ಬೆಳಗಾವಿ: ವಿವಿಧ ಕೋರ್ಸ್ ಕಲಿಕೆಗೆ ಬಾಂಗ್ಲಾದೇಶಕ್ಕೆ ತೆರಳಿದ್ದ ಜಿಲ್ಲೆಯ 25 ವಿದ್ಯಾರ್ಥಿಗಳು ಸುರಕ್ಷಿತವಾಗಿ ಊರಿಗೆ ಮರಳಿದ್ದಾರೆ. ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ಎಲ್ಲರೂ ಬಂದಿಳಿದಿದ್ದಾರೆ.
ಬಾಂಗ್ಲಾದಲ್ಲಿ ನಡೆದ ದಂಗೆಯಿಂದ ವಿದ್ಯಾರ್ಥಿಗಳು ಮೊಬೈಲ್ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಆತಂಕಗೊಂಡ ಪಾಲಕರು ಸಂಸದ ಜಗದೀಶ ಶೆಟ್ಟರ್ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಎಲ್ಲ 25 ವಿದ್ಯಾರ್ಥಿಗಳ ಮಾಹಿತಿಯನ್ನು ಕೇಂದ್ರಕ್ಕೆ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಎಲ್ಲರೂ ತಾಯ್ನಾಡಿಗೆ ಮರಳಲು ನೆರವಾದರು.
‘ವಾರದ ಹಿಂದೆಯೇ ಬಾಂಗ್ಲಾದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ನಾನು ಎಂಬಿಬಿಎಸ್ ಓದುತ್ತಿದ್ದ ಕಾಲೇಜಿನ ಹಾಸ್ಟೆಲ್‌ನಲ್ಲಿಯೇ ಇರುವಂತೆ ಸೂಚಿಸಲಾಗಿತ್ತು. ದಂಗೆಕೋರರು ಮೊಬೈಲ್ ಟವರ್‌ಗಳನ್ನೂ ಬೀಳಿಸಿದ್ದರಿಂದ ಯಾವುದೇ ಸಂಪರ್ಕ ಸಾಧ್ಯವಾಗಿರಲಿಲ್ಲ. ಇದು ಗಂಭೀರ ಸ್ವರೂಪ ಪಡೆಯುವ ಲಕ್ಷಣಗಳನ್ನು ಕಂಡು ದೇಶಕ್ಕೆ ಮರಳಲು ಸಿದ್ಧರಾದೆವು. ಆಗಸ್ಟ್ 4ರಂದೇ ನಾನು ಬೆಳಗಾವಿಗೆ ಮರಳಿದೆ. ಈಗಿನ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಅಲ್ಲೇ ಇದ್ದಿದ್ದರೆ ಮರಳುವುದೂ ಕಷ್ಟವಾಗುತ್ತಿತ್ತು’ ಎಂದು ವೈದ್ಯಕೀಯ ವಿದ್ಯಾರ್ಥಿ ನಿಹಾಲ್ ಸವಣೂರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.