ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಸಮಾಜಕ್ಕೆ ಶೇ 7.5 ಮೀಸಲಾತಿ: ಶಾಸಕ ಸತೀಶ ಜಾರಕಿಹೊಳಿ ಆಗ್ರಹ

Last Updated 13 ಅಕ್ಟೋಬರ್ 2019, 12:51 IST
ಅಕ್ಷರ ಗಾತ್ರ

ಬೆಳಗಾವಿ: ‘ವಾಲ್ಮೀಕಿ ಸಮಾಜಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.75ರಷ್ಟು ಮೀಸಲಾತಿ ಅಗತ್ಯವಾಗಿದೆ. ಇದನ್ನು ಪಡೆಯುವ ನಿಟ್ಟಿನಲ್ಲಿ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮುಂದುವರಿಸಲಾಗುವುದು’ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಪಾಲಿಕೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿನ ಕುಮಾರಗಂಧರ್ವ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಡಾ.ಬಿ.ಆರ್. ಅಂಬೇಡ್ಕರ್‌ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂದು ಹೇಳಿದ್ದರು. ಈಗ ಅವುಗಳ ಜೊತೆಗೆ ಉದ್ಯೋಗ ಎಂಬ ಪದವನ್ನೂ ಸೇರಿಸಿಕೊಳ್ಳುವ ಅಗತ್ಯವಿದೆ.ಸಮಾಜದಲ್ಲಿ ಶಿಕ್ಷಣ ಹೊಂದುವವರ ಪ್ರಮಾಣ ಈಗ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳಬೇಕಿದೆ. ತಂತ್ರಜ್ಞಾನದ ಈ ಯುಗದಲ್ಲಿ ಉದ್ಯೋಗಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕಿದೆ. ಇತ್ತೀಚೆಗೆ ಸರ್ಕಾರಿ ಉದ್ಯೋಗಗಳು ಕೂಡ ಕಡಿಮೆಯಾಗುತ್ತಿವೆ. ಖಾಸಗಿ ರಂಗದಲ್ಲಿಯೇ ಉದ್ಯೋಗ ಪಡೆಯಬೇಕಾಗಿದೆ. ಆದರೂ ವಾಲ್ಮೀಕಿ ಸಮಾಜಕ್ಕೆ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿಗಾಗಿ ಹೋರಾಟ ಅಗತ್ಯವಾಗಿದೆ. ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ’ ಎಂದು ತಿಳಿಸಿದರು.

‘ಸರ್ಕಾರದಿಂದ ಆಚರಣೆ ಮಾಡುವ ಮಹಾನ್ ನಾಕರ ಜಯಂತಿಗಳು ಕೇವಲ ಸಂಭ್ರಮಕ್ಕೆ ಸೀಮಿತವಾಗಬಾರದು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪ್ರತಿ ವರ್ಷ ಸುಧಾರಣೆಯಾದಾಗ ಮಾತ್ರ ಆಚರಣೆಗೆ ಅರ್ಥ ಬರುತ್ತದೆ. ಪುರೋಹಿತಶಾಹಿಗಳಿಂದ ಕೆಳ ವರ್ಗದವರು ಮೋಸ ಹೋಗುತ್ತಿದ್ದಾರೆ. ಆದ ಕಾರಣ ಎಚ್ಚೆತ್ತುಕೊಂಡು ಬಲ ಹಾಗೂ ಬುದ್ಧಿಯಿಂದ ಸಮಾಜದ ಮುಂಚೂಣಿಯಲ್ಲಿ ಬರಬೇಕಾಗುತ್ತದೆ’ ಎಂದರು.

ಉಪನ್ಯಾಸ ನೀಡಿದ ಧಾರವಾಡ ಕರ್ನಾಟಕ ಕಾಲೇಜಿನ ಡಾ.ಶರಣು ಮುಷ್ಠಿಗೇರಿ, ‘ಜಗತ್ತಿನ ಮಹಾನ್ ಆದರ್ಶ ಗ್ರಂಥಗಳಾಗಿರುವ ರಾಮಾಯಣ-ಮಹಾಭಾರತಗಳು ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು. ಭಾರತೀಯ ಎಂದು ಹೇಳಿಕೊಳ್ಳಬೇಕಾದರೆ ನಾವು ಈ ಎರಡೂ ಮಹಾನ್ ಗ್ರಂಥಗಳನ್ನು ಓದಲೇಬೇಕು. ವಾಲ್ಮೀಕಿ ಆದರ್ಶಗಳು ಬದುಕಿಗೆ ಅರಿವಿನ ಮಾರ್ಗಗಳಾಗಿವೆ’ ಎಂದು ಹೇಳಿದರು.

‘ದೇವರು, ಧರ್ಮ, ನಂಬಿಕೆಯ ಹೆಸರಿನಲ್ಲಿ ಸಮಾಜವನ್ನು ಯಾಮಾರಿಸುವ ಕೆಲಸ ನಡೆದಿದೆ. ಇದರ ಬಗ್ಗೆ ಜಾಗರೂಕತೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್,ಜಿಲ್ಲಾ ಪಂಚಾಯ್ತಿ ಸಿಇಒಡಾ.ಕೆ.ವಿ. ರಾಜೇಂದ್ರ, ಎಸ್ಪಿ ಲಕ್ಷ್ಮಣ ನಿಂಬರಗಿ, ಪಾಲಿಕೆ ಆಯುಕ್ತ ಜಗದೀಶ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕಾಂಗ್ರೆಸ್‌ ಮಹಿಳಾ ಘಟಕ (ಜಿಲ್ಲಾ) ಅಧ್ಯಕ್ಷ ಜಯಶ್ರೀ ಮಾಳಗಿ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಅಶೋಕ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT