ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸುಸ್ಥಿರ ಅಭಿವೃದ್ಧಿಗೆ ನೀರೇ ಮೂಲ: ಸುಧಾ ಮೂರ್ತಿ

ಎಂಜಿನಿಯರ್‌ಗಳ 38ನೇ ರಾಷ್ಟ್ರೀಯ ಮಹಾ ಸಮಾವೇಶದಲ್ಲಿ ಸುಧಾ ಮೂರ್ತಿ ಪ್ರತಿಪಾದನೆ
Published 8 ಅಕ್ಟೋಬರ್ 2023, 16:43 IST
Last Updated 8 ಅಕ್ಟೋಬರ್ 2023, 16:43 IST
ಅಕ್ಷರ ಗಾತ್ರ

ಬೆಳಗಾವಿ: ‘ಚಂದ್ರಯಾನ, ಮಂಗಳಯಾನಗಳಲ್ಲೂ ನಾವು ನೀರನ್ನೇ ಹುಡುಕುತ್ತಿದ್ದೇವೆ. ಭವಿಷ್ಯದಲ್ಲಿ ನೀರು ಎಷ್ಟು ಮುಖ್ಯ ಎಂಬುದಕ್ಕೆ ಇದೇ ಸಾಕ್ಷಿ. ದೇಶದ ಸುಸ್ಥಿರ ಅಭಿವೃದ್ಧಿ ಆಗಬೇಕೆಂದರೆ ನೀರಿನ ಬಳಕೆ ಸರಿಯಾಗಿ ಆಗಬೇಕು’ ಎಂದು ಇನ್ಫೊಸಿಸ್‌ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷೆ ಸುಧಾ ಮೂರ್ತಿ ಪ್ರತಿಪಾದಿಸಿದರು.

ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌ ವತಿಯಿಂದ ನಗರದಲ್ಲಿ ಆಯೋಜಿಸಿದ ಸಿವಿಲ್ ಎಂಜಿನಿಯರ್‌ಗಳ 38ನೇ ರಾಷ್ಟ್ರೀಯ ಮಹಾ ಸಮಾವೇಶಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನೀವು ಯಾವುದೇ ಕ್ಷೇತ್ರದಲ್ಲಿ ಸಂಶೋಧನೆ ಮಾಡಿ, ಸಾಧನೆ ಮಾಡಿ. ಅದೆಲ್ಲಕ್ಕೂ ಮೂಲ ನೀರೇ ಆಗಿರುತ್ತದೆ. ಭವಿಷ್ಯದಲ್ಲಿ ಕೂಡ ಸುಸ್ಥಿರ ಅಭಿವೃದ್ಧಿ ಕನಸು ಕಾಣಬೇಕೆಂದರೆ ಈಗಿನಿಂದಲೇ ನೀರಿನ ಸದ್ಬಳಕೆ ಅಗತ್ಯ. ಇದರಲ್ಲಿ ಎಂಜಿನಿಯರಿಂಗ್ ಕ್ಷೇತ್ರದ ಜವಾಬ್ದಾರಿ ದೊಡ್ಡದಿದೆ. ಆ ದೃಷ್ಟಿಯಲ್ಲಿ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಸಂಶೋಧನೆಗಳು ಹೆಚ್ಚಲಿ’ ಎಂದರು.

‘ಎಷ್ಟು ನೀರು ಲಭ್ಯವಿದೆ ಎನ್ನುವುದಕ್ಕಿಂತ; ಲಭ್ಯ ನೀರಲ್ಲಿ ಗುಣಮಟ್ಟದ ಪ್ರಮಾಣ ಎಷ್ಟು ಎನ್ನುವುದು ಮುಖ್ಯವಾಗುತ್ತದೆ’ ಎಂದೂ ಹೇಳಿದರು.

‘ಕೆಲವೇ ಗಂಟೆಗಳಲ್ಲಿ ಸಾವಿರಾರು ಕಂಪ್ಯೂಟರ್‌ಗಳನ್ನು ನಿರ್ಮಿಸುವ ಸಾಮರ್ಥ್ಯ ಈ ದೇಶಕ್ಕೆ ಇದೆ. ಆದರೂ ಲಕ್ಷಾಂತರ ನಿರುದ್ಯೋಗಿಗಳು ಇರುವುದು ಅಚ್ಚರಿ. ಈ ವಿಷಯ ಚರ್ಚೆಯಾಗಬೇಕಿದೆ. ಬಹುಶಃ ಮಾರುಕಟ್ಟೆ ಏನನ್ನು ಬಯಸುತ್ತದೆ ಎಂಬುದರ ಪರಿಕಲ್ಪನೆ ಯುವಜನರಿಗೆ ಇಲ್ಲ. ನಿರುದ್ಯೋಗ ನಿವಾರಣೆಯಾಗಬೇಕೆಂದರೆ ನಮ್ಮ ವಿಶ್ವವಿದ್ಯಾಲಯಗಳು ಇದರ ಅರಿವು ಮೂಡಿಸಬೇಕಿದೆ’ ಎಂದು ಸಲಹೆ ನೀಡಿದರು.

‘ಯುವ ಎಂಜಿನಿಯರ್‌ಗಳು ಹಣದ ಹಿಂದೆ ಹೋಗಬೇಡಿ. ಹಣವು ತಾತ್ಕಾಲಿಕ ಖುಷಿಯನ್ನಷ್ಟೇ ನೀಡುತ್ತದೆ. ನೆಮ್ಮದಿ ನೀಡುವುದಿಲ್ಲ. ನಿಮ್ಮಲ್ಲಿ ನೈತಿಕತೆ, ಪ್ರಾಮಾಣಿಕತೆ ಇದ್ದರೆ ಸಾಕು; ಯಶಸ್ಸಿನ ಜತೆಗೆ ಹಣವೂ ನಿಮ್ಮನ್ನು ಹಿಂಬಾಲಿಸುತ್ತದೆ’ ಎಂದು ಅವರು ಕಿವಿಮಾತು ಹೇಳಿದರು.

ಮುಖ್ಯ ಅತಿಥಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಬೆಳಗಾವಿ ಜಿಲ್ಲೆಯನ್ನು ಸಪ್ತ ನದಿಗಳ ನಾಡು ಎನ್ನುತ್ತೇವೆ. ಮಳೆಯಾಗದಿದ್ದರೆ ಏಳೂ ನದಿಗಳು ಕೆಲವೇ ತಿಂಗಳಲ್ಲಿ ಒಣಗುತ್ತವೆ. ನಾವು ನೀರನ್ನು ಎಷ್ಟು ಅಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದೇವೆ ಎಂಬುದಕ್ಕೆ ಸಾಕ್ಷಿ ಇದು. ಅಭಿವೃದ್ಧಿ ಮಾತ್ರವಲ್ಲ; ಆರೋಗ್ಯದ ದೃಷ್ಟಿಯಿಂದಲೂ ನೀರಿನ ಮಿತಬಳಕೆ ಅನಿವಾರ್ಯವಾಗಿದೆ’ ಎಂದರು.

ದಿ‌ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ನ ಚೇರ್ಮನ್ ಟಿ.ಜಿ.ಸೀತಾರಾಮ್,  ಸಿವಿಲ್ ವಿಭಾಗದ ಮುಖ್ಯಸ್ಥ ಎಂ.ನಾಗರಾಜ, ಬೆಳಗಾವಿ ಘಟಕದ ಅಧ್ಯಕ್ಷ ಆರ್.ಟಿ.ಜಂಗಲ್, ಧಾರವಾಡ ಐಐಟಿ ಪ್ರೊ.ವೆಂಕಪ್ಪಯ್ಯ ದೇಸಾಯಿ ಸೇರಿದಂತೆ ಹಲವರು ಇದ್ದರು.

ದೇಶದ ವಿವಿಧಡೆಯಿಂದ ಬಂದ 550ಕ್ಕೂ ಹೆಚ್ಚು ಸಿವಿಲ್‌ ಎಂಜಿನಿಯರ್‌ಗಳು, 300 ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸಮಾವೇಶದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT