ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ನೆಚ್ಚಿನ ಬಸಪ್ಪಣ್ಣ ಅರಗಾವಿ ಕೆರೆ ಭರ್ತಿ

ಅರಣ್ಯ ಪ್ರದೇಶದಲ್ಲಿ ಸಮೃದ್ಧ ಮಳೆಗೆ ತುಂಬಿದ ಕೆರೆ, ನಿತ್ಯ ನೂರಾರು ಜನ ಭೇಟಿ
Published 12 ಆಗಸ್ಟ್ 2023, 6:21 IST
Last Updated 12 ಆಗಸ್ಟ್ 2023, 6:21 IST
ಅಕ್ಷರ ಗಾತ್ರ

ಪ್ರಸನ್ನ ಕುಲಕರ್ಣಿ

ಖಾನಾಪುರ: ತಾಲ್ಲೂಕಿನ ಗುಂಜಿ ಮತ್ತು ಹಲಸಿ ಭಾಗದ ಅರಣ್ಯ ಪ್ರದೇಶದಲ್ಲಿ ಸಮೃದ್ಧ ಮಳೆಯಾಗಿದ್ದರಿಂದ ನಂದಗಡ ಗ್ರಾಮದ ದಕ್ಷಿಣ ದಿಕ್ಕಿನಲ್ಲಿರುವ ಬಸಪ್ಪಣ್ಣ ಅರಗಾವಿ ಕೆರೆ ಭರ್ತಿಯಾಗಿದೆ. ನಯನ ಮನೋಹರ ಕೆರೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳವಾದ ಐತಿಹಾಸಿಕ ಗ್ರಾಮ ನಂದಗಡದಿಂದ 4 ಕಿ.ಮೀ ದೂರದಲ್ಲಿ ದಟ್ಟ ಅರಣ್ಯದ ನಡುವೆ ಹರಡಿಕೊಂಡಿರುವ ಈ ಕೆರೆ, ನಂದಗಡ ಮತ್ತು ಅಕ್ಕಪಕ್ಕದ ಗ್ರಾಮಗಳ ಜನರ ನೆಚ್ಚಿನ ಪ್ರೇಕ್ಷಣೀಯ ತಾಣವಾಗಿದೆ. 40 ಎಕರೆಗಳಷ್ಟು ವಿಸ್ತಾರವಾಗಿರುವ ಕೆರೆಯ ಮೂರು ಭಾಗ ದಟ್ಟ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ಸುತ್ತುವರೆದಿದೆ. ಒಂದು ಭಾಗದಲ್ಲಿ ಫಲವತ್ತಾದ ಕೃಷಿ ಜಮೀನುಗಳಿವೆ.

ಫಲವತ್ತಾದ ಜಮೀನುಗಳಿರುವ ಭಾಗ ಈ ಕೆರೆಗಿಂತ ಕೆಳಮಟ್ಟದಲ್ಲಿದೆ. ಹೀಗಾಗಿ ಕೆರೆಯ ಕೆಳಭಾಗದ ರೈತರ ಅನುಕೂಲಕ್ಕಾಗಿ 1960-70ರ ದಶಕದಲ್ಲಿ ಆಗಿನ ಶಾಸಕ ಬಸಪ್ಪಣ್ಣ ಅರಗಾವಿ ಅವರ ಮುತುವರ್ಜಿಯಿಂದ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಾಲುವೆ ನಿರ್ಮಾಣ ಮಾಡಿಸಿದ್ದಾರೆ. ಜೊತೆಗೆ ಕೆರೆಗೆ ತಡೆಗೋಡೆ ನಿರ್ಮಿಸಿ ಬೇಸಿಗೆಯಲ್ಲೂ ಕೆರೆಯ ನೀರನ್ನು ಕೃಷಿಗಾಗಿ ಬಳಸಲು ಅನುಕೂಲ ಕಲ್ಪಿಸಿ ಕೊಟ್ಟಿದ್ದದರಿಂದ ಇದು ನಂದಗಡ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳ ರೈತರ ಪಾಲಿಗೆ ಸಂಜೀವಿನಿಯಾಗಿದೆ.

ಕೆರೆಗೆ ಕಾಯಕಲ್ಪ ನೀಡಿರುವ ಕಾರಣ ನಂದಗಡ ಕೆರೆಗೆ ಬಸಪ್ಪಣ್ಣ ಅರಗಾವಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ನಂದಗಡ ಕೆರೆಯ ತಡೆಗೋಡೆಯನ್ನು ಬಳಸಿ ಕೆರೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತೆರಳಿ ಕೆರೆಯ ಸುತ್ತಮುತ್ತಲಿನ ನಿಸರ್ಗದತ್ತವಾಗಿ ಸೌಂದರ್ಯವನ್ನು ಆಸ್ವಾದಿಸಬಹುದು.‌

ಕೆರೆಯ ಅಕ್ಕಪಕ್ಕದ ಪ್ರದೇಶದಲ್ಲಿ ಅಡುಗೆ ಮಾಡಿ ಊಟ ಮಾಡಲು ಅನೂಕೂಲತೆ ಇದೆ. ಕೆರೆಯಲ್ಲಿ ಈಜಲು ಮತ್ತು ಸ್ನಾನ ಮಾಡಲು ಅವಕಾಶವಿದೆ. ಕೆರೆಯ ತಡೆಗೋಡೆಯ ಕೆಳಭಾಗದಲ್ಲಿ ಕೆರೆ ತುಂಬಿ ಹರಿಯುವ ನೀರಿನಲ್ಲಿ ಆಟವಾಡಬಹುದು. ಈ ಕಾರಣದಿಂದ ನಂದಗಡ ಕೆರೆ ನಿಸರ್ಗಪ್ರಿಯರ ಪ್ರೇಕ್ಷಣೀಯ ಅಚ್ಚುಮೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ.

ನಿರ್ವಹಣೆಗೆ ಮನವಿ: ಕೆರೆಯ ಕೆಳಭಾಗದ ಕಾಲುವೆಗಳು ಹಾಳಾಗಿದ್ದರಿಂದ ಕೆರೆ ತುಂಬಿದ ಬಳಿಕ ಹರಿಯುವ ನೀರು ರೈತರ ಜಮೀನುಗಳಿಗೆ ನುಗ್ಗುತ್ತದೆ. ಕಾಲುವೆಗಳ ನಿರ್ವಹಣೆಯನ್ನು ಸಂಬಂಧಪಟ್ಟ ಇಲಾಖೆಯವರು ಕೈಗೊಳ್ಳದ ಕಾರಣ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆರೆಯ ಕಾಲುವೆಯಲ್ಲಿ ವರ್ಷದ ಎಲ್ಲ ತಿಂಗಳುಗಳಲ್ಲೂ ನೀರು ಹರಿಯುವ ಕಾರಣ ಕಾಲುವೆಯ ಅಕ್ಕಪಕ್ಕದ ಕೃಷಿ ಜಮೀನುಗಳು ಫಲವತ್ತತೆಯಿಂದ ಕೂಡಿವೆ. ಕಾಲುವೆ ಪಾತ್ರದ ಹಲವು ರೈತರು ಈ ಕಾಲುವೆಯ ಮೂಲಕ ಹರಿದುಬರುವ ನೀರನ್ನು ಬಳಸಿ ಬೇಸಿಗೆಯ ಅವಧಿಯಲ್ಲೂ ಕಬ್ಬು, ಭತ್ತ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಾಲುವೆಯಲ್ಲಿ ಸಧ್ಯ ದೊಡ್ಡ ಬಿರುಕುಗಳು ನಿರ್ಮಾಣವಾಗಿವೆ. ಕಾಲುವೆಯ ತಡೆಗೋಡೆಗಳು ಕುಸಿದಿವೆ. ನಿರ್ವಹಣೆಯ ಕೊರತೆಯಿಂದಾಗಿ ಈ ಕಾಲುವೆಯ ಅಕ್ಕಪಕ್ಕದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ.

ಕೆರೆಯ ಕಾಲುವೆಯ ಮೇಲೆ ಹರಿಯಬೇಕಿದ್ದ ನೀರು ಪಕ್ಕದ ಜಮೀನುಗಳಲ್ಲಿ ಹರಿದುಹೋಗುತ್ತಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಕಾಲುವೆ ದುರಸ್ತಿಗೊಳಿಸಬೇಕು

-ವಿನೋದ ಪಾಟೀಲ ರೈತ ನಂದಗಡ

ನಂದಗಡ ಕೆರೆಯ ನಿಸರ್ಗ ಮುದ ನೀಡುತ್ತದೆ. ಕೆರೆಗೆ ಬರುವ ರಸ್ತೆ ಹಾಳಾಗಿದೆ. ಪ್ರವಾಸಿಗರಿಗೆ ಮೂಲ ಸೌಲಭ್ಯಗಳ ಕೊರತೆಯಿದೆ. ಇವುಗಳನ್ನು ಪೂರೈಸಬೇಕು

-ನಾಗರಾಜ ಗಣೇಶಗುಡಿ ಬೆಳಗಾವಿ ‍ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT