ಭಾನುವಾರ, ಜನವರಿ 19, 2020
25 °C

ಇಮ್ರಾನ್‌ಖಾನ್‌ ಮಾತುಗಳನ್ನಾಡುತ್ತಿರುವ ಸೋನಿಯಾ ಗಾಂಧಿ: ಅನುರಾಗ್‌ ಠಾಕೂರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಪೌರತ್ವ ಕಾಯ್ದೆಯ ವಿರುದ್ಧ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್‌ ಆಡಿದ್ದ ಮಾತುಗಳನ್ನೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆಡುತ್ತಿದ್ದಾರೆ’ ಎಂದು ಕೇಂದ್ರ ಆರ್ಥಿಕ ಖಾತೆಯ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಟೀಕಿಸಿದರು.

ನಗರದಲ್ಲಿ ಶನಿವಾರ ಬಿಜೆಪಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಮುಸ್ಲಿಮರ ದಾರಿ ತಪ್ಪಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಇದು ನಾಗರಿಕತ್ವ ಕೊಡುವ ಕಾಯ್ದೆ ಆಗಿದೆಯೇ ಹೊರತು ಕಸಿದುಕೊಳ್ಳುವುದಲ್ಲ. ವಿಪಕ್ಷದವರು ದೇಶದಲ್ಲಿ ವದಂತಿ ಹಬ್ಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

‘ದೇಶದ ಕೆಲವು ರಾಜ್ಯಗಳಲ್ಲಿ, ಕೆಲವು ಪ್ರದೇಶಗಳಲ್ಲಿ, ಕಾಂಗ್ರೆಸ್ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಮಾಡದ ಕೆಲಸವನ್ನು ಪ್ರದಾನಿ ನರೇಂದ್ರ ಮೋದಿ ಮಾಡುತ್ತಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಇದನ್ನು ಸಹಿಸಲು ಸಾದ್ಯವಾಗುತ್ತಿಲ್ಲ’ ಎಂದು ಆರೋಪಿಸಿದರು.

‘ಮೋದಿ ಪ್ರಧಾನಿಯಾದ ಬಳಿಕ ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್‌ದಿಂದ ರಕ್ಷಣೆ ಮಾಡಿದ್ದಾರೆ. ಕಾಶ್ಮೀರದ ಅನೇಕ ವರ್ಷಗಳ ಆರ್ಟಿಕಲ್‌ 370 ರದ್ದು ಮಾಡಿದ್ದಾರೆ. ಇದು ಕಾಂಗ್ರೆಸ್‌ಗೆ ಪಚನವಾಗುತ್ತಿಲ್ಲ. ತಿರಂಗಾ ಧ್ವಜಕ್ಕೆ ದೇಶದ 130 ಕೋಟಿ ಜನರನ್ನು ಒಟ್ಟುಗೂಡಿಸುವ ತಾಕತ್ತು ಇದೆ' ಎಂದರು.

‘ಪಾಕಿಸ್ತಾನ, ಆಫ್ಗಾನಿಸ್ತಾನ, ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರಾದ ಹಿಂದೂ, ಸಿಖ್‌, ಕ್ರೈಸ್ತರು, ಪಾರ್ಸಿ ಸೇರಿದಂತೆ ವಿವಿಧ ಧರ್ಮದ ಜನರಿಗೆ ದೇಶದ ನಾಗರಿಕತ್ವ ಕೊಡುವ ಕಾಯ್ದೆ ಇದಾಗಿದೆ. ಯಾರ ಪೌರತ್ವ ಕಿತ್ತುಕೊಳ್ಳುವುದಲ್ಲ’ ಎಂದರು.

‘ತುಕಡೇ ತುಕಡೇ ಗ್ಯಾಂಗ್‌ನಿಂದ ದೆಹಲಿಯ ಜೆಎನ್‌ಯುಗೆ ಕೆಟ್ಟ ಹೆಸರು ಬಂದಿದೆ. ದೇಶ ವಿರೋಧ ಘೋಷಣೆ ಹಾಕಿರುವ ಈ ಗ್ಯಾಂಗ್‌ನ ಸದಸ್ಯರು 15 ವರ್ಷಗಳಿಂದ ಅದೇ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾರೆ. ಇಂತಹ ಬೆರಳಣಿಕೆಯಷ್ಟು ಜನರು ಮಾತ್ರ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು 70 ವರ್ಷ ಕಳೆದರೂ ಅನೇಕರು ನಮ್ಮ ದೇಶದೊಳಗೆ ನುಸುಳಿ ನೆಲೆಯೂರಿದ್ದಾರೆ. ನಮ್ಮ ಮನೆಗಳಿಗೆ ಬರುವ ನೆಂಟರನ್ನು ಹೆಚ್ಚೆಂದರೆ ವಾರಗಳ ಕಾಲ ಇಟ್ಟುಕೊಳ್ಳುತ್ತೇವೆ. ನಂತರ ಅವರನ್ನು ಕಳುಹಿಸಿ ಕೊಡುತ್ತೇವೆ. ಅದೇ ರೀತಿ ಈಗ, ದೇಶದಲ್ಲಿ ಅಕ್ರಮವಾಗಿ ನುಸುಳಿ ಬಂದಿರುವವರನ್ನು ಹೊರಗೆ ಕಳುಹಿಸಬೇಕಾಗಿದೆ’ ಎಂದರು.

‘ಬೆಳಗಾವಿ ಸೇರಿದಂತೆ ಅನೇಕ ಕಡೆಗಳಲ್ಲಿ ಅಕ್ರಮ ವಲಸಿಗರು ಇದ್ದಾರೆ. ದೇಶದ ಮುಸ್ಲಿಂರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇದು ಅಲ್ಪಸಂಖ್ಯಾತರ ವಿರೋಧಿ ಕಾಯ್ದೆ ಅಂತ ಕಾಂಗ್ರೆಸ್‌ನವರು, ಮಮತಾ ಬ್ಯಾನರ್ಜಿ ಬೊಬ್ಬೆ ಹಾಕುತ್ತಿರುವುದು ಸತ್ಯಕ್ಕೆ ದೂರವಾದ ಮಾತು’ ಎಂದರು. 

ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಮುಖಂಡರಾದ ವಿ.ಐ. ಪಾಟೀಲ, ಸಂಜಯ ಪಾಟೀಲ, ಬೆಳಗಾವಿ ವಿಭಾಗ ಉಸ್ತುವಾರಿ ಈರಣ್ಣ ಕಡಾಡಿ, ಇತರರು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು