ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹಲ್ಲಿ ಬಿದ್ದ ಹಾಲು ಕುಡಿದು 38 ಮಕ್ಕಳು ಅಸ್ವಸ್ಥ

Published 11 ಜನವರಿ 2024, 11:40 IST
Last Updated 11 ಜನವರಿ 2024, 11:40 IST
ಅಕ್ಷರ ಗಾತ್ರ

ಹುಕ್ಕೇರಿ (ಬೆಳಗಾವಿ ಜಿಲ್ಲೆ): ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡ್ಡಿ ಖಾನಾಪುರದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಗುರುವಾರ, ಕ್ಷೀರಭಾಗ್ಯದ ಹಾಲು ಕುಡಿದು 38 ಮಕ್ಕಳು ಅಸ್ವಸ್ಥರಾಗಿದ್ದಾರೆ. ಬಿಸಿ ಹಾಲಿನಲ್ಲಿ ಹಲ್ಲಿ ಬಿದ್ದಿದ್ದೇ ಘಟನೆಗೆ ಕಾರಣ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ತಿಳಿಸಿದ್ದಾರೆ.

ಈ ಶಾಲೆಯಲ್ಲಿ ಕನ್ನಡ ಹಾಗೂ ಉರ್ದು ಮಾಧ್ಯಮದವರೂ ಸೇರಿ 94 ವಿದ್ಯಾರ್ಥಿಗಳಿಗೆ ಹಾಲು ನೀಡಲಾಗಿತ್ತು. ಬಳಿಕ ಹಲ್ಲಿ ಬಿದ್ದಿದ್ದು ಗೊತ್ತಾಯಿತು. ಕೆಲವು ನಿಮಿಷಗಳ ಬಳಿಕ 10 ಮಕ್ಕಳಿಗೆ ವಾಂತಿ ಶುರುವಾಯಿತು. ಅವರಿಗೆ ನೀರು ಕುಡಿಸಿ ಸಂತೈಸಿ ಪಾಲಕರನ್ನು ಕರೆಸಲಾಯಿತು. ಅಷ್ಟರೊಳಗೆ ಉಳಿದ 28 ಮಕ್ಕಳಿಗೂ ವಾಂತಿಯ ಲಕ್ಷಣಗಳು ಶುರುವಾದವು. ಇದರಿಂದ ಗಾಬರಿಗೊಂಡ ಪಾಲಕರು ಶಾಲೆಗಳತ್ತ ಧಾವಿಸಿದರು. ಶಿಕ್ಷಕರು ಹಾಗೂ ಪಾಲಕರು ಸೇರಿ ಎರಡು ಆಂಬುಲೆನ್ಸ್‌ ಹಾಗೂ ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಹುಕ್ಕೇರಿ ಹಾಗೂ ಸಂಕೇಶ್ವರದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ, ‘ವಿದ್ಯಾರ್ಥಿಗಳಿಗೆ ಕುಡಿಯಲು ನೀಡಿದ ಹಾಲಿನಲ್ಲಿ ಹಲ್ಲಿ ಬಿದ್ದಿದ್ದು ಖಾತ್ರಿಯಾಗಿದೆ. ವಾಂತಿ ಭೇದಿ ಕಾಣಿಸಿಕೊಂಡ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರಿಗೂ ಅಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹಲ್ಲಿ ಹೇಗೆ, ಯಾವಾಗ ಬಿದ್ದಿತು ಎಂಬ ಬಗ್ಗೆ ತನಿಖೆ ನಡೆಸಿ ಕ್ರಮ ವಹಿಸಲಾಗುವುದು’ ಎಂದರು.

ಹುಕ್ಕೇರಿಯಲ್ಲಿ ಡಾ.ಎಂ.ಎಂ.ನರಸನ್ನವರ, ಡಾ.ರಿಯಾಜ್ ಮಕಾನದಾರ್ ಮತ್ತು ಡಾ.ಬಾಲಪ್ರವೇಶ್ ಚಿಕಿತ್ಸೆ ನೀಡಿದ್ದಾರೆ. ಸಂಕೇಶ್ವರದಲ್ಲಿ ಡಾ.ದತ್ತಾತ್ರೆಯ ದೊಡಮನಿ ಮತ್ತು ಡಾ.ಪೂರ್ಣಿಮಾ ತಲ್ಲೂರ ಚಿಕಿತ್ಸೆ ನೀಡಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಉದಯ ಕುಡಚಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT