ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತ l ಬೇಸಿಗೆಯಲ್ಲಿ ಬೊಗಸೆ ನೀರಿಗೂ ತತ್ತರ

Published 30 ಏಪ್ರಿಲ್ 2024, 4:08 IST
Last Updated 30 ಏಪ್ರಿಲ್ 2024, 4:08 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಬೇಸಿಗೆ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚುತ್ತಿದೆ. ಒಂದೊಂದು ಕೊಡ ನೀರಿಗಾಗಿ ಜನರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜನರು ನೀರಿಗಾಗಿ ಅವಲಂಬಿತವಾಗಿರುವ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಬವಣೆ ಮತ್ತಷ್ಟು ಗಂಭೀರವಾಗಲಿದೆ ಎನ್ನುವ ಆತಂಕ ಕಾಡುತ್ತಿದೆ.

ಎರಡು ವರ್ಷಗಳ ಹಿಂದೆ ಎಚ್.ಎನ್.ವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಸಿದ್ದ ಸಮಯದಲ್ಲೇ ಉತ್ತಮವಾಗಿ ಮಳೆ ಸುರಿದು ಕೆರೆ, ಕೊಳವೆಬಾವಿಗಳ ನೀರಿನ ಇಳುವರಿಯಲ್ಲಿ ಏರಿಕೆ ಆಗಿತ್ತು. ಕಳೆದ ವರ್ಷದಲ್ಲಿ ನೀರಿನ ಬವಣೆ ಅಷ್ಟಾಗಿ ಕಂಡು ಬಂದಿರಲಿಲ್ಲ. ಈ ವರ್ಷದಲ್ಲಿ ಬಹುತೇಕ ಕೆರೆ, ಕುಂಟೆಗಳು ಬತ್ತಿಹೋಗಿವೆ. ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ಜನರಿಗೆ ಅಗತ್ಯ ನೀರು ಪೂರೈಕೆ ಮಾಡಲು ಹೆಣಗಾಡುತ್ತಿವೆ.

ಕೆರೆಗಳಿಗೆ ಎಚ್.ಎನ್.ವ್ಯಾಲಿ ಯೋಜನೆಯಡಿ ಹರಿಸಲಾಗಿದ್ದ ನೀರು ಕೆಲವು ಕೆರೆಗಳಲ್ಲಿ ಅಲ್ಪಸ್ವಲ್ಪ ಉಳಿದಿದೆ. ಆದರೆ, ಹಸಿರು ಬಣ್ಣಕ್ಕೆ ತಿರುಗಿರುವ ಕಾರಣ ದನಕರು ಕುಡಿಯುವುದಕ್ಕೆ ಯೋಗ್ಯವಾಗಿಲ್ಲದಂತಾಗಿದೆ. ಅದೇ ನೀರು ಶೋಧಿಸಿ ದನಕರುಗಳಿಗೆ ಕುಡಿಯುವುದಕ್ಕೆ ಉಪಯೋಗಿಸಲಾಗುತ್ತಿದೆ. ಬಿಸಿಲಿನ ತಾಪಮಾನ ಕನಿಷ್ಠ 22 ಡಿಗ್ರಿ, ಗರಿಷ್ಠ ಉಷ್ಣಾಂಶ 38 ದಾಖಲಾಗುತ್ತಿದೆ. ಜನರು ತಮ್ಮ ದಾಹ ನೀಗಿಸಿಕೊಂಡು ರಾಸುಗಳನ್ನು ಕಾಪಾಡಿಕೊಳ್ಳಲು ಪರದಾಡುತ್ತಿದ್ದಾರೆ. ತಳ್ಳುವ ಗಾಡಿಗಳಲ್ಲಿ ನೀರು ಸಂಗ್ರಹಿಸುವ ದೃಶ್ಯ ನೋಡಬಹುದಾಗಿದೆ.

ಕುರಿಗಳನ್ನು ಮೇಯಿಸಲು ಬೆಳಿಗ್ಗೆ 7ಕ್ಕೆ ಹೊರಗೆ ಕರೆದುಕೊಂಡು ಹೋದರೆ ಅವುಗಳಿಗೆ ಎಲ್ಲಿಯೂ ನೀರು ಸಿಗದೆ ಬೆಳಿಗ್ಗೆ 11ಗಂಟೆಗೆಲ್ಲ ವಾಪಸ್ ಬರಬೇಕಾಗಿದೆ. ಟಬ್‌ಗಳಲ್ಲಿ ಸಂಗ್ರಹಿಸಿದ ನೀರು ಕುಡಿಸಿದ ನಂತರ ಕೊಟ್ಟಿಗೆಯೊಳಗೆ ಕೂಡಿ ಹಾಕಬೇಕಾಗಿದೆ. ಸಂಜೆ 5ಗಂಟೆಗೆ ಹೊರಗೆ ಮೇಯಿಸಲು ಹೋಗಬೇಕಾಗಿದೆ ಎಂದು ಕುರಿಗಾಹಿ ನರಸಿಂಹಪ್ಪ, ಮುನಿಯಪ್ಪ ಹೇಳುತ್ತಾರೆ.

ಪಟ್ಟಣದಲ್ಲಿ ಒಟ್ಟು 116 ಕೊಳವೆ ಬಾವಿಗಳಿವೆ. 100 ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದೆ. 12 ಕೊಳವೆ ಬಾವಿಗಳು ಕೆರೆಗಳಲ್ಲಿವೆ. ಅವುಗಳನ್ನು ಸಕ್ರಿಯಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 4 ಕೊಳವೆ ಬಾವಿಗಳು ವಿಫಲವಾಗಿವೆ. 8 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿವೆ. 2 ಟ್ಯಾಂಕರ್‌ಗಳಲ್ಲಿ 1 ಮತ್ತು 9ನೇ ವಾರ್ಡ್‌ಗಳಿಗೆ ಪೈಪ್ ಲೈನ್ ಇಲ್ಲದಿರುವ ಕಡೆ ನೀರು ಕೊಡಲಾಗುತ್ತಿದೆ.ಪ್ರತಿ ವಾರ್ಡ್‌ ನಲ್ಲಿ ವಾರಕ್ಕೊಮ್ಮೆ ನೀರು ಕೊಡಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಕುಮಾರ್ ಅವರು ಹೇಳಿದರು.

ಬಿಂದಿಗೆಗಳಲ್ಲಿ  ಕಲುಷಿತವಾಗಿರುವ ನೀರು
ಬಿಂದಿಗೆಗಳಲ್ಲಿ  ಕಲುಷಿತವಾಗಿರುವ ನೀರು
ಕುಡಿಯುವ ನೀರಿಗಾಗಿ ವೆಂಕಟಗಿರಿಕೋಟೆಗೆ ಹೋಗಬೇಕು. ದನಕರುಗಳಿಗೆ ಟ್ಯಾಂಕ್‌ಗೆ ಬಿಡುವ ನೀರನ್ನೇ ಶೋಧಿಸಿ ಬಳಸಬೇಕಾಗಿದೆ. ಇದರಿಂದ ತುಂಬಾ ಸಮಸ್ಯೆಯಾಗಿದೆ
ಶಿವಕುಮಾರ್ ಹೊಸಹುಡ್ಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT