ಭಾನುವಾರ, ಜನವರಿ 19, 2020
29 °C
ಬೆಕ್ಕಿನಕಲ್ಮಠದ ಭಾವೈಕ್ಯ ಸಮ್ಮೇಳನದಲ್ಲಿ ಸಾಹಿತಿ ಡಾ.ಸಂಗಮೇಶ ಸವದತ್ತಿ ಮಠ ಪ್ರತಿಪಾದನೆ

ಮಠ, ಮಾನ್ಯಗಳ ಗೌರವ ಎಲ್ಲಕಿಂತ ಮಿಗಿಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಾಹಿತ್ಯ, ಸಂಶೋಧನೆ, ಧರ್ಮ ಹಾಗೂ ಸಂಘಟನೆಗೆ ಹಲವು ಸಂಘ, ಸಂಸ್ಥೆಗಳು, ವಿಶ್ವವಿದ್ಯಾಲಯಗಳು ನೀಡುವ ಗೌರವಕ್ಕಿಂತ ಮಠ, ಮಾನ್ಯಗಳ ಗೌರವ ಮಿಗಿಲು ಎಂದು ಧಾರವಾಡದ ಸಾಹಿತಿ ಡಾ.ಸಂಗಮೇಶ ಸವದತ್ತಿ ಮಠ ಪ್ರತಿಪಾದಿಸಿದರು.

ಬೆಕ್ಕಿನಕಲ್ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 482ನೇ ಮಾಸಿಕ ಶಿವಾನುಭವ ಗೋಷ್ಠಿ, ಶರಣ ಸಾಹಿತ್ಯ ಸಮ್ಮೇಳನ, ಭಾವೈಕ್ಯ ಸಮ್ಮೇಳನದಲ್ಲಿ ಅಲ್ಲಮಪ್ರಭು ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ವಚನ ಸಾಹಿತ್ಯದಲ್ಲಿ ಸಂಶೋಧನೆಗೆ ಪೂರಕವಾಗಿ ಅಧ್ಯಯನ ನಡೆಸಲು ಯಾವುದೇ ನಿಘಂಟು ಇರಲಿಲ್ಲ. ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗ ಅವಕಾಶ ನೀಡಿ, ಭಾರತದ ಯಾವುದೇ ವಿಚಾರವಿಟ್ಟುಕೊಂಡು, ದೇಶದ ಯಾವುದೇ ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಹಾಗೂ ಸಂಶೋಧನೆ ನಡೆಸಲು ಸೂಚಿಸಿತು. ವಚನ ಸಾಹಿತ್ಯಕ್ಕೆ ಅನುಕೂಲವಾಗಿರಲು ಸಂಕ್ಷಿಪ್ತ ವಿಶ್ವಕೋಶಾತ್ಮಕ ನಿಘಂಟನ್ನು ಸಿದ್ಧಪಡಿಸಲು ಇದು ವೇದಿಕೆಯಾಯಿತು. ನನ್ನ ಹಲವು ಸಾಧನೆಗಳಿಗೆ ವೀರಶೈವ ಸಮಾಜ ನೆರವಾಗಿದೆ ಎಂದು ಸ್ಮರಿಸಿದರು.

ಅಭಿನಂದನಾ ಮಾತುಗಳಾಡಿದ ಸಾಹಿತಿ ಕುಮಾರ ಚಲ್ಯ, ಇಂದು ಸುಳ್ಳಿನ ಭಾಷಣಕ್ಕೆ ಹೊಗಳಿಕೆಗೆ ಶಿಳ್ಳೆ, ಚಪ್ಪಾಳೆಗಳು ಜೋರಾಗಿ ಬೀಳುತ್ತವೆ. ಒತ್ತಾಯಪೂರ್ವಕವಾಗಿ ಪ್ರಶಸ್ತಿ, ಸಮ್ಮಾನಗಳನ್ನು ಪಡೆದುಕೊಳ್ಳುವವರಿದ್ದಾರೆ. ಅಂಥವರ ಮಧ್ಯೆ ಸಾಹಿತ್ಯ ಹಾಗೂ ಸಂಶೋಧನೆಯಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಸಂಗಮೇಶ ಸವದತ್ತಿ ಮಠ ಬಹು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದರು.

ಸಂಗಮೇಶ ಸವದತ್ತಿ ಅವರು ಅತ್ಯಂತ ಸತ್ವಪೂರ್ಣ ಹಾಗೂ ಅರ್ಥಪೂರ್ಣ ಕೆಲಸವನ್ನು ಸಾಹಿತ್ಯ, ವಿಚಾರಧಾರೆ, ವಚನ ಅಧ್ಯಯನದಲ್ಲಿ ಮಾಡಿದ್ದಾರೆ. ಅವರನ್ನು ನೈ‌ಜವಾಗಿ ಗುರುತಿಸಿ, ಗೌರವಿಸುವಂತಹ ಕೆಲಸವನ್ನು ಮುರುಘರಾಜೇಂದ್ರ ಸ್ವಾಮೀಜಿ ಮಾಡಿರುವುದು ಸ್ವಾಗತಾರ್ಹ ಎಂದರು.

ಸಮಾಜದಲ್ಲಿ ಯಾವುದೇ ಸಂದರ್ಭದಲ್ಲಿ ಅಸತ್ಯದೊಂದಿಗೆ ರಾಜಿ ಮಾಡಿಕೊಳ್ಳಬಾರದು. ಅಸತ್ಯವನ್ನು ವಿರೋಧಿಸಬೇಕು. ಸತ್ಯವನ್ನು ಒಪ್ಪಬೇಕು. ಸತ್ಯದ ವಿಷಯವನ್ನು ನಿರ್ಭೀತಿಯಿಂದ ಮಾತನಾಡುವ ಮನಸ್ಥಿತಿ ಜನರಲ್ಲಿ ಮೂಡಬೇಕಿದೆ ಎಂದರು. 

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಆರ್.ಪ್ರಸನ್ನ ಕುಮಾರ್ ಮಾತನಾಡಿದರು. ಬೆಕ್ಕಿಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬೆಳಗಾವಿ ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಹರಪನಹಳ್ಳಿ ವರಸದ್ಯೋಜಾತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ. ಶಂಕರಪ್ಪ, ಸೋಮಶೇಖರ್, ಎಸ್.ಬಿ. ವಾಸುದೇವ, ಧರಣೇಂದ್ರ ಜೈನ್, ಚನ್ನಬಸಪ್ಪ, ಎಸ್.ಎನ್. ಶೀಲಾ ಪ್ರಕಾಶ್, ಲೋಕೇಶ್ ಆರಾಧ್ಯ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು