆ ಇದು ಇನ್ನೂ ಅರ್ಥವಾಗಿಲ್ಲ. ಈ ಅಭಿಯಾನದ ಮೂಲಕ ಅರ್ಥ ಮಾಡಿಸಬೇಕು’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯಾನಿರ್ವಹಣಾಧಿಕಾರಿ ಮುರುಡಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಪ್ರಸ್ತುತ ಆರು ಕೆರೆ ಅಭಿವೃದ್ಧಿಯಾಗಿದೆ, 16 ಬೃಹತ್ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ, 26 ಕುಂಟೆ ದುರಸ್ತಿಯಾಗಿವೆ ಜಲಸಂರಕ್ಷಣೆಗೆ ವಿಶೇಷ ಅನುದಾನವಿಲ್ಲ. ನರೇಗಾ ಯೋಜನೆಯಡಿ ಮಾಡಬೇಕು’ ಎಂದು ಹೇಳಿದರು.

ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರಾದ ಡಾ.ರವಿಚಂದ್ರ ಮತ್ತು ಡಾ.ಸಜ್ಜದ್ ಪಾಷಾ ಮಾತನಾಡಿ, ‘ಒಟ್ಟು 23 ಕಾಲೇಜುಗಳಿಂದ 865 ವಿದ್ಯಾರ್ಥಿಗಳು ಜಲಶಕ್ತಿ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ನೀರಿನ ಕೊರತೆಯಿಂದಾಗುತ್ತಿರುವ ಸಮಸ್ಯೆಗಳು ಮತ್ತು ಕಂಡುಕೊಳ್ಳಬೇಕಾಗಿರುವ ಪರಿಹಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲಾಗಿದ್ದು ಪ್ರಸ್ತುತ ಭಿತ್ತಿ ಪತ್ರಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಭಿಯಾನ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕರಿಯಪ್ಪ, ಪ್ರಭಾರ ತಹಶೀಲ್ದಾರ್ ಬಾಲಕೃಷ್ಣ, ಮುಖಂಡ ಬಿ.ಕೆ.ಶಿವಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT