ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಶ್ಚಿತಾರ್ಥವಾಗಿದ್ದ ಯುವತಿಯೊಂದಿಗೆ ಸಲುಗೆ ಬೆಳೆಸಿದ್ದಕ್ಕೆ ಬರ್ಬರ ಕೊಲೆ: ಬಂಧನ

Last Updated 27 ನವೆಂಬರ್ 2022, 3:04 IST
ಅಕ್ಷರ ಗಾತ್ರ

ಬೆಳಗಾವಿ: ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯ ಜತೆಗೆ ಸಲುಗೆ ಬೆಳೆಸಿದ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಕೆಲವರಿಗೆ ಹುಡುಕಾಟ ನಡೆಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಶನಿವಾರ ವಿವರ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ‘ಗೋಕಾಕ ತಾಲ್ಲೂಕಿನ ಘಟಪ್ರಭಾದ ಯುವಕ ಸೋಮಲಿಂಗ ಸುರೇಶ ಕಂಬಾರ (20) ಅವರನ್ನು ನವೆಂಬರ್‌ 13ರಂದು ಕೊಲೆ ಮಾಡಲಾಗಿತ್ತು. ಶಿಂಗಳಾಪುರ ಸೇತುವೆಯಲ್ಲಿ ಅವರ ಶವ ದೊರಕಿತ್ತು. ಯುವಕನ ಸಾಮಾಜಿಕ ಜಾಲತಾಣಗಳ ಸಂಪರ್ಕವನ್ನು ಜಾಲಾಡಿದ ಗೋಕಾಕ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದರು.

ಪ್ರಕರಣದ ವಿವರ: ಐಟಿಐ ಪಾಸ್‌ ಆಗಿರುವ ಸೋಮಲಿಂಗ ಗೋವಾದಲ್ಲಿ ಕೆಲಸ ಮಾಡುತ್ತಿದ್ದ. ಆರು ತಿಂಗಳ ಹಿಂದಷ್ಟೇ ಮರಳಿ ಬಂದು, ಹಿಂಡಲಗಾ ಬಳಿಯ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ನವೆಂಬರ್ 8ರಂದು ರಾತ್ರಿ 11 ಗಂಟೆ ಸುಮಾರಿಗೆ ಫೋನ್‌ ಬಂದಿದೆ ಎಂದು ಹೇಳಿ ಹೋದ ಯುವಕ ಮರಳಿ ಬಂದಿರಲಿಲ್ಲ. ಮಗ ಕಾಣೆಯಾದ ಬಗ್ಗೆ ತಾಯಿ ಘಟಪ್ರಭಾ ಠಾಣೆಗೆ ದೂರು ನೀಡಿದ್ದರು.

ನ.13ರಂದು ಶಿಂಗಳಾಪುರ ಸೇತುವೆ ಬಳಿ ಯುವಕನ ಶವ ಪತ್ತೆಯಾಗಿತ್ತು. ಕೈ–ಕಾಲು ಕಟ್ಟಿ ಕುತ್ತಿಗೆ ಬಿಗಿದು ಕೊಲೆ ಮಾಡಿದ ಸ್ಥಿತಿಯಲ್ಲಿತ್ತು. ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಗೋಕಾಕ ಡಿಎಸ್‍ಪಿ ಮನೋಜಕುಮಾರ ನಾಯಿಕ್ ನೇತೃತ್ವದ ತಂಡ ಎರಡು ವಾರಗಳಲ್ಲೇ ಪ್ರಕರಣ ಭೇದಿಸಿದೆ.

ಮೃತ ಸೋಮಲಿಂಗ ಸಾಮಾಜಿಕ ಜಾಲತಾಣದ ಮೂಲಕ ಯುವತಿಯೊಬ್ಬರ ಪರಿಚಯ ಮಾಡಿಕೊಂಡಿದ್ದ. ಮೆಸೇಜ್‌, ವಿಡಿಯೊ ಕಾಲ್‌ ಮೂಲಕ ಸಲುಗೆ ಬೆಳೆಸಿದ್ದ. ಯುವತಿಗೆ ಇದಕ್ಕೂ ಮುಂಚೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಇವರಿಬ್ಬರ ನಡುವಿನ ಸಲುಗೆಯ ಸಂಗತಿಯ ವರನಿಗೆ ಗೊತ್ತಾಯಿತು. ಇದನ್ನು ಹುಡುಗಿಯ ಮನೆಯವರಿಗೂ ತಿಳಿಸಿದ್ದ.

ಯುವತಿಯ ಮನೆಯವರು ಆಕೆಯ ಮೂಲಕವೇ ನ. 8ರಂದು ರಾತ್ರಿ 11ಕ್ಕೆ ಫೋನ್‌ ಮಾಡಿಸಿ ಕರೆಸಿದ್ದರು. ಯುವಕನನ್ನು ಘಟಪ್ರಭಾಗೆ ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಕಟ್ಟಿ ಹಾಕಿದ್ದರು. ಮಾರನೇ ದಿನ ಸಮೀ‍ಪದ ದುರದುಂಡಿ ಫಾರ್ಮ್‌ಹಭಸ್‌ ಎಂಬಲ್ಲಿ ಕರೆದುಕೊಂಡು ಹೋಗಿ ವೈರಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ಬಳಿಕ ಶಿಂಗಳಾಪುರ ಸೇತುವೆ ಬಳಿ ಶವ ತಂದು ಹಾಕಿದ್ದರು.

ತನಿಖೆಯ ದಾರಿ ತಪ್ಪಿಸಬೇಕು ಎಂಬ ಉದ್ದೇಶದಿಂದ ಯುವಕನ ಮೊಬೈಲ್‌ ತೆಗೆದುಕೊಂಡ ಆರೋಪಿಗಳು, ಅದರ ಡಿ.ಪಿ.ಗೆ ಬೇರೊಬ್ಬ ಯುವತಿಯ ಫೋಟೊ ಹಾಕಿದ್ದರು. ಆ ಯುವತಿಯಿಂದಲೇ ಕೊಲೆ ನಡೆದಿದೆ ಎಂದು ಬಿಂಬಿಸುವ ಉಪಾಯ ಮಾಡಿದ್ದರು. ರೈಲಿನಲ್ಲಿ ಈ ಮೊಬೈಲ್‌ ಬಿಟ್ಟು ಹೋಗಿದ್ದರು.

‍ಪ್ರಯಾಣಿಕರೊಬ್ಬರಿಗೆ ಈ ಮೊಬೈಲ್‌ ಸಿಕ್ಕಿದ್ದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಮೊದಲು ಮೀರಜ್‌ನಲ್ಲಿ ರಿಂಗ್‌ ಆದ ಮೊಬೈಲ್‌ ನಂತರ ಖಾನಾಪುರದಲ್ಲಿ, ಬಳಿಕ ಬೆಂಗಳೂರಿನಲ್ಲಿ ರಿಂಗ್‌ ಆಗಿದೆ. ಮೊಬೈಲ್‌ ಪತ್ತೆ ಮಾಡುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.

ಎಸ್ಪಿ ಡಾ.ಸಂಜೀವ ಪಾಟೀಲ ಹಾಗೂ ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ ಅವರು ತನಿಖಾ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT