ಮಂಗಳವಾರ, ಡಿಸೆಂಬರ್ 7, 2021
20 °C

ಯಲ್ಲಮ್ಮನಗುಡ್ಡದಲ್ಲಿ ಆಯುಧಪೂಜೆ, ವಿಜಯದಶಮಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಗರಗೋಳ: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ 8 ದಿನಗಳವರೆಗೆ ನಡೆದ ದಸರಾ ಉತ್ಸವ ಗುರುವಾರ ಸಂಪನ್ನಗೊಂಡಿತು. ಆಯುಧಪೂಜೆ ಹಬ್ಬದ ಅಂಗವಾಗಿ ಸಾವಿರಾರು ಭಕ್ತರು ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದರು. ತಮ್ಮ ಇಷ್ಟಾರ್ಥ ಈಡೇರಿಸಿದ ದೇವಿಗೆ ಹರಕೆ ತೀರಿಸಿದರು.

ಪ್ರತಿ ವರ್ಷ ನವರಾತ್ರಿಯ 8ನೇ ದಿನದಂದು ಆಯುಧ ಪೂಜೆ ಹಾಗೂ 9ನೇ ದಿನದಂದು ವಿಜಯದಶಮಿ ಜರುಗುತ್ತಿತ್ತು. ಆದರೆ, ಈ ಬಾರಿ ಎಂಟೇ ದಿನಕ್ಕೆ ದಸರಾ ಆಚರಣೆ ಪೂರ್ಣಗೊಂಡವು. ಒಂದೇ ದಿನವೇ ಆಯುಧ ಪೂಜೆ ಹಾಗೂ ವಿಜಯದಶಮಿ ಕಾರ್ಯಕ್ರಮ ಜರುಗಿತು. ಸಾವಿರಾರು ಭಕ್ತರು ಈ ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.

ಅರ್ಚಕರು ಆಯುಧಗಳನ್ನು ಹೊತ್ತು ದೇವಸ್ಥಾನದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದರು. ಪಲ್ಲಕ್ಕಿ ಉತ್ಸವವೂ ಸಂಭ್ರಮದಿಂದ ಜರುಗಿತು. ಸಕಲ ಜೀವರಾಶಿ ಒಳಿತಿಗೆ ಅರ್ಚಕರು ಪ್ರಾರ್ಥಿಸಿದರು. ಸಂಜೆ ಯಲ್ಲಮ್ಮ ದೇವಿ ದೇವಸ್ಥಾನದಿಂದ ಉಗರಗೋಳ ಮಾರ್ಗದಲ್ಲಿರುವ ಬನ್ನೆಮ್ಮ ದೇವಿ ದೇವಸ್ಥಾನದವರೆಗೆ ಆಯುಧಗಳನ್ನು ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಾಮಂಗಳಾರತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.

ದಸರಾ ಅಂಗವಾಗಿ ಯಲ್ಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಉಗರಗೋಳದ ಹಿರಿಯರು ಮತ್ತು ಭಕ್ತರ ಸಮ್ಮುಖದಲ್ಲಿ ಬನ್ನಿ ಮುಡಿಯಲಾಯಿತು. ‘ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ’ ಎನ್ನುವ ಜೈಕಾರ ಮುಗಿಲು ಮುಟ್ಟಿದ್ದವು. ಕುಂಕುಮ-ಭಂಡಾರ, ತೆಂಗಿನಕಾಯಿ, ಕರ್ಪೂರದ ವ್ಯಾಪಾರ ಜೋರಾಗಿತ್ತು.

ದೇವಸ್ಥಾನದ ಇಒ ರವಿ ಕೋಟಾರಗಸ್ತಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ನಾಗರತ್ನಾ ಚೋಳಿನ, ಅರವಿಂದ ಮಾಳಗೆ, ಅಣ್ಣಪೂರ್ಣಾ ತೇಲಗಿ, ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಕೊಳ್ಳಪ್ಪಗೌಡ ಗಂದಿಗವಾಡ, ಅಶೋಕ ಪೂಜಾರಿ, ವೈ.ವೈ. ಕಾಳಪ್ಪನವರ, ವಿಶ್ವನಾಥಗೌಡ ಲಿಂಗಋಷಿ, ಏಕನಗೌಡ ಮುದ್ದನಗೌಡ್ರ, ಆರ್.ಎಚ್. ಸವದತ್ತಿ, ಅಲ್ಲಮಪ್ರಭು ಪ್ರಭುನವರ, ಪ್ರಕಾಶ ಪ್ರಭುನವರ, ಸದಾನಂದ ಈಟಿ, ಮಲ್ಲಿಕಾರ್ಜುನ ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐ ಶಿವಾನಂದ ಗುಡನಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು