ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹೀನ್‌ ಸಂಸ್ಥೆಯಿಂದ ₹ 5 ಕೋಟಿ ವಿದ್ಯಾರ್ಥಿವೇತನ

ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾಹಿತಿ
Last Updated 10 ನವೆಂಬರ್ 2020, 8:58 IST
ಅಕ್ಷರ ಗಾತ್ರ

ಬೆಳಗಾವಿ: ‘ದೀರ್ಘ ಕಾಲದಿಂದ ನೀಟ್‌ ಪರೀಕ್ಷೆ ಬರೆಯುತ್ತಿರುವ ಪುನರಾವರ್ತಿತ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಇತರ ಕೋರ್ಸ್‍ಗಳಲ್ಲಿ ಪ್ರವೇಶ ಪಡೆಯುವವರಿಗೆ ₹ 5 ಕೋಟಿ ವಿದ್ಯಾರ್ಥಿವೇತನ ನೀಡಲಾಗುವುದು’ ಎಂದು ಬೀದರ್‌ನ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ತಿಳಿಸಿದರು.

‘ಈ ಹಿಂದೆ ₹ 2 ಕೋಟಿವರೆಗೆ ವಿದ್ಯಾರ್ಥಿವೇತನ ಕೊಡಲಾಗುತ್ತಿತ್ತು. ಆದರೆ, ಕೊರೊನಾ ಹಾವಳಿ ಮತ್ತು ಸುದೀರ್ಘ ಲಾಕ್‌ಡೌನ್ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಹೆಚ್ಚಿನವರಿಗೆ ಅನುಕೂಲ ಆಗಲೆಂದು ಮೊತ್ತ ಹೆಚ್ಚಿಸಿದ್ದೇವೆ. ದೇಶದ ವಿವಿಧೆಡೆ ಇರುವ 42 ಶಾಖೆಗಳ 2ರಿಂದ 3ಸಾವಿರ ವಿದ್ಯಾರ್ಥಿಗಳಿಗೆ ಇದರ ಲಾಭ ಸಿಗಲಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವಾಗುವುದು ನಮ್ಮ ಉದ್ದೇಶ. ಕೋವಿಡ್‌–19ನಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ನೀಟ್ ತರಬೇತಿ ನೀಡಲಾಗುವುದು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ಇರಲಿದೆ. ಸಂಸ್ಥೆಯ ಜಾಲತಾಣದಲ್ಲಿ ಹೆಸರು ನೋಂದಾಯಿಸಿ ನೆರವು ಪಡೆಯಬಹುದು. ನೀಟ್ ಪುನರಾವರ್ತಿತ ವಿದ್ಯಾರ್ಥಿಗಳ ಪ್ರವೇಶಕ್ಕೆ ನ.15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ: 18001216235 ಸಂಪರ್ಕಿಸಬಹುದು’ ಎಂದು ತಿಳಿಸಿದರು.

‘ಶಾಲೆ ಬಿಟ್ಟವರು, ಬಡ ಮಕ್ಕಳಿಗೆ ಆದ್ಯತೆ ಕೊಡಲಾಗುತ್ತಿದೆ. ಯುಪಿಎಸ್‌ಸಿ ಬರೆಯಲು ಇಚ್ಛಿಸುವ ಅಥವಾ ವೈದ್ಯಕೀಯ, ಎಂಜಿನಿಯರ್, ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡುತ್ತಿದ್ದೇವೆ. ಕಳೆದ ಬಾರಿ ವೃತ್ತಿಪರ ಕೋರ್ಸ್‌ಗಳಿಗೆ ರಾಜ್ಯದ ಒಟ್ಟಾರೆ ಸರ್ಕಾರಿ ಸೀಟು ಪಡೆದವರ ಪೈಕಿ ಶೇ 8ರಷ್ಟು (327 ವಿದ್ಯಾರ್ಥಿಗಳು) ನಮ್ಮ ಸಂಸ್ಥೆಯವರಾಗಿದ್ದಾರೆ. ಮುಂದಿನ ವರ್ಷ ಈ ಪ್ರಮಾಣವನ್ನು ಶೇ 10ಕ್ಕೆ ಏರಿಸುವ ಗುರಿ ಇದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತಯಾರಿಸಲಾಗುವುದು’ ಎಂದರು.

‘ಸಂಸ್ಥೆಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಇರುವುದಿಲ್ಲ. ಶಾಲೆ ಬಿಟ್ಟ ಮಕ್ಕಳಿಗಾಗಿಯೇ ಎಐಸಿಯು (ಅಕಾಡೆಮಿಕ್ ಇಂಟೆನ್ಸಿವ್ ಕೇರ್ ಯೂನಿಟ್) ತೆರೆಯಲಾಗಿದೆ. ಸದ್ಯ 333 ವಿದ್ಯಾರ್ಥಿಗಳು ಇದರ ಲಾಭ ಪಡೆದಿದ್ದಾರೆ. ನೇರವಾಗಿ 9 ಅಥವಾ 10ನೇ ತರಗತಿಗೆ ಪ್ರವೇಶ ಹೊಂದಿ, ಪರೀಕ್ಷೆ ಬರೆಯಲು ಸಮರ್ಥರಾಗಿದ್ದಾರೆ’ ಎಂದು ತಿಳಿಸಿದರು.

ಸಂಸ್ಥೆಯಲ್ಲಿ ಓದಿ ನೀಟ್‌ನಲ್ಲಿ ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆದ ಅರಬಾಜ್ ಅಹಮ್ಮದ್, ‘ಆರ್ಥಿಕ ಮತ್ತು ಕೌಟುಂಬಿಕವಾಗಿ ಸಂಕಷ್ಟದಲ್ಲಿದ್ದ ನನಗೆ ಶಾಹಿನ್‌ ಶಿಕ್ಷಣ ಸಂಸ್ಥೆಯಿಂದ ನೆರವು ಸಿಕ್ಕಿದ್ದರಿಂದ ನೀಟ್‌ನಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ನೆನೆದರು.

ನಗರದ ಶಾಹೀನ್‌ ಕಾಲೇಜು ಬೆಳಗಾವಿ ಅಧ್ಯಕ್ಷ ನಿಯಾಜ್ ಸೌದಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT