ಶನಿವಾರ, ಅಕ್ಟೋಬರ್ 23, 2021
20 °C
ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ

ಬೆಳಗಾವಿ: ಹಲವು ಕಾರ್ಯಕ್ಕೆ ಅನುದಾನ ಬಳಕೆ, ಗಮನಸೆಳೆದ ಅನಿಲ ಬೆನಕೆ

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ, ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ಅನಿಲ ಬೆನಕೆ ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಲ್ಲಿ ದೊರೆಯುವ ಅನುದಾನವನ್ನು ಹಲವು ಕಾರ್ಯಗಳಿಗೆ ಬಳಸಿ ಗಮನಸೆಳೆದಿದ್ದಾರೆ.

ದೊಡ್ಡ ದೊಡ್ಡ ಮೊತ್ತದ ಕೆಲಸಗಳ ಬದಲಿಗೆ, ಸಣ್ಣ ಮೊತ್ತ ಬೇಡುವ ಕಾರ್ಯಗಳಿಗೆ ಆದ್ಯತೆ ನೀಡಿದ್ದಾರೆ. ತುರ್ತು ಕಾಮಗಾರಿಗಳಿಗೆ ಒತ್ತು ಕೊಡುವ ಮೂಲಕ ನಿವಾಸಿಗಳ ಮನಸ್ಸು ಗೆಲ್ಲುವುದಕ್ಕೆ ಮುಂದಾಗಿದ್ದಾರೆ.

ಸಂಬಂಧಿಸಿದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪಡೆದಿರುವ ಮಾಹಿತಿ ಪ್ರಕಾರ, 2018-19ಸಾಲಿನಿಂದ 2021–22ರ ಸೆಪ್ಟೆಂಬರ್‌ವರೆಗೆ ಅವರಿಗೆ ₹ 4.60 ಕೋಟಿ ಅನುದಾನ ಬಂದಿದೆ. ಅದರಲ್ಲಿ ಶೇ 80ರಷ್ಟನ್ನು ಬಳಸಿದ್ದಾರೆ. ಸಾಮಾನ್ಯವಾಗಿ ಶಾಸಕರು ಸಮುದಾಯ ಭವನಗಳು, ದೇವಾಲಯಗಳ ನಿರ್ಮಾಣಕ್ಕೆ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಆರ್ಥಿಕ ನೆರವು ಕಲ್ಪಿಸಿದ್ದಾರೆ. ಆದರೆ, ಬೆನಕೆ ಈ ವಿಷಯದಲ್ಲಿ ಭಿನ್ನವಾಗಿದ್ದಾರೆ. ಸಮುದಾಯದ ಇತರ ಕೆಲಸಗಳಿಗೆ ಹಣ ಒದಗಿಸಿದ್ದಾರೆ.

ಶಾಲೆಗಳಿಗೆ: ಶಾಲೆಗಳಿಗೆ ಕೊಠಡಿ, ಕಾಂಪೌಂಡ್, ಮೈದಾನ ನಿರ್ಮಾಣ ಹಾಗೂ ಸ್ಮಾರ್ಟ್‌ ತರಗತಿಗಳನ್ನು ರೂಪಿಸಲು ಅನುದಾನ ಕೊಟ್ಟಿದ್ದಾರೆ. ಅಲ್ಲಲ್ಲಿ ಚರಂಡಿ ನಿರ್ಮಾಣಕ್ಕೆ ನೆರವಾಗಿದ್ದಾರೆ. ಜಿಮ್‌ಗಳಿಗೆ ಪರಿಕರಗಳನ್ನು ಒದಗಿಸುವ ಮೂಲಕ ಯುವಜನರ ಪ್ರೀತಿಗೆ ಪಾತ್ರವಾಗಲು ಯತ್ನಿಸಿದ್ದಾರೆ. ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಕೂಡ ಒದಗಿಸಿದ್ದಾರೆ.

ವಂಟಮೂರಿ ಹಾಗೂ ರಾಮತೀರ್ಥನಗರದ ಸರ್ಕಾರಿ ಶಾಲೆಗೆ ಕೊಠಡಿ, ಮೈದಾನ, ಕಾಂಪೌಂಡ್ ನಿರ್ಮಿಸಿಕೊಟ್ಟಿದ್ದಾರೆ. ಸ್ಮಾರ್ಟ್‌ ತರಗತಿ ಕೊಠಡಿ ರೂಪಿಸಲು ಅನುದಾನ ಕೊಟ್ಟಿದ್ದಾರೆ. ಅಜಂನಗರ, ಕಣಬರ್ಗಿ, ಬಸವನಕುಡಚಿಯಲ್ಲಿ ಕನ್ನಡ, ಮರಾಠಿ ಹಾಗೂ ಉರ್ದು ಮಾಧ್ಯಮ ಶಾಲೆಗಳಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಿದ್ದಾರೆ.

ಕೋವಿಡ್‌ ಪ್ರಕರಣಗಳು ಹೆಚ್ಚಿದ್ದ ಸಂದರ್ಭದಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಆರೈಕೆ ಕೇಂದ್ರಗಳಿಗೆ 15 ಆಮ್ಲಜನಕ ಸಾಂದ್ರಕಗಳನ್ನು ಕೊಡಿಸಿದ್ದಾರೆ.

ವಿವಿಧ ಹಂತದಲ್ಲಿವೆ: ‘ಸಮುದಾಯ ಭವನಗಳ ನಿರ್ಮಾಣಕ್ಕೆ ಮಹಾನಗರಪಾಲಿಕೆ, ಬುಡಾದಿಂದ ಅನುದಾನ ಬಳಸಿಕೊಳ್ಳಲು ಅವಕಾಶವಿದೆ. ಹೀಗಾಗಿ, ನಾನು ಶಾಸಕರ ನಿಧಿಯನ್ನು ಇತರ ಉದ್ದೇಶಗಳಿಗೆ ಬಳಸುತ್ತಿದ್ದೇನೆ. 2018–19ರಲ್ಲಿ ₹ 1 ಕೋಟಿ ವಾಪಸ್ ಪಡೆಯಲಾಗಿದೆ. ಇದರಿಂದ ಬಹಳ ತೊಂದರೆಯಾಗಿದೆ. ಲಭ್ಯವಾದ ಅನುದಾನದಲ್ಲಿ ಹಲವು ಕಾಮಗಾರಿಗಳನ್ನು ಕೈಗೊಂಡು ಜನರಿಗೆ ಅನುಕೂಲ ಕಲ್ಪಿಸಿದ್ದು ಸಮಾಧಾನ ತಂದಿದೆ. ತ್ವರಿತವಾಗಿ ಶಿಫಾರಸು ಮಾಡುತ್ತಿದ್ದೇನೆ. ಹಲವು ಕಾಮಗಾರಿಗಳು ವಿವಿಧ ಹಂತದಲ್ಲಿವೆ’ ಎನ್ನುತ್ತಾರೆ ಬೆನಕೆ.

‘ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಮಹತ್ವದ್ದಾಗಿದೆ. ಹೀಗಾಗಿ, ಆ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿದ್ದೇನೆ. ₹ 5 ಲಕ್ಷ ವೆಚ್ಚ ತಗುಲಬಹುದಾದ ಚರಂಡಿ ಮೊದಲಾದ ತುರ್ತು ಕೆಲಸಗಳನ್ನು ಮಾಡಿಸಿದ್ದೇನೆ. ಶಿವಾಜಿನಗರ, ಕಾಮತ್‌ಗಲ್ಲಿ, ಬಾಪಟ್‌ ಗಲ್ಲಿ, ತೆಂಗಿನಕಾಯಿ ಗಲ್ಲಿ ಮೊದಲಾದ ಕಡೆಗಳಲ್ಲಿ 11 ಜಿಮ್‌ಗಳಿಗೆ ಸರಾಸರಿ ₹ 5 ಲಕ್ಷ ಮೌಲ್ಯದ ಪರಿಕರಗಳನ್ನು ಕೊಡಿಸಿದ್ದೇನೆ. ಇದರಿಂದ ಆ ಭಾಗದ ಯುವಕರು ನಿತ್ಯವೂ ಅಭ್ಯಾಸ ಮಾಡುವುದಕ್ಕೆ ಸಹಾಯವಾಗಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಚನ್ನಮ್ಮ ಸೊಸೈಟಿ, ರಾಮತೀರ್ಥ ನಗರ ಹಾಗೂ ಹನುಮಾನ್‌ನಗರ ಟಿ.ವಿ. ಸೆಂಟರ್‌ನಲ್ಲಿ  ಸಮುದಾಯಭವನದ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಬಾಂದೂರ್ ಗಲ್ಲಿ ಸೇರಿದಂತೆ ಅಲ್ಲಲ್ಲಿ ಕೊಳವೆಬಾವಿ ಕೊರೆಯಿಸಿಕೊಟ್ಟಿದ್ದೇನೆ. ಬಸವನಕುಡಚಿ ಹಾಗೂ ಚವಾಟಗಲ್ಲಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿಕೊಟ್ಟಿದ್ದೇನೆ’ ಎಂದು ತಿಳಿಸಿದರು.

‘ಪ್ರಸಕ್ತ ಸಾಲಿನಲ್ಲಿ ₹ 50 ಲಕ್ಷ ಮಾತ್ರ ಬಂದಿದೆ. ಒಂದಿಷ್ಟು ಕಾಮಗಾರಿಗಳನ್ನು ಶಿಫಾರಸು ಮಾಡಿದ್ದೇನೆ. ಅನುದಾನ ತ್ವರಿತ ಬಿಡುಗಡೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದೇವೆ’ ಎಂದು ಹೇಳಿದರು.

ಇಲ್ಲಿಯವರೆಗೆ ಪ್ರತಿ ವರ್ಷ ₹ 1 ಕೋಟಿ ಮಾತ್ರ ಬಂದಿದೆ. ನಿಗದಿತ ₹ 2 ಕೋಟಿ ದೊರೆತರೆ ಜನರಿಗೆ ಅನುಕೂಲವಾಗುವ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ.

– ಅನಿಲ ಬೆನಕೆ, ಶಾಸಕ, ಉತ್ತರ ಮತಕ್ಷೇತ್ರ, ಬೆಳಗಾವಿ

ಪ್ರಗತಿ ಮಾಹಿತಿ

ಸಾಲು;ಬಿಡುಗಡೆಯಾದ ಅನುದಾನ;ಶಿಫಾರಸಾದ ಕಾಮಗಾರಿ;ಮಂಜೂರಾದ ಕಾಮಗಾರಿ;ಮೊತ್ತ;ಪೂರ್ಣ;ಪ್ರಗತಿ

2018–19;₹1 ಕೋಟಿ;70;50;₹ 1.43 ಕೋಟಿ;34;16

2019–20;₹ 1.60 ಕೋಟಿ;25;17;₹ 89.64 ಲಕ್ಷ;08;09

2020–21;₹ 1 ಕೋಟಿ;24;16;₹ 94 ಲಕ್ಷ;05;11

2021–22;₹ 1 ಕೋಟಿ;4;1;₹ 3.80 ಲಕ್ಷ;01;00

(2021–22ರಲ್ಲಿ ಸೆಪ್ಟೆಂಬರ್‌ವರೆಗೆ. ಮಾಹಿತಿ: ಉ‍‍ಪ ವಿಭಾಗಾಧಿಕಾರಿ ಕಚೇರಿ)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು