ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂ.ಕೆ. ಹುಬ್ಬಳ್ಳಿ ಸಹಕಾರಿ ಸಕ್ಕರೆ ಕಾರ್ಖಾನೆ ಮುಚ್ಚಿಸಲು ಖಾಸಗಿಯವರ ಯತ್ನ’

ಕಾರ್ಖಾನೆಯ ನಿರ್ದೇಶಕ, ರೈತ ಮುಖಂಡ ಬಾಬಾಗೌಡ ಪಾಟೀಲ ಗಂಭೀರ ಆರೋಪ;
Last Updated 8 ಜುಲೈ 2019, 15:37 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿರುವ ಎಂ.ಕೆ. ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಮುಚ್ಚಿಹಾಕಲು ಕೆಲವು ಖಾಸಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಪ್ರಯತ್ನಿಸುತ್ತಿದ್ದಾರೆ’ ಎಂದು ಕಾರ್ಖಾನೆಯ ನಿರ್ದೇಶಕ, ರೈತ ಮುಖಂಡ ಬಾಬಾಗೌಡ ಪಾಟೀಲ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರಿಗೆ ಕಬ್ಬಿನ ಬಾಕಿ ಬಿಲ್‌ ನೀಡಿಲ್ಲ ಎನ್ನುವುದನ್ನು ನೆಪವಾಗಿಟ್ಟುಕೊಂಡು ನಮ್ಮ ಕಾರ್ಖಾನೆಯ 29,495 ಕ್ವಿಂಟಲ್‌ ಸಕ್ಕರೆಯನ್ನು ಜಪ್ತಿ ಮಾಡಲಾಗಿದೆ. ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಕಾರ್ಖಾನೆಗಳಿದ್ದರೂ, ಕೇವಲ ನಮ್ಮ ಕಾರ್ಖಾನೆಯ ಮೇಲಷ್ಟೇ ಏಕೆ ಕ್ರಮಕೈಗೊಳ್ಳಲಾಗಿದೆ? ಇದರ ಹಿಂದೆ ಖಾಸಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಕೈವಾಡವಿದೆ’ ಎಂದು ಆರೋಪಿಸಿದರು.

‘ಕಳೆದ ವರ್ಷ ಜಪ್ತಿ ಮಾಡಿಕೊಂಡಿದ್ದ ಸಕ್ಕರೆಯ ಗುಣಮಟ್ಟ ಹಾಳಾಗುತ್ತಿದೆ. ಈಗ ಇದರ ಮಾರಾಟ ಸಾಧ್ಯವಿಲ್ಲ. ಇದಕ್ಕೆ ಯಾರು ಹೊಣೆ? ಜಪ್ತಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ, ರೈತರಿಗೆ ಉಂಟಾದ ನಷ್ಟವನ್ನು ಭರ್ತಿ ಮಾಡಿಸಿ ಕೊಡುವಂತೆ ನ್ಯಾಯಾಲಯಕ್ಕೆ ಮೊರೆಹೋಗಲು ಚಿಂತನೆ ನಡೆದಿದೆ’ ಎಂದು ತಿಳಿಸಿದರು.

‘ಕಳೆದ ವರ್ಷ ಎಫ್‌ಆರ್‌ಪಿ ದರದಂತೆ ರೈತರಿಗೆ ಕಬ್ಬಿನ ದರ ಪಾವತಿಸಿದ್ದೇವೆ. ಕೇವಲ ₹ 5.24 ಕೋಟಿ ಮಾತ್ರ ಬಾಕಿ ಇದೆ. ಇದಕ್ಕೆ ಕಾರ್ಖಾನೆಯ ಅಂದಿನ ವ್ಯವಸ್ಥಾಪಕ ನಿರ್ದೇಶಕರೇ ಕಾರಣ. ಇದನ್ನು ಗಣನೆಗೆ ತೆಗೆದುಕೊಳ್ಳದ ಅಧಿಕಾರಿಗಳು, ಗೋದಾಮಿನಲ್ಲಿದ್ದ ಸಕ್ಕರೆಯನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆದರೆ, ನೂರಾರು ಕೋಟಿಗಳಷ್ಟು ಬಾಕಿ ಇಟ್ಟುಕೊಂಡಿರುವ ಹಲವು ಖಾಸಗಿ ಕಾರ್ಖಾನೆಗಳ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಅಧಿಕಾರಿಗಳು ಅವರ ಚೇಲಾಗಳಂತೆ ವರ್ತಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ನಮ್ಮ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಕಬ್ಬು ಇದೆ. ಹೆಚ್ಚಿನ ಇಳುವರಿ ಬರುತ್ತದೆ. ಅದೇ ಕಾರಣಕ್ಕಾಗಿ, ಇಲ್ಲಿನ ಕಬ್ಬು ಪಡೆದುಕೊಳ್ಳುವ ಉದ್ದೇಶದಿಂದ ಸುತ್ತಮುತ್ತಲಿನ ಖಾಸಗಿ ಕಾರ್ಖಾನೆಯವರು ನಮಗೆ ತೊಂದರೆ ಕೊಡುತ್ತಿದ್ದಾರೆ. ನಮ್ಮ ಕಾರ್ಖಾನೆ ಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ಸೂಚಿಸಿದಂತೆ ₹ 1,950ರ ದರದಂತೆ 50,000 ಕ್ವಿಂಟಲ್‌ ಸಕ್ಕರೆಯನ್ನು ರಫ್ತು ಮಾಡಿದ್ದೇವೆ. ಆಗ ಮಾರುಕಟ್ಟೆಯಲ್ಲಿ ₹ 3,100 ದರವಿತ್ತು. ಈ ದರದ ನಡುವಿನ ವ್ಯತ್ಯಾಸವನ್ನು ಕೇಂದ್ರ ಸರ್ಕಾರ ತುಂಬಿಕೊಡಬೇಕು. ಸುಮಾರು ₹5 ಕೋಟಿ ಬರಬೇಕಾಗಿದೆ. ಆದರೆ, ಇದುವರೆಗೆ ಹಣ ಬಿಡುಗಡೆಯಾಗಿಲ್ಲ. ಇದಕ್ಕೆ ಯಾರು ಹೊಣೆ?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT