ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಚೀನಾದಿಂದ ಕ್ಷೇಮವಾಗಿ ದೊಡ್ಡಬಳ್ಳಾಪುರಕ್ಕೆ ವಾಪಸಾದ ಯೋಗ ಶಿಕ್ಷಕರು

ಚೀನಾದಿಂದ ಬಂದ ವಿಮಾನ ಪ್ರಯಾಣಿಕರ ಆರೋಗ್ಯ ತಪಾಸಣೆ, 10 ದಿನ ಬಿಟ್ಟು ಚೀನಾಕ್ಕೆ ಮರಳಲು ಸೂಚನೆ
Last Updated 2 ಫೆಬ್ರುವರಿ 2020, 14:01 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಚೀನಾದಲ್ಲಿ ಯೋಗ ಶಿಕ್ಷಕರಾಗಿದ್ದ ದೊಡ್ಡಬಳ್ಳಾಪುರದ ಎಚ್.ಜಿ.ರಘು ಮತ್ತು ಆರ್.ಹರೀಶ್ ಆರೋಗ್ಯವಾಗಿ ತವರಿಗೆ ಮರಳಿದ್ದಾರೆ. ಚೀನಾ ಸೇರಿದಂತೆ ಮೂರು ಕಡೆಯಲ್ಲಿನ ವಿಮಾನ ನಿಲ್ದಾಣಗಳಲ್ಲಿ ನಡೆಸಿದ ಎಲ್ಲ ರೀತಿಯ ಆರೋಗ್ಯ ತಪಾಸಣೆಯಲ್ಲಿಯೂ ಯಾವುದೇ ರೀತಿಯ ಸೋಂಕು ಇಲ್ಲವೆಂದು ದೃಢಪಟ್ಟಿದೆ.

ನಿಸರ್ಗ ಯೋಗ ಕೇಂದ್ರದಲ್ಲಿ ತರಬೇತಿ ಪಡೆದು ಐದು ವರ್ಷಗಳಿಂದ ಚೀನಾದ ಶಾಂಘೈ ನಗರದ ಎಸ್ ಯೋಗ ಮತ್ತು ರಿಕ್ರಿಯೇಷನ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಚ್.ಜಿ.ರಘು ತಮ್ಮ ಅನುಭವ ಹಂಚಿಕೊಂಡು, ‘ಚೀನಾದಲ್ಲಿ ಈಗ ರಜೆಯ ಸಮಯ. ಎಂದಿನಂತೆ ನಾವು ಸಹ ಪ್ರತಿವರ್ಷ ಜನವರಿಯಲ್ಲಿ ರಜೆಗಾಗಿ ಊರಿಗೆ ಬಂದು ಫೆ.1ರಂದು ತೆರಳುತ್ತಿದ್ದೆವು. ಆದರೆ ಈ ಬಾರಿ ಕೊರೊನಾ ವೈರಸ್‍ ಸೋಂಕಿನಿಂದಾಗಿ ಇನ್ನೂ ಅಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿಲ್ಲ. ಹೀಗಾಗಿ ಇನ್ನೂ 10 ದಿನ ಇಲ್ಲಿಯೇ ಇದ್ದು ನಂತರ ಬರುವಂತೆ ಸೂಚಿಸಿದ್ದಾರೆ. ಚೀನಾದಲ್ಲಿ ನಾವು ಇದ್ದ ಪ್ರದೇಶದಲ್ಲಿ ಈಗ ವಿಪರೀತ ಚಳಿ ಹಾಗೂ ಮಳೆ ಹೆಚ್ಚು. ಇದರಿಂದ ಸೋಂಕು ಹರಡಲು ಕಾರಣವಾಗಿದೆ. ರಜಾ ದಿನಗಳಾಗಿರುವುದರಿಂದ ಪ್ರಯಾಣ ಮಾಡುವವರು ಹೆಚ್ಚಾಗಿದ್ದು, ಸೋಂಕು ಬೇಗ ಹರಡಲು ಕಾರಣವಾಗಿದೆ’ ಎಂದು ತಿಳಿಸಿದರು.

‘ಚೀನಾದಲ್ಲಿ ಸೋಂಕಿನ ಬಗ್ಗೆ ಪ್ರತಿಯೊಬ್ಬರ ಮೇಲೂ ನಿಗಾ ವಹಿಸಲಾಗುತ್ತಿದೆ. ಕೊರೊನಾ ವೈರಸ್‌ ದೃಢಪಟ್ಟಿರುವ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಿಶೇಷ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಜನಜಂಗುಳಿ ಹೆಚ್ಚಾಗಿದೆ. ಕೆಮ್ಮು, ಸೀನುಗಳಿಂದ ಇತರರಿಗೆ ಹರಡದಂತೆ ಕಡ್ಡಾಯವಾಗಿ ಮಾಸ್ಕ್ ಹಾಗೂ ಕೈ ಕುಲುಕಿದರೆ ಹರಡದಂತೆ ಕೈಚೀಲ ಹಾಕಿಕೊಳ್ಳಬೇಕಿದೆ. ಅಲ್ಲಿನ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹಗಲು ರಾತ್ರಿ ಎನ್ನದೇ ನಿಗಾ ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಮೊಬೈಲ್ ಆಸ್ಪತ್ರೆಯಲ್ಲಿ 7 ಸಾವಿರ ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಸೋಂಕು ಹರಡಿದವರನ್ನು ವಶಕ್ಕೆ ಪಡೆದು ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮನೆ ಬಿಟ್ಟು ತೆರಳದಂತೆ ಸೂಚಿಸಲಾಗಿದೆ. ನಾವು ಸ್ವದೇಶಕ್ಕೆ ತೆರಳಬೇಕಾದಾಗ ಶಾಂಘೈ, ಮಲೇಷಿಯಾ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಿ ಆರೋಗ್ಯವಾಗಿರುವ ಬಗ್ಗೆ ದೃಢಪಡಿಸಲಾಗಿದೆ. ಆರೋಗ್ಯದಲ್ಲಿ ವ್ಯತ್ಯಾಸವಾದರೆ 104 ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಅಲ್ಲಿನ ಸರ್ಕಾರದ ಸೂಚನೆ ಮೇರೆಗೆ ತೆರಳಲಿದ್ದೇವೆ’ ಎಂದರು.

ಮೂರು ವರ್ಷಗಳಿಂದ ಗ್ಯಾಶಿಂಗ್ ನಗರದ ರೆಬೆಲ್ ಯೋಗ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತೊಬ್ಬ ಯೋಗ ಶಿಕ್ಷಕ ಆರ್.ಹರೀಶ್ ಮಾತನಾಡಿ, ‘ಗ್ಯಾಶಿಂಗ್ ನಗರದಲ್ಲಿಯೂ ಕೊರೋನಾ ವೈರಸ್‌ ಹಾವಳಿ ಹೆಚ್ಚಾಗಿಯೇ ಇದೆ. ಆದರೆ ನಮ್ಮ ನಗರದಲ್ಲಿ ಹೂಹಾನ್ ನಗರದಷ್ಟು ಸೋಂಕು ಹರಡಿಲ್ಲ. ಆದರೂ ಗ್ಲೌಸ್, ಮಾಸ್ಕ್ ಹಾಕಿಕೊಳ್ಳಬೇಕು. ಬಿಸಿ ನೀರು ಕುಡಿಯಬೇಕು. ವೈರಸ್ ಹರಡದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದಾರೆ. ನಾವು ವಿಮಾನ ನಿಲ್ದಾಣಕ್ಕೆ ಬಂದಾಗ ಆರೋಗ್ಯದ ಎಲ್ಲ ಮಾಹಿತಿ ಪಡೆದುಕೊಂಡು ದೃಢೀಕರಣ ಪತ್ರಗಳಿಗೆ ಸಹಿ ಹಾಕಿಸಿಕೊಂಡರು. ಚೀನಾ ಸರ್ಕಾರ ಕೊರೊನಾ ವೈರಸ್‌ ಕುರಿತಂತೆ ಕೈಗೊಳ್ಳುತ್ತಿರುವ ಸಮರೋಪಾದಿ ಕ್ರಮಗಳಿಂದ ಶೀಘ್ರವಾಗಿ ವೈರಸ್ ನಿಯಂತ್ರಣಕ್ಕೆ ಬರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT