ಬುಧವಾರ, ಆಗಸ್ಟ್ 10, 2022
20 °C

ಬೆಳಗಾವಿ ಜಿಲ್ಲೆಯ 418 ಗ್ರಾಮಗಳು ಕೋವಿಡ್ ಮುಕ್ತ: ಸಿಇಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌–ಪ್ರಾತಿನಿಧಿಕ ಚಿತ್ರ

ಬೆಳಗಾವಿ: ‘ಜಿಲ್ಲೆಯ 418 ಗ್ರಾಮಗಳು ಕೋವಿಡ್ ಮುಕ್ತವಾಗಿವೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್ ತಿಳಿಸಿದರು.

ಇಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಹತ್ತು ದಿನಗಳಿಂದ ಸೋಂಕು ಪತ್ತೆಯಾಗದ ಗ್ರಾಮಗಳನ್ನು ಕೋವಿಡ್ ಮುಕ್ತ ಎಂದು ಘೋಷಿಸಲಾಗಿದೆ’ ಎಂದರು.

‘ಸದ್ಯಕ್ಕೆ ಹಳ್ಳಿಗಳಲ್ಲಿ ಸೋಂಕು ಇಳಿಮುಖವಾಗಿದೆ. 1,303 ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚಿಸಿ ಕೋವಿಡ್ ಮಾರ್ಗಸೂಚಿ ಪಾಲನೆ, ಸೋಂಕಿತರ ಆರೈಕೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಸೋಂಕಿತರ ಮೇಲೆ ನಿಗಾ, ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ, ಸೋಂಕಿತರನ್ನು ಆರೈಕೆ ಕೇಂದ್ರಕ್ಕೆ ದಾಖಲಿಸುವುದು, ಔಷಧಿ ಕಿಟ್ ವಿತರಣೆ, ಜಾಗೃತಿ ಮೂಡಿಸಲು ಗ್ರಾಮ ಪಂಚಾಯ್ತಿಗಳಿಂದ ಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಕೂಡ ವಾರ್‌ ರೂಂ ಆರಂಭಿಸಿ ಸೋಂಕಿತರ ಆರೋಗ್ಯ ವಿಚಾರಣೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಸಮಸ್ಯೆ ನಿವಾರಿಸಿ:

ಶಾಸಕ ಮಹಾಂತೇಶ ದೊಡ್ಡಗೌಡರ, ‘ಕಿತ್ತೂರು ತಾಲ್ಲೂಕು ಘೋಷಣೆಯಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ, ಯಾವುದೇ ಯೋಜನೆ ಅನುಷ್ಠಾನ ಸಂದರ್ಭ ಕಿತ್ತೂರು ತಾಲ್ಲೂಕನ್ನು ಪ್ರತ್ಯೇಕವಾಗಿ ಪರಿಗಣಿಸುತ್ತಿಲ್ಲ. ಇದರಿಂದ ನಾವು ಸೌಲಭ್ಯ ವಂಚಿತರಾಗಿದ್ದೇವೆ. ಈ ಸಮಸ್ಯೆ ನಿವಾರಿಸಬೇಕು’ ಎಂದು ಒತ್ತಾಯಿಸಿರು.

‘ಕುಡಿಯುವ ನೀರಿನ ಯೋಜನೆಗಳು ಹಲವು ವರ್ಷಗಳಿಂದಲೂ ಕುಂಟುತ್ತಾ ಸಾಗಿವೆ. ಹೊಸ ಯೋಜನೆಗಳಲ್ಲಿ ಕೆಲ ಗ್ರಾಮಗಳನ್ನು ಕೈಬಿಡಲಾಗಿದೆ. ಅಧಿಕಾರಿಗಳು, ಕ್ಷೇತ್ರದ ವ್ಯಾಪ್ತಿಯಲ್ಲಿ ಯೋಜನೆ ಸಿದ್ಧಪಡಿಸುವ ಮುನ್ನ ಜನಪ್ರತಿನಿಧಿ ಜೊತೆ ಚರ್ಚಿಸಿ ಸಲಹೆ ಪಡೆಯಬೇಕು. ಬಾಕಿ ಉಳಿದ ಗ್ರಾಮಗಳನ್ನು ಸೇರಿಸಿ ಹೊಸ ಡಿಪಿಆರ್ ತಯಾರಿಸಬೇಕು’ ಎಂದು ತಾಕೀತು ಮಾಡಿದರು.

‘ಎರಡು ದಿನಗಳಿಂದ ಜಿಲ್ಲೆಗೆ ಕೋವಿಡ್ ಲಸಿಕೆ ಪೂರೈಕೆ ಕಡಿಮೆಯಾಗಿದೆ’ ಎಂದು ಸಚಿವರ ಗಮನಕ್ಕೆ ತಂದರು.

‘ಜನಸಂಖ್ಯೆಗೆ ತಕ್ಕಂತೆ ಲಸಿಕೆ ಪೂರೈಸುವಂತೆ ಕೋರಲಾಗಿದೆ. ಆದರೆ, ಆ ಪ್ರಕಾರ ಹಂಚಿಕೆ ಆಗುತ್ತಿಲ್ಲ’ ಎಂದು ಅಧಿಕಾರಿಗಳೂ ದನಿಗೂಡಿಸಿದರು.

ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ‘ಎಲ್ಲ ಜಿಲ್ಲೆಗಳಲ್ಲೂ ಈ ಸಮಸ್ಯೆ ಇದೆ’ ಎಂದಷ್ಟೆ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು