ಸೋಮವಾರ, ಅಕ್ಟೋಬರ್ 21, 2019
21 °C
ಬಸನಗೌಡ ಪಾಟೀಲ ಹೇಳಿಕೆ

ಸಂತ್ರಸ್ತರ ಬಗ್ಗೆ ದನಿಯೆತ್ತದಿದ್ದರೆ ಬಿಎಸ್‌ವೈ ರಾಜೀನಾಮೆ ನೀಡುವ ಸ್ಥಿತಿ: ಬಸನಗೌಡ

Published:
Updated:

ವಿಜಯಪುರ: ಪ್ರವಾಹ ಸಂತ್ರಸ್ತರ ಬಗ್ಗೆ ನಾನು ಧ್ವನಕ ಎತ್ತದಿದ್ದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 15 ದಿನಗಳಲ್ಲಿ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗಿತ್ತು ಎಂದು ಶಾಸಕ ಬಸನಗೌಡ ಪಾಟೀಲ ಇಲ್ಲಿ ಹೇಳಿದರು.

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಬಗ್ಗೆ ನನಗೆ ದೆಹಲಿಯಿಂದ ಈಗ ಮಾಹಿತಿ ಸಿಕ್ಕಿದೆ. ಕರ್ನಾಟಕದ ಇಬ್ಬರು ಕೇಂದ್ರ ಸಚಿವರು ಯಡಿಯೂರಪ್ಪ ಅವರನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿಗೆ ಪ್ರಧಾನಿ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ರಾಜ್ಯದ ಸಚಿವರಿಬ್ಬರ ಕುತಂತ್ರದಿಂದ ಯಡಿಯೂರಪ್ಪ ಭೇಟಿಗೆ ಅವಕಾಶ ನಿರಾಕರಿಸಲಾಗುತ್ತದೆ ಎಂದು ಗಂಭೀರ ಆರೋಪ ಮಾಡಿದರು.

ಬಿಎಸ್ ವೈ ಬಗ್ಗೆ ನಿಮಗೆ ಅಸಮಾಧಾನವಿದ್ದರೆ 76 ವಯಸ್ಸಾಗಿದೆ ಎಂದು‌ ಹೇಳಿ, ಅವರನ್ನು ಕರೆಯಿಸಿ ರಾಜೀನಾಮೆ ಪಡೆದುಕೊಳ್ಳಲಿ. ಅನಂತಕುಮಾರ, ಯಡಿಯೂರಪ್ಪ ಈ ಹಿಂದೆ ಜಗಳವಾಡುತ್ತಿದ್ದರು. ಆದರೆ, ಪಕ್ಷ, ಕರ್ನಾಟಕ, ದೇಶದ ಹಿತ ಬಂದಾಗ ಒಗ್ಗೂಡುತ್ತಿದ್ದರು. ಆದರೆ, ಈಗ ರಾಜ್ಯದಲ್ಲಿ ನಡೆದಿರುವುದೇ ಬೇರೆ ಎಂದು ಹೇಳಿದರು.

ಶಿಸ್ತು ಉಲ್ಲಂಘಿಸದ ನಾನು ಶೋಕಾಸ್ ನೋಟಿಸ್ ಗೆ ಉತ್ತರ ನೀಡುವುದಿಲ್ಲ. ಈ ಕಾರಣಕ್ಕಾಗಿಯೇ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.‌ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಧಾನಿ ಬಳಿ ರಾಜ್ಯದ ಜನರ ಭಾವನೆ ಹೇಳಿಕೊಳ್ಳಲು ನಾನೇನೂ ಹೆದರುವುದಿಲ್ಲ. ನಾನು ಹೇಳಿಕೆ ನೀಡಿದ ಮೇಲೆ ಇಬ್ಬರು ಸಚಿವರು ದೆಹಲಿಗೆ ಹೋಗಿದ್ದರು. ಆದರೆ, ಅವರು ಪ್ರವಾಹ ಪರಿಹಾರ ತರಲು ಹೋಗಿರಲಿಲ್ಲ. ಬದಲಿಗೆ ನನಗೆ ನೋಟಿಸ್ ಕೊಡಿಸಲು ಹೋಗಿದ್ದರು.
ಇಂಥ ಚಾಡಿಕೋರ ಸಚಿವರಿಂದ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿದೆ ಎಂದು ಆರೋಪಿಸಿದರು.

ಪಕ್ಷ ಉಳಿಸುವ ಬಯಕೆ ಇದ್ದರೆ ಯಡಿಯೂರಪ್ಪ ಮತ್ತು ಅವರ ವಿರೋಧಿಗಳನ್ನು ಒಟ್ಟಿಗೆ ಕೂಡಿಸಿ ಸಮಸ್ಯೆ ಬಗೆಹರಿಸಿ. ಇದನ್ನು ಮಾಡದ ನಿಮ್ಮನ್ನು ನಾಯಕರು ಎಂದು ಹೇಗೆ ಕರೆಯಬೇಕು ಎಂದು ಪ್ರಶ್ನಿಸಿದರು.

ನಾನು ಕರ್ನಾಟಕದಿಂದ ಬಿಜೆಪಿಯಿಂದ ಕೇಂದ್ರ ಸಚಿವನಾದ ನಾಲ್ಕನೇ ವ್ಯಕ್ತಿ. ನನ್ನನ್ನು ಹೊರ ಹಾಕಿದರೆ ನನಗೇನೂ ಹಾನಿಯಿಲ್ಲ. ನನ್ನ ಶಕ್ತಿಯನ್ಮು ವಿಧಾನ ಪರಿಷತ್ ಚುನಾವಣೆಯಲ್ಲಿ ತೋರಿಸಿದ್ದೇನೆ. ಪಕ್ಷೇತರನಾಗಿ ಗೆಲುವು ಸಾಧಿಸಿದ್ದೇನೆ.

ನಾನು ಬಿಜೆಪಿ ಸೇರುವಾಗ ಇವರೇನೂ ಸ್ವಾಗತಿಸಿಲ್ಲ. ಅಮಿತ್ ಶಾ, ಪ್ರಕಾಶ ಜಾವಡೇಕರ್ ನನ್ನ ಶಕ್ತಿಯನ್ನು ನೋಡಿ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಸೇರಿಸಿಕೊಂಡಿದ್ದಾರೆ ಎಂದರು.

Post Comments (+)