ಮಂಗಳವಾರ, ಮೇ 18, 2021
24 °C
ಜಿಲ್ಲಾಧಿಕಾರಿ ಡಾ.ಕೆ. ಹರೀಶ್‌ಕುಮಾರ್‌ ಹೇಳಿಕೆ

ಹೊಸ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

‘ಕೇಂದ್ರ ಗ್ರಹ ಮಂತ್ರಾಲಯದ ಆದೇಶದ ಪ್ರಕಾರ ಕೋವಿಡ್-19 ಹರಡುವಿಕೆ ತಡೆಗಟ್ಟಲು ಸಾರ್ವಜನಿಕ ಸಮಾರಂಭ, ಆಚರಣೆ ಸೇರಿದಂತೆ ಮನರಂಜನೆ ಕಾರ್ಯಕ್ರಮ ಹಾಗೂ ಇತರ ಸಂದರ್ಭಗಳಲ್ಲಿ ಸೇರಬಹುದಾದ ಸಾರ್ವಜನಿಕರ ಸಂಖ್ಯೆಯನ್ನು ಮಿತಿಗೊಳಿಸಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆ ಪ್ರಕಾರ, ತೆರೆದ ಪ್ರದೇಶದಲ್ಲಿ ಮದುವೆ ನಡೆಯುತ್ತಿದ್ದರೆ 200 ಜನರಿಗೆ ಹಾಗೂ ಕಲ್ಯಾಣ ಮಂಟಪ, ಸಭಾಂಗಣ, ಹಾಲ್ ಹಾಗೂ ಮುಚ್ಚಿದ ಯಾವುದೇ ಪ್ರದೇಶದಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ 100 ಜನರಷ್ಟೇ ಸೇರಬೇಕು. ಜನ್ಮದಿನ ಹಾಗೂ ಇತರ ಆಚರಣೆ ಸಂದರ್ಭದಲ್ಲಿ ತೆರೆದ ಪ್ರದೇಶದಲ್ಲಿ 50 ಹಾಗೂ ಸಭಾಂಗಣ, ಹಾಲ್ ಹಾಗೂ ಇತರ ಮುಚ್ಚಿದ ಪ್ರದೇಶದಲ್ಲಿ 25 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು’.

‘ನಿಧನ/ಶವಸಂಸ್ಕಾರದ ವೇಳೆ ತೆರೆದ ಪ್ರದೇಶದಲ್ಲಿ 50 ಮತ್ತು ಮುಚ್ಚಿದ ಪ್ರದೇಶದಲ್ಲಿ 25 ಜನ; ಅಂತ್ಯಕ್ರಿಯೆ ವೇಳೆ 25 ಜನರು ಮೀರದಂತೆ ಎಚ್ಚರಿಕೆ ವಹಿಸಬೇಕು. ಇತರ ಸಮಾರಂಭಗಳ ಸಂದರ್ಭಧಲ್ಲಿ ಸಭಾಂಗಣದ ವಿಸ್ತೀರ್ಣಕ್ಕೆ ಅನುಗುಣವಾಗಿ 50 ಜನ ಮೀರದಂತೆ ಇರಬೇಕು. ರಾಜಕೀಯ ಸಮಾವೇಶದಲ್ಲಿ 200 ಜನ ಮೀರದಂತೆ ನೋಡಿಕೊಳ್ಳಬೇಕು ಎಂದು ನೂತನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಧಾರ್ಮಿಕ ಆಚರಣೆ ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಸರ್ಕಾರ ಹೊರಡಿಸುವ ಪ್ರಮಾಣಿತ ಕಾರ್ಯವಿಧಾನವನ್ನು (ಎಸ್‌ಒಪಿ) ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಸಭಾಂಗಣ, ಕಲ್ಯಾಣಮಂಟಪ, ಸಿನಿಮಾ ಮಂದಿರ, ಸಭಾಂಗಣಗಳು ಹಾಗೂ ಜನ ಸೇರುವ ಇತರೆ ಪ್ರದೇಶಗಳ ಉಸ್ತುವಾರಿ ಹೊಂದಿದವರು ಕಡ್ಡಾಯವಾಗಿ ‌ಸ್ಯಾನಿಟೈಜೇಷನ್ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.

‘ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆಗೆ ಸಂಬಂಧಿಸಿದಂತೆ ಆಯಾ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಉಸ್ತುವಾರಿ ವಹಿಸಲಾಗಿದೆ. ಅನುಷ್ಠಾನ ಜವಾಬ್ದಾರಿಯನ್ನು ಆಯಾ ತಹಶೀಲ್ದಾರರ ನೇತೃತ್ವದಲ್ಲಿ ತಾ.ಪಂ. ಇಒಗಳಿಗೆ ಮತ್ತು ಸ್ಥಳೀಯ ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ವಹಿಸಲಾಗಿದೆ. ನ್ಯೂನತೆ ಕಂಡುಬಂದರೆ‌ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಕೋವಿಡ್-19 ನಿಯಂತ್ರಣ ಮಾರ್ಗಸೂಚಿ ಪಾಲನೆಯಲ್ಲಿ ಲೋಪ ಎಸಗುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ -2005ರ ಕಲಂ 51ರಿಂದ 60 ಹಾಗೂ ಭಾರತೀಯ ದಂಡಸಂಹಿತೆ ಮತ್ತು ಅನ್ವಯ ಆಗಬಹುದಾದ ಇತರ ಕಾನೂನು ಉಪಬಂಧಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.