ಸೋಮವಾರ, ಮೇ 23, 2022
28 °C

ನಾಗಪುರದ ವಿಷ ಜಂತುಗಳು ಸಾಮರಸ್ಯ ಹಾಳು ಮಾಡುತ್ತಿವೆ: ಬಿ.ಕೆ ಹರಿಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸರ್ಕಾರದ ಕುಮ್ಮಕ್ಕಿನಿಂದಾಗಿ ರಾಜ್ಯದಲ್ಲಿ ಧರ್ಮ ಸಂಘರ್ಷ ನಡೆಯುತ್ತಿದೆ’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದಿಂದ ಜನಸಾಮಾನ್ಯರಿಗೆ ಒಳಿತಾಗುವ ಒಂದು ಕೆಲಸವೂ ನಡೆದಿಲ್ಲ. ಕೇವಲ ಬೊಗಳೆ ಭಾಷಣದಲ್ಲಿ ಆ ಸರ್ಕಾರದವರು ತೊಡಗಿದ್ದಾರೆ. ಅದನ್ನು ಪ್ರಶ್ನಿಸಿದವರನ್ನು ದೇಶದ್ರೋಹಿಗಳು ಎನ್ನುತ್ತಾರೆ’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಬೆಂಗಳೂರಿನಲ್ಲಿ ಎಂಎನ್‌ಸಿ ಕಂಪನಿಗಳು ಚೆನ್ನೈ, ಪುಣೆಯತ್ತ ಹೋಗುತ್ತಿವೆ. ರಾಜ್ಯ ಹಾಗೂ ರಾಷ್ಟ್ರಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ. ಅದನ್ನು ಮುಚ್ಚಿಟ್ಟುಕೊಳ್ಳುವುದಕ್ಕಾಗಿ ಹಿಂದುತ್ವದ ವಿಷಯಗಳನ್ನು ಮುಂದಿಟ್ಟುಕೊಂಡು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಇದೆಲ್ಲವನ್ನೂ ಜನರು ಅರ್ಥ ಮಾಡಿಕೊಳ್ಳುತ್ತಿದ್ದಾರೆ’ ಎಂದರು.

‘ಸಸ್ಯಾಹಾರಿಗಳು ಮೊಟ್ಟೆ, ಮಾಂಸ, ಹಲಾಲ್ ಕಟ್, ಜಟ್ಕಾ ಕಟ್ ಎಂದೆಲ್ಲಾ ಮಾತನಾಡುತ್ತಿದ್ದಾರೆ. ಅವರು, ಗೋಮಾಂಸ ರಫ್ತು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಸ್ನೇಹಿತರಾದ ಅಂಬಾನಿ– ಅದಾನಿ ಅವರ ಕಂಪನಿಗಳ ಎದುರು ಪ್ರತಿಭಟನೆ ನಡೆಸಲಿ’ ಎಂದು ಸವಾಲೆಸೆದರು.

‘ಧಾರವಾಡದಲ್ಲಿ ಕಲ್ಲಂಗಡಿ ಹಣ್ಣು ಮಾರುತ್ತಿದ್ದ ಬಡ ವ್ಯಾಪಾರಿಯ ಅಂಗಡಿ ಮೇಲೆ ದಾಳಿ ಮಾಡಿದ್ದಾರಲ್ಲಾ, ಅವರಷ್ಟು ರಣಹೇಡಿಗಳು ಯಾರೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬ್ರಿಟಿಷರ ಕಾಲದಲ್ಲಿ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಸಂಘ ಪರಿವಾರದವರು ಇಂದು ದೇಶಪ್ರೇಮದ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ನಾಗಪುರದ ವಿಷ ಜಂತುಗಳು (ಆರ್‌ಎಸ್‌ಎಸ್‌) ದೇಶದ ಕೋಮು ಸೌಹಾರ್ದ ಹಾಳು ಮಾಡುತ್ತಿವೆ. ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಲಾಗುತ್ತಿದೆ. ಬಹುಸಂಖ್ಯಾತರನ್ನು ಎತ್ತಿ ಕಟ್ಟವ ಕೆಲಸ ನಡೆಯುತ್ತಿದೆ. ಇದು ಮನುಸಂಸ್ಕೃತಿಯ ಒಂದು ಭಾಗ’ ಎಂದು ದೂರಿದರು.

‘ಕೋಮು ಸೌಹಾರ್ದ ಹಾಳು ಮಾಡುವ ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಗಲಟ್ಟಿ ಇದ್ದರು.

ಷಡ್ಯಂತ್ರ ಖಂಡನೀಯ

ದಲಿತರು, ಮಹಿಳೆಯರು, ಹಿಂದುಳಿದವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಮೀಸಲಾತಿ ರದ್ದುಪಡಿಸಲು ಯತ್ನ ನಡೆದಿದೆ. ಬಿಜೆಪಿ, ಸಂಘ ಪರಿವಾರದ ನಾಯಕರ ಈ ಷಡ್ಯಂತ್ರ ಖಂಡನೀಯ.

–ಬಿ.ಕೆ. ಹರಿಪ್ರಸಾದ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು