ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Teachers' Day: ದತ್ತು ಪಡೆದ ಶಾಲೆಗೆ ವೇತನ ಭರಿಸುವ ಶಿಕ್ಷಕಿ ಆಸ್ಮಾ ನದಾಫ್‌

Published : 5 ಸೆಪ್ಟೆಂಬರ್ 2024, 5:01 IST
Last Updated : 5 ಸೆಪ್ಟೆಂಬರ್ 2024, 5:01 IST
ಫಾಲೋ ಮಾಡಿ
Comments

ಬೆಳಗಾವಿ: ಇಲ್ಲೊಬ್ಬ ಶಿಕ್ಷಕಿ ತಾವು ದುಡಿಯುವ ಶಾಲೆ ಅಭಿವೃದ್ಧಿಗೆ ನೆರವಾಗುವ ಜತೆಗೆ, ಮತ್ತೊಂದು ಸರ್ಕಾರಿ ಶಾಲೆ ಶೈಕ್ಷಣಿಕವಾಗಿ ದತ್ತು ಪಡೆದಿದ್ದಾರೆ. ಅಲ್ಲಿ ಕೆಲಸ ಮಾಡುವ ಶಿಕ್ಷಕಿ, ಆಯಾ ಅವರ ವೇತನ ಸ್ವತಃ ತಾವೇ ಭರಿಸಿ, ಬಡ ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿದ್ದಾರೆ.

ಈ ಬಾರಿ ಪ್ರಾಥಮಿಕ ಶಾಲೆ ವಿಭಾಗದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನವಾಗಿರುವ ತಾಲ್ಲೂಕಿನ ಅಂಬೇವಾಡಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಆಸ್ಮಾ ನದಾಫ್‌ (ಆಶಾ ಪೋತದಾರ) ಶೈಕ್ಷಣಿಕ ಕಳಕಳಿ ಇದು.

ಅವರು ಅಂಬೇವಾಡಿ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕಿ. 2024ರ ಮಾರ್ಚ್‌ನಲ್ಲಿ ಇಲ್ಲಿನ ಪೊಲೀಸ್‌ ಕೇಂದ್ರಸ್ಥಾನದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಸಂಖ್ಯೆ 24ರ ವಾರ್ಷಿಕ ಸ್ನೇಹ ಸಮ್ಮಿಲನಕ್ಕೆ ಅತಿಥಿಯಾಗಿ ಆಗಮಿಸಿದ್ದರು. ‘ನಾವು ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಯೋಜಿಸಿದ್ದೇವೆ. ಅಲ್ಲಿ ಕೆಲಸ ಮಾಡುವವರಿಗೆ ಸಂಬಳ ಕೊಡಲು ದಾನಿಗಳನ್ನು ಹುಡುಕುತ್ತಿದ್ದೇವೆ’ ಎಂದು ಶಿಕ್ಷಕರು ತಿಳಿಸಿದ್ದರು. ಆಗ, ‘ನಾನು ಈ ಶಾಲೆ ಶೈಕ್ಷಣಿಕವಾಗಿ ದತ್ತು ಪಡೆದು, ವೇತನ ಕೊಡುತ್ತೇನೆ’ ಎಂದು ಆಸ್ಮಾ ವಾಗ್ದಾನ ಮಾಡಿದ್ದರು.

ಇದರಿಂದ ಪ್ರೇರಣೆಗೊಂಡ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು, ಇದೇ ಜೂನ್‌ನಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿದ್ದಾರೆ. 33 ಮಕ್ಕಳು ಓದುತ್ತಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿರುವ ಇಬ್ಬರಿಗೆ ಆಸ್ಮಾ ಅವರೇ ಮಾಸಿಕ ₹10 ಸಾವಿರ ವೇತನ ಕೊಡುತ್ತಿದ್ದಾರೆ. ಅಲ್ಲದೆ, ಅಂಬೇವಾಡಿಯಲ್ಲಿ ಕಂಪ್ಯೂಟರ್‌ ಶಿಕ್ಷಣ ನೀಡುತ್ತಿರುವ ಅತಿಥಿ ಶಿಕ್ಷಕಿಯೊಬ್ಬರಿಗೆ ಸಹ ₹3,000 ಸಂಬಳ ಕೊಡುತ್ತಿದ್ದಾರೆ.

ನೆರವಾಗುವುದರಲ್ಲೇ ನನಗೂ ಖುಷಿ:

‘ನಿಪ್ಪಾಣಿ ತಾಲ್ಲೂಕಿನ ಮಮದಾಪುರದಲ್ಲಿ 2007ರಲ್ಲಿ ಸೇವೆ ಆರಂಭಿಸಿದೆ. 10 ವರ್ಷ ಕರ್ತವ್ಯ ನಿರ್ವಹಣೆ ನಂತರ, ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿಯಲ್ಲಿ ಮುಂದುವರಿಸಿದೆ. ನಾಲ್ಕು ವರ್ಷಗಳಿಂದ ಅಂಬೇವಾಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ದಾಖಲಾತಿ ಹೆಚ್ಚಳದ ಕಾರಣಕ್ಕೆ, 17 ವರ್ಷಗಳ ಸೇವಾವಧಿಯಲ್ಲಿ ನಾನು ಕೆಲಸ ಮಾಡಿದ ಕಡೆಯಲ್ಲೆಲ್ಲ 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಪ್ರತಿವರ್ಷ ಕಲಿಕಾ ಸಾಮಗ್ರಿ ಕೊಡಿಸುತ್ತಿದ್ದೇನೆ. ಅಂಬೇವಾಡಿ ಶಾಲೆಯಲ್ಲಿ ಸರ್ಕಾರ ನಿರ್ಮಿಸಿದ ಸ್ಮಾರ್ಟ್‌ಕ್ಲಾಸ್‌ಗೆ ₹50 ಸಾವಿರ ವ್ಯಯಿಸಿದ್ದೇನೆ. ಬಡ ಮಕ್ಕಳ ಶೈಕ್ಷಣಿಕ ಅಗತ್ಯ ಪೂರೈಸುತ್ತಿದ್ದೇನೆ. ಮಕ್ಕಳಿಗೆ ನೆರವಾಗುವುದರಲ್ಲೇ ನನಗೂ ಖುಷಿ’ ಎಂದು ಆಸ್ಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಶಸ್ತಿ ಜತೆಗೆ ನೀಡಲಾಗುವ ₹25 ಸಾವಿರ ನಗದು ಬಹುಮಾನವನ್ನು ನಾನು ಶೈಕ್ಷಣಿಕವಾಗಿ ದತ್ತು ಪಡೆದ ಶಾಲೆಯ ಸದ್ಬಳಕೆಗೆ ನೀಡಲಿದ್ದೇನೆ.
ಆಸ್ಮಾ ನದಾಫ್‌, ಶಿಕ್ಷಕಿ
ಶಿಕ್ಷಕಿ ಆಸ್ಮಾ ಸಿಬ್ಬಂದಿ ವೇತನ ಭರಿಸುತ್ತಿರುವುದರಿಂದ ಬಡ ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯಲು ಅನುಕೂಲವಾಗಿದೆ.
ಸಂಜಯ ಕೋಲಕಾರ, ಮುಖ್ಯಶಿಕ್ಷಕ
ಬೆಳಗಾವಿಯ ಪೊಲೀಸ್‌ ಕೇಂದ್ರಸ್ಥಾನದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿದ ಎಲ್‌ಕೆಜಿ ಯುಕೆಜಿ ತರಗತಿಯಲ್ಲಿ ಓದುತ್ತಿರುವ ಮಕ್ಕಳು 
ಬೆಳಗಾವಿಯ ಪೊಲೀಸ್‌ ಕೇಂದ್ರಸ್ಥಾನದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಿದ ಎಲ್‌ಕೆಜಿ ಯುಕೆಜಿ ತರಗತಿಯಲ್ಲಿ ಓದುತ್ತಿರುವ ಮಕ್ಕಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT