ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ಬೆಟ್ಟದ ಮೇಲೆಯೇ ನೀರಿಂಗಿಸಿ...

ಪುರಾತನ ಕಾಲದಲ್ಲೇ ಕೋಟೆಯ ಮೇಲೆ ಜಲಸಂರಕ್ಷಣೆಯ ಚಿಂತನೆ
Last Updated 5 ಆಗಸ್ಟ್ 2020, 9:22 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಯಾವುದೇ ಗ್ರಾಮಗಳಲ್ಲಿನ ನೋಡಿದರೂಕೃಷಿ ಜಮೀನಿನಲ್ಲಿ ನರೇಗಾ ಯೋಜನೆಯಡಿ ಮಳೆ ನೀರು ಇಂಗಿಸುವ ಕೆಲಸಗಳು ನಡೆಯುತ್ತಿವೆ.

ಆದರೆ ಶತಮಾನಗಳ ಹಿಂದೆಯೇ ವೈಜ್ಞಾನಿಕ ವಿಧಾನದ ಮೂಲಕ ಮಾಕಳಿ (ಮಾಕಳಿ ದುರ್ಗ) ಬೆಟ್ಟದ ಮೇಲೆ ಮಳೆ ನೀರು ಇಂಗಿಸುವ ಕೆಲಸ ನಡೆದಿದೆ. ಇದು ಮಳೆ ನೀರನ್ನು ತಡೆದು ಇಂಗಿಸುವ ಕೆಲಸಕ್ಕೆ ಸಾಕ್ಷಿಯಾಗಿದೆ.

‘ಮಾಕಳಿ ದುರ್ಗದ ಮೇಲೆ ಅಷ್ಟೇನು ವಿಶಾಲವಾದ ಭೂ ಪ್ರದೇಶ ಇಲ್ಲ. ಆದರೆ ಕೋಟೆ ಇರುವ ದಕ್ಷಿಣ ಭಾಗದಲ್ಲಿ ಮಾತ್ರ ಎತ್ತರ, ತಗ್ಗು ಹೊಂದಿರುವ ಒಂದಿಷ್ಟು ಭೂ ಪ್ರದೇಶ ಇದೆ. ಈ ಭಾಗದಲ್ಲಿ ಅಂದಿನ ಕಾಲಕ್ಕೆ ಸಾಕು ಪ್ರಾಣಿಗಳಿಗೆ ಹುಲ್ಲು ಬೆಳೆಯಲು ಹಾಗೂ ಸಾಕು ಪ್ರಾಣಿಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಸ್ಥಳೀಯವಾಗಿಯೇ ದೊರೆಯುತ್ತಿದ್ದ ಕಲ್ಲುಗಳಿಂದಲೇ ತಡೆಗೋಡೆಗಳನ್ನು ನಿರ್ಮಿಸಿಕೊಂಡು ಮಳೆ ನೀರು ಸಂಗ್ರಹ ಮಾಡಿರುವುದನ್ನು ಇಂದಿಗೂ ಕಾಣಬಹುದು’ ಎನ್ನುತ್ತಾರೆ ಮಾಕಳಿ ಮಲ್ಲೇಶ್ವರಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್‌ ಅಧ್ಯಕ್ಷ ಮಂಜುನಾಥರೆಡ್ಡಿ.

ಬೆಟ್ಟದ ಮೇಲೆ ಬೀಳುವ ಮಳೆ ನೀರು ಪಶ್ಚಿಮಾಭಿಮುಖವಾಗಿ ಬೆಟ್ಟದ ತಪ್ಪಲಿನ ಗುಂಡಮಗೆರೆ ಕೆರೆ ಹಾಗೂ ಒಂದಿಷ್ಟು ನೀರು ದಕ್ಷಿಣ ಭಾಗವಾಗಿಯೂ ಬೆಟ್ಟದಲ್ಲಿನ ಬೃಹತ್‌ ಬಂಡೆಗಳ ಸಂದಿಗಳ ಮೂಲಕ ಕೆಳಗೆ ಹರಿದು ಬರುತ್ತವೆ. ನಿರಂತರವಾಗಿ ಮಳೆ ಬಂದಾಗ ಮಾತ್ರ ಬೆಟ್ಟದ ಮೇಲಿನಿಂದ ನೀರು ಕೆಳಗೆ ಬರುತ್ತವೆ. ಉಳಿದಂತೆ ಸಣ್ಣ ಪುಟ್ಟ ಮಳೆ ಬಂದರೆ ಬೆಟ್ಟದಲ್ಲಿನ ಚೆಕ್‌ಡ್ಯಾಂ ಮಾದರಿಯಲ್ಲಿ ನಿರ್ಮಿಸಲಾಗಿರುವ ತಡೆಗೋಡೆಗಳ ಹಿಂದೆಯೆ ನಿಂತು ಇಂಗುತ್ತವೆ.

ಇದಲ್ಲದೆ ಬೆಟ್ಟದ ತಪ್ಪಲಿನ ಗುಂಜೂರು ಗ್ರಾಮದ ಸಮೀಪದ ಹಾಲುಮುತ್ತರಾಯಸ್ವಾಮಿ ದೇವಾಲಯ ಸಮೀಪ ನಿರ್ಮಿಸಲಾಗಿರುವ ಕಲ್ಯಾಣಿಯಲ್ಲಿ ಬೇಸಿಗೆ ಕಾಲದಲ್ಲೂ ಸಹ ಹಾಲಿನಂತಹ ಬಣ್ಣದ ನೀರು ಇದ್ದೇ ಇರುತ್ತವೆ.

ಬೆಟ್ಟದ ಮೇಲೆ ಅಂದಿನ ಕಾಲಕ್ಕೆ ಮಳೆ ನೀರನ್ನು ತಡೆದು ನಿಲ್ಲಿಸಲು ಕಲ್ಲಿನಿಂದ ನಿರ್ಮಿಸಲಾಗಿರುವ ತಡೆಗೋಡೆ ಕಲ್ಲುಗಳು ಅಲ್ಲಲ್ಲಿ ಶಿಥಿಲವಾಗಿ ಹಾಳಾಗಿವೆ. ಇವುಗಳನ್ನು ಅರಣ್ಯ ಇಲಾಖೆ ವತಿಯಿಂದ ಮತ್ತೆ ಕಟ್ಟಿಸುವ ಕೆಲಸ ಆಗಬೇಕಿದೆ. ಬೆಟ್ಟದ ಮೇಲೆ ಮಳೆ ನೀರು ಸಂಗ್ರಹವಾಗಿ ಇಂಗಿದರೆ ಮಾತ್ರ ಬೆಟ್ಟದ ಹಸಿರು ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎನ್ನುತ್ತಾರೆ ಚಾರಣಿಗ ಚಿದಾನಂದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT