ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಪಿತೃಗಳ ಸಮಾಧಿಗೆ ಪೂಜೆ

ಹಿರಿಯರ ಹಬ್ಬ ಆಚರಣೆ
Last Updated 7 ಅಕ್ಟೋಬರ್ 2021, 7:08 IST
ಅಕ್ಷರ ಗಾತ್ರ

ವಿಜಯಪುರ:ಮಹಾಲಯ ಅಮಾವಾಸ್ಯೆ ಅಂಗವಾಗಿ ಬುಧವಾರ ಜನರು ಸ್ಮಶಾನಗಳಿಗೆ ತೆರಳಿ ಹಿರಿಯರ ಸಮಾಧಿಗಳಿಗೆ ಶ್ರದ್ಧಾಭಕ್ತಿಗಳಿಂದ ಪೂಜೆ ಸಲ್ಲಿಸಿದರು.

ಕಾಲನ ಕರೆಗೆ ಓಗೊಟ್ಟು ಮಣ್ಣಾದ ಹಿರಿಯರು, ಬಂಧುಗಳು ತಮ್ಮೊಂದಿಗೆ ಕಳೆದ ದಿನಗಳನ್ನು ನೆನೆದು ಭಾವುಕರಾದರು. ಸಮಾಧಿಗಳ ಮುಂದೆ ಅವರಿಗಿಷ್ಟವಾಗಿದ್ದ ತಿಂಡಿ, ಆಹಾರವನ್ನಿಟ್ಟು ನೈವೇದ್ಯ ಅರ್ಪಿಸಿದರು.

ಬಾದ್ರಪದ ಮಾಸ ಕೃಷ್ಣಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆಯಂದು ವಂಶದಲ್ಲಿ ತೀರಿಹೋದ ಪಿತೃಗಳಿಗೆ ತರ್ಪಣ ಬಿಡುವುದು ಹಾಗೂ ಪೂಜೆ ಸಲ್ಲಿಸುವುದರಿಂದ ಅವರ ಆತ್ಮಗಳಿಗೆ ಶಾಶ್ವತ ಮುಕ್ತಿ ಮತ್ತು ಪೂಜೆ ಸಲ್ಲಿಸಿದವರಿಗೆ ಅಕ್ಷಯಫಲ ದೊರೆಯುತ್ತದೆ ಎಂಬ ನಂಬಿಕೆಯಿದೆ.

ಬ್ರಾಹ್ಮಣರು, ವೈಶ್ಯರ ಮನೆಗಳಲ್ಲಿ ಶಾಶ್ತ್ರೋಕ್ತವಾಗಿ ಪುರೋಹಿತರ ಮಾರ್ಗದರ್ಶನದಲ್ಲಿ ಪಿತೃಪೂಜೆ ನಡೆಯಿತು. ಉಳಿದಂತೆ ಇತರೇ ಸಮುದಾಯದ ಜನರು ಸ್ಮಶಾನಗಳಲ್ಲಿ ಸಮಾಧಿಗಳಿಗೆ ಪೂಜೆ ಸಲ್ಲಿಸಿ ಎಡೆ ಇಟ್ಟು ಪೂಜೆ ಸಲ್ಲಿಸಿದರು.

ಗ್ರಾಮಗಳಲ್ಲಿ ‘ದೊಡ್ಡವರ ಹಬ್ಬ’ವೆಂದೇ ಪ್ರಚಲಿತವಾಗಿರುವ ಮಹಾಲಯ ಅಮಾವಾಸ್ಯೆಯ ದಿನ ಸ್ಮಶಾನಗಳಿಗೆ ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ. ಆದ್ದರಿಂದ ಅಮಾವಾಸ್ಯೆಯ ಹಿಂದಿನ ದಿನವೇ ಗ್ರಾಮದ ಕೆಲವರಿಗೆ ಸ್ವಚ್ಛತೆಯ ಕೆಲಸ ಒಪ್ಪಿಸಿ ಸಮಾಧಿಗಳ ಸುತ್ತ ಬೆಳೆದಿದ್ದ ಗಿಡಗಂಟೆಗಳನ್ನು ಸ್ವಚ್ಛಗೊಳಿಸಿ ಅನುಕೂಲ ಮಾಡಲಾಗಿತ್ತು.

ಸಮಾಧಿಗಳಿಗೆ ಪೂಜೆ ಸಲ್ಲಿಸುವ ವೇಳೆ ಬಹಳಷ್ಟು ಕಡೆ ಸಾವಿನ ಸಂಧರ್ಭದಲ್ಲಿ ಇದ್ದ ಶೋಕ, ದುಃಖ ಮರೆಯಾಗಿ ಅಗಲಿಕೆಯನ್ನು ಒಪ್ಪಿಕೊಂಡ ಮನಸ್ಥಿತಿಯೊಂದಿಗೆ ಪೂಜೆ ಸಲ್ಲಿಸುತ್ತಿದ್ದರು. ಸತ್ತವರು ತಮ್ಮೊಂದಿಗೆ ಬದುಕಿದ್ದ ದಿನಗಳ ಹಾಸ್ಯ ಪ್ರಸಂಗ, ಮಾಡಿದ ಎಡವಟ್ಟು, ಬದುಕಿನ ಸಾಧನೆ, ಮುಂತಾದವನ್ನು ಮಾತಾಡುತ್ತಲೇ ನಗುಮುಖದೊಂದಿಗೆ ಪೂಜೆ ಸಲ್ಲಿಸುತ್ತಿದ್ದರು.

ಸಮಾಧಿಗಳ ಮುಂದೆ ಅವರು ಬದುಕಿದ್ದಾಗ ಇಷ್ಟಪಡುತ್ತಿದ್ದ ಒಬ್ಬಟ್ಟು, ಪಾಯಸ, ವಡೆ, ಮುದ್ದೆ, ಸೊಪ್ಪುಸಾರು ಹೀಗೆ ನಾನಾ ತರಹದ ಆಹಾರವಷ್ಟೇ ಅಲ್ಲದೇ ಕೆಲವೆಡೆ ಬೀಡಿ, ಎಲೆ ಅಡಿಕೆ, ಮದ್ಯವನ್ನೂ ನೈವೇದ್ಯಕ್ಕೆ ಇಟ್ಟಿದ್ದರು.

‘ಇದು ಪಿತೃಗಳನ್ನು ನರಕದಿಂದ ರಕ್ಷಿಸುವ ಕಾರ್ಯವೆಂದು ಶಾಸ್ತ್ರಗಳು ಹೇಳುತ್ತವೆ. ಈ ದಿನ ಮಾಡುವ ಶ್ರಾದ್ಧವು ಮಗನನ್ನು ಪಿತೃದೋಷದಿಂದ ಮುಕ್ತಗೊಳಿಸುತ್ತದೆ. ಧರ್ಮಗ್ರಂಥಗಳು ಹೇಳುವ ಪ್ರಕಾರ ಈ ದಿನ ಶ್ರಾದ್ಧ ಮಾಡುವುದರಿಂದ ಪೂರ್ವಜರು ಪರಲೋಕ, ಇಹಲೋಕ ಎಲ್ಲಾ ಲೋಕದಲ್ಲೂ ಸಂತೋಷ ಮತ್ತು ಶಾಂತಿ ಪಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಿದೆ’ ಎಂದು ಗ್ರಾಮದ ಮುಖಂಡ ಆಂಜಿನಪ್ಪತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT