ಮಂಗಳವಾರ, ಸೆಪ್ಟೆಂಬರ್ 22, 2020
22 °C

ಜಿಎಸ್‌ಟಿ ಹೊಡೆತಕ್ಕೆ ಅವನತಿ ಹಾದಿ ಹಿಡಿದ ನೇಕಾರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ನೇಕಾರಿಕೆ ಗೃಹ ಕೈಗಾರಿಕೆಯಾಗಿರುವುದರಿಂದ ಕೇಂದ್ರ ಸರ್ಕಾರ ಇದನ್ನು ಜಿಎಸ್‍ಟಿಯಿಂದ ಹೊರಗಿಡಬೇಕು.ಇಲ್ಲವಾದರೆ ನೇಕಾರಿಕೆ ಸಂಪೂರ್ಣವಾಗಿ ಬಂದ್‌ ಆಗಲಿದೆ. ನಗರದಲ್ಲಿನ ಸುಮಾರು 30 ಸಾವಿರ ನೇಕಾರರು ಸೇರಿದಂತೆ ಇಡೀ ರಾಜ್ಯದ ನೇಕಾರಿಕೆ ಉದ್ಯಮವೇ ಸ್ಥಗಿತವಾಗಲಿದೆ ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಆತಂಕ ವ್ಯಕ್ತಪಡಿಸಿದರು.

ನಗರದ ನವೋದಯ ವಿದ್ಯುತ್‍ಚಾಲಿತ ಮಗ್ಗಗಳ ನೇಕಾರರ ಸಹಕಾರ ಸಂಘದ ಕಾರ್ಯಾಲಯದಲ್ಲಿ ನೇಕಾರರ ಹೋರಾಟ ಸಮಿತಿ ನೇತೃತ್ವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇಶದಲ್ಲಿ ಉಂಟಾಗುತ್ತಿರುವ ಆರ್ಥಿಕ ಹಿಂಜರಿತದ ಪರಿಣಾಮ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಸ್ಥಗಿತವಾಗುತ್ತಿವೆ. ಇದರಲ್ಲಿ ನೇಯ್ಗೆ ಉದ್ಯಮವೂ ಸೇರಿದೆ. ನೇಕಾರರು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಇದರ ಜತೆಗೆ ಜಿಎಸ್‍ಟಿ ಜಾರಿ, ನೋಟು ಅಮಾನ್ಯೀಕರಣ ಮತ್ತು ಸರ್ಕಾರದ ನೀತಿಗಳಿಂದಾಗಿ ನೇಯ್ಗೆ ಉದ್ಯಮ ನೆಲಕಚ್ಚಿದೆ. ಇದರೊಂದಿಗೆ ಸಾಲಮನ್ನಾ ಸೇರಿದಂತೆ ಯಾವುದೇ ಯೋಜನೆಗಳು ನೇಕಾರರನ್ನು ತಲುಪದೇ ಜವಳಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

‘ದೊಡ್ಡಬಳ್ಳಾಪುರದಲ್ಲಿ 8 ತಿಂಗಳಿನಿಂದ ನೇಕಾರರು ನೇಯ್ದ ಬಟ್ಟೆಗಳು ಮಾರಾಟವಾಗದೇ ದಾಸ್ತಾನಾಗಿವೆ. ಮುಂದೇನು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಎಸ್‍ಟಿಯಿಂದ ನೇಕಾರರಿಗೆ ತೊಂದರೆಯಾಗುತ್ತಿದೆ. ಈ ಹಿಂದೆ ಆದಾಯಕ್ಕೆ ತೆರಿಗೆ ಕಟ್ಟುತ್ತಿದ್ದ ಪದ್ದತಿಗೆ ಬದಲಾಗಿ ಜಿಎಸ್‍ಟಿ ಜಾರಿಯಿಂದಾಗಿ ಮೊದಲೇ ತೆರಿಗೆ ಪಾವತಿಸಬೇಕಿದೆ. ಕಚ್ಚಾ ಸಮಗ್ರಿಗಳ ಬೆಲೆ ಹೆಚ್ಚಾಗಿದ್ದು, ನೇಕಾರರು ಲಾಭ ಕಾಣಲಿ ಬಿಡಲಿ ತೆರಿಗೆಯಂತೂ ಕಟ್ಟಲೇಬೇಕಾದ ಪರಿಸ್ಥಿತಿ ಉಂಟಾಗಿದೆ. ದೊಡ್ಡಬಳ್ಳಾಪುರದಲ್ಲಿ ತಯಾರಾಗುವ ಸೀರೆಗಳಿಗೆ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಮಾತ್ರ ಮಾರುಕಟ್ಟೆ ಇದೆ. ಆದರೆ ಮದುವೆ ದಿನಗಳು ಹೆಚ್ಚಾದರೂ, ಸೀರೆಗಳು ಮಾರಾಟವಾಗುತ್ತಿಲ್ಲ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕೊಳ್ಳುವ ಶಕ್ತಿ ಇಲ್ಲದಿರುವುದು ಕಾರಣವಾಗಿದ್ದು, ನೇಕಾರರು ಆತಂಕಗೊಳ್ಳುವಂತಾಗಿದೆ’ ಎಂದರು.

ನಿಂತು ಹೋದ ಸರ್ಕಾರದ ಯೋಜನೆಗಳು: ‘ಜಾಕಾರ್ಡ್‍ಗಳಿಗೆ ಈ ಹಿಂದೆ ನೀಡುತ್ತಿದ್ದ ಕೇಂದ್ರದ ಶೇ 20ರಷ್ಟು ಸಹಾಯಧನದ ಯೋಜನೆ ನಿಲ್ಲಿಸಲಾಗಿದೆ. ರಾಜ್ಯ ಸರ್ಕಾರ ನೀಡುತ್ತಿದ್ದ 10 ಸಾವಿರ ಹಾಗೂ ಕೇಂದ್ರದ 20 ಸಾವಿರ ಸಹಾಯಧನವನ್ನು ಮತ್ತೆ ಮಂಜೂರು ಮಾಡಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಮಗ್ಗಗಳನ್ನು ಅಳವಡಿಸಿದರೆ ಯೋಜನಾ ವೆಚ್ಚದ ಶೇ 40 ಸಹಾಯಧನ ಯೋಜನೆ, 2018-19ನೇ ಸಾಲಿನಲ್ಲಿ ಮಂಜೂರಾಗಿರುವ 1 +1 ಮಗ್ಗದ ಯೋಜನೆಯಲ್ಲಿ ಅನುದಾನದ ಕೊರತೆಯಿಂದಾಗಿ ಆಧುನಿಕ ಮಗ್ಗಗಳು, ಜಾಕಾರ್ಡ್‍ಗಳಿಗೆ ನೀಡುತ್ತಿದ್ದ ಸಹಾಯಧನವನ್ನು ನಿಲ್ಲಿಸಲಾಗಿದೆ. ರಾಜ್ಯ ಸರ್ಕಾರದ ಮೂಲಕವೇ ಈ ಸಹಾಯಧನವನ್ನು ನೀಡಿದರೆ ಅನುಕೂಲವಾಗಲಿದೆ’ ಎಂದರು.

‘ಈ ಹಿಂದೆ ಎಲ್‍ಐಸಿ, ಜವಳಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿದ್ದ ನೇಕಾರರ ಗುಂಪು ವಿಮಾ ಯೋಜನೆಯನ್ನು 2017-18ನೇ ಸಾಲಿನಲ್ಲಿ ಮಾರ್ಪಾಡು ಮಾಡಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಈಗ ಕೇಂದ್ರ ಸರ್ಕಾರ ಹಾಗೂ ಫಲಾನುಭವಿ ಮಾತ್ರವೇ ಯೋಜನೆಯ ವಿಮಾ ಕಂತು ಭರಿಸುತ್ತಿದ್ದು, ರಾಜ್ಯದಲ್ಲಿ 48 ನೇಕಾರರ ಮರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು ₹1 ಕೋಟಿಗಳಷ್ಟು ವಿಮಾ ಹಣ ಇನ್ನೂ ಬಂದಿಲ್ಲ. ಆದರೆ ನೇಕಾರರ ಬಳಿ ವಿಮಾ ಕಂತು ಮಾತ್ರ ಕಟ್ಟಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಬಳಿ ಯಾವುದೇ ಉತ್ತರ ಇಲ್ಲ. ನೇಕಾರರ ₹1 ಲಕ್ಷ ಸಾಲ ಮನ್ನಾ ಕುರಿತಾಗಿ ಸಂಬಂಧಪಟ್ಟ ಬ್ಯಾಂಕ್‍ಗಳಿಗೆ ಯಾವುದೇ ಆದೇಶದ ಸುತ್ತೋಲೆ ಬಂದಿಲ್ಲ. ನೇಕಾರರು ಯಂತೋಪಕರಣಗಳಿಗಾಗಿ ಸಹಕಾರ ಬ್ಯಾಂಕ್‍ಗಳಷ್ಟೇ ಅಲ್ಲದೇ ವಾಣಿಜ್ಯ ಬ್ಯಾಂಕ್‍ಗಳಲ್ಲಿಯೂ ಸಾಲ ಪಡೆದಿದ್ದು, ರಾಷ್ಟ್ರೀಕೃತ ಬ್ಯಾಂಕ್‍ಗಳಿಗೂ ಆದೇಶ ಅನ್ವಯವಾಗಬೇಕಿದೆ. ನೇಕಾರರ ವಸತಿ ಯೋಜನೆಯಲ್ಲಿ ರಾಜ್ಯ ಸರ್ಕಾರದ ₹1.2 ಲಕ್ಷ ಹಾಗೂ ಕೇಂದ್ರದ ₹1.5 ಲಕ್ಷ ಸಹಾಯಧನ ನೇಕಾರರಿಗೆ ತಲುಪದೇ, ನೇಕಾರರು ಮನೆಗಳನ್ನು ಸಾಲ ಮಾಡಿ ಪೂರ್ಣ ಮಾಡಬೇಕಾಗಿದೆ’ ಎಂದರು.

ಆರ್ಥಿಕ ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲ ಮಾಡಬೇಕು. ಸ್ಥಗಿತಗೊಂಡಿರುವ ನೇಕಾರರ ಯೋಜನೆಗಳನ್ನು ಜಾರಿಗೊಳಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಲಾಗುವುದು. ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ನೇಕಾರರ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಡಿ.ವಿ.ಸೂರ್ಯಪ್ರಕಾಶ್, ಎನ್.ಲೋಕೇಶ್, ಉಪಾಧ್ಯಕ್ಷ ಜೆ.ಎಸ್.ಮಂಜುನಾಥ್, ಉಜ್ಜಿನಿ ನಾರಾಯಣಪ್ಪ, ಎಸ್.ಎನ್.ಶಿವರಾಂ, ಡಿ.ಎ.ಸಂಜೀವಪ್ಪ, ಖಜಾಂಚಿ ಆರ್. ರಂಗಸ್ವಾಮಿ, ಜಂಟಿ ಕಾರ್ಯದರ್ಶಿ ಈಶ್ವರಯ್ಯ, ಲಕ್ಷ್ಮೀಪತಿ, ರಮೇಶ್ ರೆಡ್ಡಿ ಹಾಗೂ ಸಮಿತಿ ಸದಸ್ಯರು, ನೇಕಾರರು ಹಾಜರಿದ್ದರು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.