ಶನಿವಾರ, ಜುಲೈ 24, 2021
28 °C
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 45,049 ವಿದ್ಯಾರ್ಥಿಗಳು ನೋಂದಣಿ

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಸಿದ್ಧತೆ

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಕೋವಿಡ್-19 ಸಾಂಕ್ರಾಮಿಕದ ಆತಂಕದ ನಡುವೆಯೂ ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ ಸರ್ಕಾರ ವೇಳಾಪಟ್ಟಿ ಪ್ರಕಟಿಸಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿಯೂ ಸುರಕ್ಷಾ ವಿಧಾನಗಳೊಂದಿಗೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 45,049 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ.

207 ಸರ್ಕಾರಿ, 148 ಅನುದಾನಿತ ಮತ್ತು 202 ಅನುದಾನರಹಿತ ಸೇರಿದಂತೆ ಒಟ್ಟು 557 ಪ್ರೌಢಶಾಲೆಗಳಿವೆ. 30,156 ಬಾಲಕರು ಮತ್ತು 14,893 ಬಾಲಕಿಯರು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಈ ಪೈಕಿ 888 ಖಾಸಗಿ ಅಭ್ಯರ್ಥಿಗಳಿದ್ದಾರೆ.

ಅಥಣಿ ವಲಯದಲ್ಲಿ 6,789, ನಿಪ್ಪಾಣಿ-4,890, ಚಿಕ್ಕೋಡಿ-5,409, ಗೋಕಾಕ-5,114, ಹುಕ್ಕೇರಿ-6,764, ಕಾಗವಾಡ-2,302, ಮೂಡಲಗಿ-6,750 ಮತ್ತು ರಾಯಬಾಗ ವಲಯದಲ್ಲಿ 7,031 ಮಂದಿ ನೋಂದಾಯಿಸಿದ್ದಾರೆ. ಜುಲೈ 19ರಂದು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳನ್ನು ಒಳಗೊಂಡ 120 ಅಂಕಗಳ ಬಹುಆಯ್ಕೆ ಆಧಾರಿತ ಪರೀಕ್ಷೆ ಮತ್ತು ಜುಲೈ 22ರಂದು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಗಳನ್ನು ಒಳಗೊಂಡ ಪರೀಕ್ಷೆ ನಡೆಯಲಿದೆ.

ಹಿಂದೆ 132 ಪರೀಕ್ಷಾ ಕೇಂದ್ರಗಳಿದ್ದವು. ಪ್ರಸಕ್ತ ವರ್ಷ ಕೊಠಡಿಯೊಂದರಲ್ಲಿ 12 ವಿದ್ಯಾರ್ಥಿಗಳಂತೆ ಅವಕಾಶ ಕಲ್ಪಿಸಿರುವುದರಿಂದಾಗಿ 84 ಹೆಚ್ಚುವರಿ ಮತ್ತು 5 ಖಾಸಗಿ ಅಭ್ಯರ್ಥಿಗಗಳ ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು 221 ಕೇಂದ್ರಗಳನ್ನು ಸ್ಥಾಪಿಸಿಲಾಗಿದೆ. 4,012 ಕೊಠಡಿಗಳನ್ನು ಬಳಸಲಾಗುತ್ತಿದೆ.

227 ಮುಖ್ಯ ಸೂಪರಿಂಟೆಂಡೆಂಟ್, 16 ಉಪ ಮುಖ್ಯ ಸೂಪರಿಂಟೆಂಡೆಂಟ್, 5,290 ಮಂದಿ ಕೊಠಡಿ ಮೇಲ್ವಿಚಾರಕರು, 227 ಕಸ್ಟೋಡಿಯನ್‌ಗಳು, 80 ಮಂದಿ ಮಾರ್ಗಾಧಿಕಾರಿಗಳು, 224 ಸ್ಥಾನಿಕ ಜಾಗೃತದಳ ಅಧಿಕಾರಿಗಳು, 236 ಸಹಾಯಕರು, 306 ‘ಡಿ’ ದರ್ಜೆ ನೌಕರರು ಸೇರಿದಂತೆ 6,932 ಸಿಬ್ಬಂದಿ ಅವಶ್ಯವಿದೆ. ಪ್ರತಿ ಕೇಂದ್ರಕ್ಕೆ ಒಬ್ಬರಂತೆ 221 ಮಂದಿ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು 442 ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತೆಯೊಂದಿಗೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ವಿದ್ಯಾರ್ಥಿಗೆ ಮಾಸ್ಕ್ ವಿತರಿಸಲಾಗುವುದು. ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಗಳನ್ನು ದ್ವಿಗುಣಗೊಳಿಸಲಾಗಿದ್ದು, ಈ ಮೊದಲು ಕೊಠಡಿಯೊಂದರಲ್ಲಿ 20 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಈ ಬಾರಿ ಹೆಚ್ಚು ಅಂತರ ಕಾಯ್ದುಕೊಳ್ಳಬೇಕಿರುವುದರಿಂದ 12 ಮಂದಿಯನ್ನು ಮಾತ್ರ ಕೂರಿಸಲಾಗುವುದು’ ಎಂದು ಹೇಳಿದರು.

ಸುರಕ್ಷತೆಗೆ ಆದ್ಯತೆ

ಕೋವಿಡ್ ಸೋಂಕಿತ ಅಥವಾ ಶಂಕಿತರು ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಹಾಗೂ ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.

–ಗಜಾನನ ಮನ್ನಿಕೇರಿ, ಡಿಡಿಪಿಐ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.