ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 530 ಮಕ್ಕಳ ಭವಿಷ್ಯಕ್ಕೆ ಕೋವಿಡ್ ’ಕೊಳ್ಳಿ’

19 ಮಕ್ಕಳು ಅನಾಥ; ಏಕ ಪೋಷಕರ ಆರೈಕೆಯಲ್ಲಿ 511 ಮಂದಿ
Last Updated 15 ಜೂನ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್–19 ಸೋಂಕು ಜಿಲ್ಲೆಯಲ್ಲಿ ಈವರೆಗೆ ಬರೋಬ್ಬರಿ 530 ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ. ಬಾಲ್ಯದಲ್ಲೇ ಅತಂತ್ರ ಸ್ಥಿತಿಗೆ ಅವರನ್ನು ದೂಡಿದೆ. ಪರರ ‘ಆಶ್ರಯ’ ಪಡೆಯಬೇಕಾದ ಅನಿವಾರ್ಯತೆ ತಂದೊಡ್ಡಿದೆ.

ಈ ಪೈಕಿ, ಇಬ್ಬರು ಮಕ್ಕಳು ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. 17 ಮಕ್ಕಳು ಕೋವಿಡ್‌ಗಿಂತ ಮುಂಚೆ ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ತಂದೆ ಅಥವಾ ತಾಯಿ ಕಳೆದುಕೊಂಡು ಏಕ ಪೋಷಕರ ಆರೈಕೆಯಲ್ಲಿದ್ದರು. ಕೋವಿಡ್‌ನಿಂದಾಗಿ, ಇದ್ದ ತಂದೆ ಅಥವಾ ತಾಯಿಯೂ ದೂರವಾಗಿ ಅನಾಥರಾಗಿದ್ದಾರೆ. 511 ಮಕ್ಕಳು ಸದ್ಯ ಏಕ ಪೋಷಕರ ಆರೈಕೆಯಲ್ಲಿದ್ದಾರೆ.

ಕೋವಿಡ್ ಬಾಧಿತರಾಗಿ ಹಾಸಿಗೆ ಹಿಡಿದವರು ಅಥವಾ ಆಸ್ಪತ್ರೆ ಸೇರಿದವರು ಮರಳಿ ಬಾರದ ಊರಿಗೆ ಪಯಣಿಸಿದ್ದರಿಂದ ಮಕ್ಕಳ ಬದುಕು ಅತಂತ್ರವಾಗಿದೆ. ಪ್ರೀತಿಯ ಅಮ್ಮ–ಅಕ್ಕರೆಯ ಅಪ್ಪನಿಲ್ಲದೆ ಈ ಮಕ್ಕಳು ತಬ್ಬಲಿಯಾಗಿದ್ದಾರೆ. ಬಹುತೇಕ ಕುಟುಂಬಗಳು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವಾಗಿವೆ.

ಇಲಾಖೆಯಿಂದ ಮಾಹಿತಿ ಸಂಗ್ರಹ: 2020ರ ಮಾರ್ಚ್‌ 1ರಿಂದ ಇದೇ ವರ್ಷದ ಮೇ 31ರವರೆಗಿನ ಅವಧಿಯಲ್ಲಿ ಮಾಹಿತಿ ಇದಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಮೀಕ್ಷೆ ನಡೆಯುತ್ತಿದೆ.

‘ಕೋವಿಡ್‌ನಿಂದಾಗಿ ಇಬ್ಬರು ಮಕ್ಕಳು ತಂದೆ ಮತ್ತು ತಾಯಿ ಕಳೆದುಕೊಂಡಿದ್ದಾರೆ. 16 ಹಾಗೂ 17 ವರ್ಷ ವಯಸ್ಸಿನ ಬಾಲಕ ಹಾಗೂ ಬಾಲಕಿಯು ಖಾನಾಪುರದ ಚಿಕ್ಕಪ್ಪನ ಆಶ್ರಯದಲ್ಲಿದ್ದಾರೆ. ನಾವೇ ಮಕ್ಕಳನ್ನು ನೋಡಿಕೊಳ್ಳುತ್ತೇವೆ. ಬಿಟ್ಟು ಕೊಡುವುದಿಲ್ಲ. ಸರ್ಕಾರದಿಂದ ಆರ್ಥಿಕ ನೆರವು ಕೊಡಿಸಿದರೆ ಅವರ ಭವಿಷ್ಯ ರೂಪಿಸಲು ಸಹಾಯವಾಗಲಿದೆ ಎಂದು ಅವರ ಚಿಕ್ಕಪ್ಪ ತಿಳಿಸಿದ್ದಾರೆ. ಉಳಿದ 17 ಮಕ್ಕಳು ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ, ಮಾವ, ಅಜ್ಜ, ಅಜ್ಜಿ ಅಥವಾ ಸಂಬಂಧಿಕರ ಆರೈಕೆಯಲ್ಲಿದ್ದಾರೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರವೀಂದ್ರ ರತ್ನಾಕರ ‘‍ಪ್ರಜಾವಾಣಿ’ಗೆ ತಿಳಿಸಿದರು.

ದಾಖಲಿಸಲಾಗುತ್ತಿದೆ: ಬಹುತೇಕ ಮಕ್ಕಳು, ಮನೆಯ ಯಜಮಾನನಾಗಿದ್ದ ತಂದೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರದಿಂದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಪೋಷಕರಿದ್ದಾರೆ. ರಾಯಬಾಗ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 80 ಮಕ್ಕಳು ಏಕ ಪೋಷಕರ ಆಸರೆಯಲ್ಲಿದ್ದಾರೆ.

‘ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರು ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ ಸಿಡಿಪಿಒ ಮೂಲಕ ಒದಗಿಸುತ್ತಿದ್ದಾರೆ. 15 ದಿನಗಳ ಹಿಂದೆ ಆರಂಭವಾಗಿರುವ ಸಮೀಕ್ಷೆ ಪ್ರಗತಿಯಲ್ಲಿದ್ದು, ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಏಕಪೋಷಕರ ಆರೈಕೆಯಲ್ಲಿರುವ 511 ಮಕ್ಕಳ ವಿವರವನ್ನು ಇಲಾಖೆಯ ‘ಬಾಲ ಸ್ವರಾಜ್‌’ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತಿದೆ’ ಎಂದು ರತ್ನಾಕರ ಮಾಹಿತಿ ನೀಡಿದರು.

‘ಮಕ್ಕಳ ಕಲ್ಯಾಣ ಸಮಿತಿಯು (ಸಿಡಬ್ಲ್ಯುಸಿ) ಮಕ್ಕಳ ಮಾಹಿತಿ ಪರಿಶೀಲಿಸಿ ನೀಡುವ ನಿರ್ದೇಶನದ ಮೇರೆಗೆ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಅರ್ಹ ಮಕ್ಕಳಿಗೆ ರಾಜ್ಯ ಸರ್ಕಾರದ ‘ಪ್ರಾಯೋಜಕತ್ವ’ ಯೋಜನೆಯಲ್ಲಿ ತಿಂಗಳಿಗೆ ₹1 ಸಾವಿರದಂತೆ 3 ವರ್ಷಗಳವರೆಗೆ ₹ 36ಸಾವಿರ ಆರ್ಥಿಕ ನೆರವು ದೊರೆಯಲಿದೆ. ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದವರನ್ನೂ ಯೋಜನೆಗೆ ಒಳಪಡಿಸಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಅಧಿಕಾರಿ ಏನಂತಾರೆ?

ಸದ್ಯಕ್ಕೆ ಜಿಲ್ಲೆಯಲ್ಲಿ, ಕೋವಿಡ್ ಅಥವಾ ಕೋವಿಡೇತರ ಕಾರಣಗಳಿಂದ ಪೋಷಕರನ್ನು ಕಳೆದುಕೊಂಡ 220 ಮಕ್ಕಳಿಗೆ ‘ಪ್ರಾಯೋಜಕತ್ವ’ ಯೋಜನೆಯಲ್ಲಿ ತಿಂಗಳಿಗೆ ₹ 1ಸಾವಿರ ನೆರವನ್ನು ಸರ್ಕಾರ ಒದಗಿಸುತ್ತಿದೆ.
-ರವೀಂದ್ರ ರತ್ನಾಕರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT